ನಾವು ವಶಪಡಿಸಿಕೊಂಡ ದಾಖಲೆಗಳಲ್ಲಿ ಯಡಿಯೂರಪ್ಪನವರ ಹಣ ಪಾವತಿ ಬಗ್ಗೆ ಪ್ರಸ್ತಾಪವಿಲ್ಲ; ಐಟಿ ಇಲಾಖೆ ಸ್ಪಷ್ಟನೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಬರೆದಿದ್ದರೆನ್ನಲಾದ ಡೈರಿಯಲ್ಲಿನ ಪುಟಗಳು ...
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಬರೆದಿದ್ದರೆನ್ನಲಾದ ಡೈರಿಯಲ್ಲಿನ ಪುಟಗಳು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ದಾಖಲೆಗಳಲ್ಲಿ ಇರಲಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
ಕರ್ನಾಟಕ ಮತ್ತು ಗೋವಾ ಭಾಗದ ಆದಾಯ ತೆರಿಗೆ ಇಲಾಖೆಯ ಸಾಧನೆಗಳ ಬಗ್ಗೆ ತಿಳಿಸಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖೆಯ ಮುಖ್ಯ ಚುನಾವಣಾ ಆಯುಕ್ತ ಬಿ ಆರ್ ಬಾಲಕೃಷ್ಣ, ಸುದ್ದಿ ಮ್ಯಾಗಜೀನ್ ವೊಂದು ವರದಿ ಮಾಡಿರುವ ಯಡಿಯೂರಪ್ಪನವರ ಡೈರಿಯಲ್ಲಿ ಸಿಕ್ಕಿದ ಮೊದಲ ಪುಟ ಎಂದು ಹೇಳುವ ಭಾಗ ನಾವು ವಶಪಡಿಸಿಕೊಂಡ ದಾಖಲೆಗಳಲ್ಲಿ ಇರಲಿಲ್ಲ. ಮತ್ತೊಂದು ತನಿಖೆ ಮೇಲೆ ಪ್ರಭಾವ ಬೀರಲು ಮಾಡುತ್ತಿರುವ ಪ್ರಯತ್ನವಿದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ನಾವು ಪ್ರಭಾವ, ಆಮಿಶಗಳಿಗೆ ಬಲಿಯಾಗುವುದಿಲ್ಲ ಎಂದಿದ್ದಾರೆ.
ಸುದ್ದಿಯಲ್ಲಿ ಉಲ್ಲೇಖಿಸಿರುವ ಡೈರಿಯ ಬೇರೆ ಪುಟಗಳು ಇಲಾಖೆ ವಶಪಡಿಸಿಕೊಂಡ ದಾಖಲೆಯ ಭಾಗವಾಗಿದೆ, ಅವು ನಕಲಿಯಾಗಿರಬಹುದು,ಮೂಲ ಡೈರಿಯ ಪುಟವಾಗಿರಲಿಕ್ಕಿಲ್ಲ ಎಂದು ಅನಿಸುತ್ತದೆ, ಅದು ನಕಲಿ ಎಂಬುದು ನಮ್ಮ ತೀರ್ಮಾನವಾಗಿದೆ ಎಂದು ಬಾಲಕೃಷ್ಣ ಹೇಳಿದರು.
ಇಲಾಖೆ ವಶಪಡಿಸಿಕೊಂಡಿರುವ ಡೈರಿಯ ಪುಟಗಳನ್ನು ನೋಡಿದರೆ ಅದು ದಿನನಿತ್ಯ ಬರೆದ ವಿಷಯಗಳಂತೆ ಕಾಣಿಸುತ್ತಿಲ್ಲ, ಇದು ಅಸಲಿ ಡೈರಿಯ ಪುಟಗಳೆಂದು ತೆರಿಗೆ ಇಲಾಖೆಗೆ ಒದಗಿಸಿ ಆ ಮೂಲಕ ಬಿಡುಗಡೆ ಮಾಡಿಸಬೇಕೆಂದು ಯೋಜನೆ ರೂಪಿಸಿದಂತೆ ಕಾಣಿಸುತ್ತದೆ, ಡೈರಿಯನ್ನು ಪ್ರತ್ಯೇಕವಾಗಿ ಸ್ವತಂತ್ರವಾಗಿ ಬಿಡುಗಡೆ ಮಾಡಿದರೆ ಅದರ ಪರಿಣಾಮ ಅಷ್ಟೊಂದು ಇರುವುದಿಲ್ಲ ಎಂಬ ಯೋಜನೆಯಿದ್ದಿರಬಹುದು ಎಂದರು ಅಧಿಕಾರಿ ಬಾಲಕೃಷ್ಣ.
ಕಳೆದ ಶುಕ್ರವಾರ ಕೇಂದ್ರ ನೇರ ತೆರಿಗೆ ಮಂಡಳಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಆಸ್ತಿ-ಪಾಸ್ತಿ ಶೋಧ ಕಾರ್ಯಾಚರಣೆ ವೇಳೆ ಸಿಕ್ಕಿರುವ ಕೆಲವು ಪುಟಗಳು ಬಿ ಎಸ್ ಯಡಿಯೂರಪ್ಪನವರು ಬರೆದಿದ್ದಾರೆ ಎನ್ನಲಾದ ಡೈರಿಯ ಕ್ಸೆರಾಕ್ಸ್ ಪ್ರತಿಗಳಾಗಿವೆ. ವಿಧಿ ವಿಜ್ಞಾನ ಪ್ರಯೋಗಾಲಯ ಮೂಲ ದಾಖಲೆಗಳನ್ನು ಕೇಳಿದ್ದು ಅವು ಸಿಗದ ಕಾರಣ ಪೇಜ್ ಗಳನ್ನು ಪರಿಶೀಲಿಸಲಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com