ಮಂಡ್ಯ ಅಸಮಾಧಾನಿತ ಮುಖಂಡರ ಜೊತೆ ಮಾತುಕತೆ: ಸಿದ್ದರಾಮಯ್ಯ

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಆಯೋಜಿಸಿದ್ದ ಔತಣಕೂಟದಲ್ಲಿ ಮಂಡ್ಯದ ಮಾಜಿ ಶಾಸಕರು ಭಾಗವಹಿಸಿರುವ ಬಗ್ಗೆ ಮಾಹಿತಿ ಇಲ್ಲ.
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಆಯೋಜಿಸಿದ್ದ ಔತಣಕೂಟದಲ್ಲಿ ಮಂಡ್ಯದ ಮಾಜಿ ಶಾಸಕರು ಭಾಗವಹಿಸಿರುವ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಸಭೆ ಮಾಡಿದ್ದರೆ ಅದು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದಾರೆ ಎಂದು ಅಲ್ಲ. ಈ ಬಗ್ಗೆ ಅವರನ್ನೇ ಕರೆದು ಮಾತನಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. 
ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಸಾಮಾನ್ಯ ಪರೀಕ್ಷೆಗೆ ಒಳಪಟ್ಟು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲ್ಲ, ತಟಸ್ಥವಾಗಿ ಉಳಿಯುತ್ತೇವೆ ಎಂದಿದ್ದರು. ಈ ಬಗ್ಗೆ ಮಂಡ್ಯದ ನಾಯಕರನ್ನು ಕರೆಸಿ ಮಾತನಾಡುತ್ತೇನೆ. ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಹಾಗೂ ಮಂಡ್ಯ ಮುಖಂಡರಿಂದ ಮಾಹಿತಿ ಪಡೆಯುತ್ತೇನೆ. ಸಭೆ ಮಾಡಿದ್ದಾರೆ ಎಂದಾಕ್ಷಣ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಭಾವಿಸುವುದು ಸರಿಯಲ್ಲ. ಸಭೆ ನಡೆಸಿರುವ ಬಗ್ಗೆಯೂ ತಮಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಅಸಮಾಧಾನಿತ ನಾಯಕರ ನಡೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಕುಂದಗೋಳ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ‌ ಇಲ್ಲ. ನಾಳೆ ಪ್ರಚಾರಕ್ಕಾಗಿ ಕುಂದಗೋಳಕ್ಕೆ ತೆರಳುತ್ತಿದ್ದೇನೆ. ಸಮಸ್ಯೆ ಇದ್ದರೆ ಕುಳಿತು ಮಾತುಕತೆ ಮೂಲಕ ಬಗೆಹರಿಸುವ ಕೆಲಸ ಮಾಡಲಾಗುವುದು. ನಾಳೆ ಕಾರ್ಯಕರ್ತರು ಜಾಥಾ ಆಯೋಜಿಸಿದ್ದಾರೆ. ಚಿಂಚೋಳಿ, ಕುಂದಗೋಳ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ. ಅಂತೆಯೇ  ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಒಟ್ಟು 20 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾಲ್ಕು ಕ್ಷೇತ್ರಗಳಲ್ಲಿ ದಿಗ್ಗಜರು ಸೋಲಲಿದ್ದಾರೆ ಎಂದು ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಾಸ್ತ್ರ ಹೇಳೋದು ಗೊತ್ತಾ?
ಮುಖ್ಯಮಂತ್ರಿ ಆಗಿ ಮೂರು ದಿನ ಉಳಿದುಕೊಳ್ಳಲಿಲ್ಲ. ಅಂಥವರು ಅದ್ಯಾವ ಶಾಸ್ತ್ರ ಹೇಳುತ್ತಾರೆ. ಬಹುಮತ ಇಲ್ಲದಿದ್ದರೂ ಮೂರು ದಿನ ಮುಖ್ಯಮಂತ್ರಿ ಆಗಿರಲಿಲ್ಲವೇ. ಶಾಸ್ತ್ರ ಗೊತ್ತಿದ್ದಿದ್ದರೆ ಮುಖ್ಯಮಂತ್ರಿಯಾಗಿ ಅವರೇ ಮುಂದುವರೆಯಬಹುದಿತ್ತಲ್ಲಾ. ಯಾಕೆ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ಮರು ಪ್ರಶ‍್ನೆ ಹಾಕಿದರು.
ಹಿರಿಯ ರಂಗ ಭೂಮಿ ದಿಗ್ಗಜ ಮಾಸ್ಟರ್ ಹಿರಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಮಾಸ್ಟರ್ ಹಿರಣ್ಣಯ್ಯ ದೀರ್ಘಕಾಲ ರಂಗಭೂಮಿ ಸೇವೆ ಮಾಡಿದವರು. ಅವರ ಅಗಲಿಕೆಯಿಂದ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅದ್ಬುತ ನಟನಾಕಾರರಾಗಿದ್ದ ಅವರು, ಸಾಮಾಜಿಕ‌ ಕಳಕಳಿಯಿಂದ ನಾಟಕಗಳನ್ನು ಮಾಡುತ್ತಿದ್ದರು. ಹಿರಣ್ಣಯ್ಯ ಅವರಿಗೆ ಅವರೇ ಸಾಟಿ ಅಂತಹ ಮತ್ತೊಬ್ಬ ಕಲಾವಿದ ಹುಟ್ಟಿಬರಲು ಸಾಧ್ಯವಿಲ್ಲ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಇಷ್ಟು ಬೇಗ ಅವರು ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಹಿರಣ್ಣಯ್ಯ ನಿಧನದ ಬಗ್ಗೆ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com