25 ವರ್ಷ ದಾಟಿದವರು ಚುನಾವಣೆಗೆ ಸ್ಪರ್ಧಿಸಲು ಸ್ವತಂತ್ರರು: ನಿಖಿಲ್ ಪರ ಎಸ್.ಎಂ ಕೃಷ್ಣ ಪರೋಕ್ಷ ಬ್ಯಾಟಿಂಗ್!

ಕುಟುಂಬ ರಾಜಕಾರಣ ಮಾಡಬಾರದು ಎಂಬ ನಿರ್ಬಂಧ ರಾಜ್ಯಾಂಗದಲ್ಲಿ ಇಲ್ಲ. ದೇವೇಗೌಡರ ಕುಟುಂಬ ವರ್ಗದವರು ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿ ...
ಎಸ್.ಎಂ ಕೃಷ್ಣ
ಎಸ್.ಎಂ ಕೃಷ್ಣ
ಬೆಂಗಳೂರು: ಕುಟುಂಬ ರಾಜಕಾರಣ ಮಾಡಬಾರದು ಎಂಬ ನಿರ್ಬಂಧ ರಾಜ್ಯಾಂಗದಲ್ಲಿ ಇಲ್ಲ. ದೇವೇಗೌಡರ ಕುಟುಂಬ ವರ್ಗದವರು ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿ ಇಲ್ಲ, ತಕರಾರು ಇಲ್ಲ, ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಇದಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ ಎಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಹೇಳಿದ್ದಾರೆ.
ಬಿಜೆಪಿ ಮುಖಂಡ ಆರ್. ಅಶೋಕ್ ನೇತೃತ್ವದ ನಿಯೋಗ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗುವಂತೆ ಮನವಿ ಮಾಡಿದ ನಂತರ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎಮ್‌.ಕೃಷ್ಣ , 25 ವರ್ಷ ದಾಟಿದವರು, ಚುನಾವಣೆಗೆ ಸ್ಪರ್ಧಿಸಲು ಸ್ವತಂತ್ರರಾಗಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಸ್ವತಂತ್ರರಾಗಿದ್ದಾರೆ. ಜನ, ತುಲನೆ ಮಾಡಿ ಸರಿಯೋ ತಪ್ಪೋ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಪರೋಕ್ಷವಾಗಿ ನಿಖಿಲ್ ಪರ ಬ್ಯಾಟ್ ಬೀಸಿದ್ದಾರೆ.
ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ದೇಶದ ಜನ ಅವರ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ಯಾವುದೇ ಹಗರಣಗಳಿಗೆ ದಾರಿ ಮಾಡಿಕೊಟ್ಟಿಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಆಡಳಿತ ಅಚ್ಚುಕಟ್ಟಾಗಿದೆ. ಅಧಿಕಾರಿಗಳು ಭಯ, ಭಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಭಾರತ, ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು.
ರಾಜ್ಯದಿಂದ ಹೆಚ್ಚಿನ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು, ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ತಾವೂ ಕೂಡ ಬಯಸಿದ್ದು ಪಕ್ಷಕ್ಕೆ ಶಕ್ತಿ ತುಂಬಲು ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ, ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೇನೆ. 
ನಾನು ಸಿಎಂ ಆಗಿದ್ದ ಅವಧಿಯಲ್ಲಿ ಬೆಂಗಳೂರಿಗೆ ಮಾಡಿರುವ ಅಭಿವೃದ್ಧಿಯನ್ನು ಜನ ಮರೆಯುವುದಿಲ್ಲ. ನಾನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ, ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರವಾದ ನೆಲೆ ಇದೆ. ಇಲ್ಲಿ ದೇವೇಗೌಡ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಅದಮ್ಯ ವಿಶ್ವಾಸವನ್ನು ಎಸ್‌.ಎಮ್‌.ಕೃಷ್ಣ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com