ಸ್ಟಾರ್ ಹೊಟೇಲ್ ಖರ್ಚನ್ನು ಸ್ವಂತ ಹಣದಿಂದ ಭರಿಸುತ್ತೇನೆ, ಸರ್ಕಾರದಿಂದ ಅಲ್ಲ: ಬಿಜೆಪಿ ನಾಯಕರಿಗೆ ಸಿಎಂ ತಿರುಗೇಟು

ತಮ್ಮ ಗ್ರಾಮ ವಾಸ್ತವ್ಯಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರಿನ ಐಶಾರಾಮಿ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ತಮ್ಮ ಗ್ರಾಮ ವಾಸ್ತವ್ಯಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರಿನ ಐಶಾರಾಮಿ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ರೂಂ ಮಾಡಿಕೊಂಡು ಉಳಿದುಕೊಳ್ಳುತ್ತಾರೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ ನಾಯಕರಿಂದ ಒಳಗೊಂಡಂತೆ ಹಲವರು ಟೀಕಿಸುತ್ತಾರೆ. 
ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಇವುಗಳಿಗೆಲ್ಲಾ ತಲೆಕೆಡಿಸಿಕೊಂಡಿಲ್ಲ. ತಮ್ಮ ಜೆ ಪಿ ನಗರದ ಮನೆಯಲ್ಲಿ ನೆಲೆಸಿದ್ದರೂ ಕೂಡ ಕುಮಾರಸ್ವಾಮಿಯವರ ವ್ಯವಹಾರಗಳು, ರಾಜಕೀಯ ಚಟುವಟಿಕೆಗಳೆಲ್ಲ ನಡೆಯುವುದು ಬೆಂಗಳೂರಿನ ಪ್ರತಿಷ್ಠಿತ 5 ಸ್ಟಾರ್ ಹೊಟೇಲ್ ತಾಜ್ ವೆಸ್ಟ್ ಎಂಡ್ ನ ರೂಂನಿಂದ.
ಈ ಬಗ್ಗೆ ಮೊನ್ನೆ ರಾಯಚೂರಿನಲ್ಲಿ ತಮ್ಮ ಹೊಟೇಲ್ ವಾಸ್ತವ್ಯವನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ. ಜೀವನಶೈಲಿಯ ಆಯ್ಕೆ ನನ್ನ ವೈಯಕ್ತಿಕ ನಿರ್ಧಾರ, ಈ ಬಗ್ಗೆ ಟೀಕಿಸುವವರಿಗೆ ನಾನು ವಿವರಣೆ ನೀಡುವ ಅಗತ್ಯವಿಲ್ಲ. ತಮ್ಮ ವೈಯಕ್ತಿಕ ಜೀವನದಲ್ಲಿ ಮಾಧ್ಯಮಗಳೇಗೆ ತಲೆ ಹಾಕುವುದು, ಹೊಟೇಲ್ ನಲ್ಲಿ ತಾವು ಉಳಿದುಕೊಂಡ ಖರ್ಚನ್ನು ತಮ್ಮ ವೈಯಕ್ತಿಕ ಹಣದಿಂದ ಭರಿಸುತ್ತೇನೆಯೇ ಹೊರತು ರಾಜ್ಯ ಸರ್ಕಾರದ ಖಜಾನೆಯಿಂದ ಅಲ್ಲ ಎಂದು ಸಹ ಕಿಡಿಕಾರಿದ್ದಾರೆ. 
ನನ್ನ ವೈಯಕ್ತಿಕ ಖರ್ಚುಗಳನ್ನು ಸರ್ಕಾರದಿಂದ ಭರಿಸಬೇಕೆಂದು ಎಂದಾದರೂ ಕೇಳಿದ್ದೇನೆಯೇ? ಅದು ನನ್ನ ವೈಯಕ್ತಿಕ ವಿಷಯ, ನನ್ನ ವೈಯಕ್ತಿಕ ಕೆಲಸಗಳು, ಚಟುವಟಿಕೆಗಳ ಬಗ್ಗೆ ಪ್ರಶ್ನೆ ಮಾಡಲು ಅವರ್ಯಾರು? ನನಗೆ ಯಾರೂ ಸರ್ಟಿಫಿಕೇಟ್ ಕೊಡುವ ಅವಶ್ಯಕತೆಯಿಲ್ಲ. ನನ್ನ ವಿವೇಚನೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಮಣ್ಣಿನ ಮಗ ಎಂದು ಹೇಳಿಕೊಂಡು ಸ್ಟಾರ್ ಹೊಟೇಲ್ ನಲ್ಲಿ ಹೋಗಿ ಉಳಿದುಕೊಳ್ಳುತ್ತಾರೆ. ಗ್ರಾಮ ವಾಸ್ತವ್ಯದಲ್ಲಿ ಕೂಡ ಸಿಎಂ ಕುಮಾರಸ್ವಾಮಿ ತಮಗೆ ತಕ್ಕಂತೆ ವಾಸ್ತವ್ಯ ಹೂಡುವ ಸರ್ಕಾರಿ ಶಾಲೆಗಳಲ್ಲಿ ದುಬಾರಿ ಬಾತ್ ರೂಂ ಮತ್ತು ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರುಗಳು ಟೀಕಿಸಿದ್ದರು. 
ಇದಕ್ಕೆ ಉತ್ತರಿಸಿರುವ ಸಿಎಂ ಕುಮಾರಸ್ವಾಮಿ, ದುಬಾರಿ ಶೌಚಾಲಯ, ಬಾತ್ ರೂಂ ಕಟ್ಟಿಸಿದುದರಲ್ಲಿ ತಪ್ಪೇನಿದೆ, ಅದನ್ನೇನು ನಾನು ನನ್ನ ಮನೆಗೆ ಹೊತ್ತುಕೊಂಡು ಹೋಗುತ್ತೇನೆಯೇ? ನನ್ನ ಗ್ರಾಮ ವಾಸ್ತವ್ಯ ಮುಗಿದ ಮೇಲೆ ಅದು ಶಾಲಾ ಮಕ್ಕಳಿಗೆ ಬಳಕೆಯಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com