ಅಭ್ಯರ್ಥಿಗಳ ಸೋಲು ಗೆಲುವು ಮಂಡ್ಯ ಮತದಾರರ ತೀರ್ಮಾನ: ಚಲುವರಾಯಸ್ವಾಮಿ

ಮಂಡ್ಯದಲ್ಲಿ ಅಭ್ಯರ್ಥಿಗಳ ಸೋಲು ಗೆಲುವು ಮತದಾರರ ನಿರ್ಧಾರವಾಗಲಿದ್ದು, ಪಕ್ಷ ದ್ರೋಹದಂತಹ ಕೆಲಸವನ್ನು ತಾವು ಮಾಡಿಲ್ಲ ಮುಂದೆ ಮಾಡುವುದೂ ಇಲ್ಲ ಎಂದು ಮಾಜಿ ಸಚಿವ, ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಚಲುವರಾಯಸ್ವಾಮಿ
ಚಲುವರಾಯಸ್ವಾಮಿ

ಬೆಂಗಳೂರು: ಮಂಡ್ಯದಲ್ಲಿ ಅಭ್ಯರ್ಥಿಗಳ ಸೋಲು ಗೆಲುವು ಮತದಾರರ ನಿರ್ಧಾರವಾಗಲಿದ್ದು, ಪಕ್ಷ ದ್ರೋಹದಂತಹ ಕೆಲಸವನ್ನು ತಾವು ಮಾಡಿಲ್ಲ ಮುಂದೆ ಮಾಡುವುದೂ ಇಲ್ಲ ಎಂದು  ಮಾಜಿ ಸಚಿವ, ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಂಡ್ಯದ ಅಸಮಾಧಾನಿತ ಕಾಂಗ್ರೆಸ್ ನಾಯಕರಿಂದ ಸುಮಲತಾ ಜತೆ ಭೋಜನಕೂಟದಲ್ಲಿ ಭಾಗವಹಿಸಿದ ವಿಚಾರ‌‌ವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೋಜನಕೂಟ ಬಗ್ಗೆ ಪಕ್ಷದ ಅಧ್ಯಕ್ಷರು ಸ್ಪಷ್ಟೀಕರಣ ಕೇಳಿದ್ದರಿಂದ ವಾಸ್ತವ ವಿಚಾರಗಳ ಬಗ್ಗೆ ವಿವರಣೆ ನೀಡಿದ್ದೇನೆ. ನಾವೆಲ್ಲರೂ ಈ ಚುನಾವಣೆಯಲ್ಲಿ ಯಾರಿಗೂ ಬೆಂಬಲ ನೀಡಿರಲಿಲ್ಲ. ಈ ಚುನಾವಣೆ ಮಂಡ್ಯ ಜನತೆಗೆ ಬಿಟ್ಟಿದ್ದು ಎಂದರು.

ಸುಮಲತಾ ಪರ  ನಾವು ಕೆಲಸ ‌ಮಾಡಿಲ್ಲ. ಅವರಿಂದ ಅಂತರ ಕಾಯ್ದುಕೊಂಡಿದ್ದೇವೆ. ಮೈತ್ರಿ ಅಭ್ಯರ್ಥಿ ವಿಚಾರದಲ್ಲೂ ಮೌನವಹಿಸಿದ್ದೇವೆ ಹೊರತು ನಾವೆಲ್ಲೂ ಅವರ ವಿರುದ್ದ ಅಪಪ್ರಚಾರ ಮಾಡಿಲ್ಲ. ಯಾರೇ ಗೆದ್ದರೂ ಸೋತರೂ ಅದು ಮಂಡ್ಯ ಜನರ ತೀರ್ಮಾನ ಆಗಿರುತ್ತದೆ ಅಷ್ಟೇ. ಒಬ್ಬ ಸ್ನೇಹಿತರು ಊಟಕ್ಕೆ ಕರೆದಾಗ ಹೋಗಿದ್ದೇನೆ. ಅದಕ್ಕೆ ಅಷ್ಟೇನು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ನಾವು ಯಾರನ್ನೂ ಸೋಲಿಸುವ ಗೆಲ್ಲಿಸುವ ಶಕ್ತಿ ಹೊಂದಿಲ್ಲ. ನಾವೇ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಬೇರೆಯವರನ್ನು ಗೆಲ್ಲಿಸಲು ಹೇಗೆ ಸಾಧ್ಯ? ಜನರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ವಿಡಿಯೋ ರಿಲೀಸ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಅಧ್ಯಕ್ಷರ ಜತೆ ಚರ್ಚೆ ಆಗಿದೆ. ಏನು ಹೇಳಬೇಕೋ ಅದನ್ನು ಅವರಿಗೆ ಮನವರಿಕೆ ಮಾಡಿದ್ದೇನೆ. ನಮ್ಮದು ರಾಷ್ಟ್ರೀಯ ಪಕ್ಷ. ಏನು ಮಾಡಬೇಕು ಎಂಬ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಏಕೆ ವಿಡಿಯೋ ಬಿಡುಗಡೆ ಆಗಿದೆ ಎಂಬುದು ನಮಗೆ ಗೊತ್ತಿಲ್ಲ. ಪೊಲೀಸರಿಗೆ ಯಾರು ಒತ್ತಡ ಹಾಕಿದ್ದರೋ, ಪೊಲೀಸರು ಹೋಟೆಲ್ ಮಾಲೀಕರ  ಮೇಲೆ ಏನು ಒತ್ತಡ ಹಾಕಿದ್ದರೂ ಎಂಬುದು ತಿಳಿದಿಲ್ಲ. ಅದರಲ್ಲಿ ಊಟ ಮಾಡಿರುವುದಕ್ಕೆ ಇಷ್ಟೇಕೆ ಮಹತ್ವ ಬಂತು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದರು.

ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು 25 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಯಾರ ವಿರುದ್ಧವೂ ನಾನು ಕ್ಷುಲ್ಲಕವಾಗಿ ಮಾತನಾಡಿಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಸೋತಿದ್ದೇನೆ, ಗೆದ್ದಿದ್ದೇನೆ. ನಾನು ಎಂದೂ ಆ ರೀತಿ ಒಬ್ಬರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿಲ್ಲ. ಅವರು ಬೇಕಿದ್ದರೆ ಮಾತನಾಡಿಕೊಳ್ಳಲಿ ಎಂದು ಸೂಚ್ಯವಾಗಿ ಸುರೇಶ್  ಗೌಡರಿಗೆ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com