ರಮೇಶ್ ಜಾರಕಿಹೊಳಿ ಮನೆಯಲ್ಲಿ ಅತೃಪ್ತ ಶಾಸಕರ ಸಭೆ, ಮೈತ್ರಿ ನಾಯಕರಿಗೆ ಮತ್ತಷ್ಟು ತಲೆ ಬಿಸಿ

ಒಂದೆಡೆ ಮೈತ್ರಿ ಸರ್ಕಾರದ ನಾಯಕರು ಸರ್ಕಾರದ ರಕ್ಷಣೆಗೆ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನ ಅಸಮಾಧಾನಿತ 8ಕ್ಕೂ ಹೆಚ್ಚು...
ರಮೇಶ್ ಜಾರಕಿಹೊಳಿ - ಅತೃಪ್ತ ಶಾಸಕರು
ರಮೇಶ್ ಜಾರಕಿಹೊಳಿ - ಅತೃಪ್ತ ಶಾಸಕರು
ಬೆಂಗಳೂರು: ಒಂದೆಡೆ ಮೈತ್ರಿ ಸರ್ಕಾರದ ನಾಯಕರು ಸರ್ಕಾರದ ರಕ್ಷಣೆಗೆ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನ ಅಸಮಾಧಾನಿತ 8ಕ್ಕೂ ಹೆಚ್ಚು ಶಾಸಕರು ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಿನ್ನೆ ನಗರದ ಖಾಸಗಿ ಹೋಟೆಲಿನಲ್ಲಿ ಸಭೆ ಸೇರಿರುವ ಪೋಟೋಗಳು ಮೈತ್ರಿ ನಾಯಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಪಕ್ಷೇತರ ಶಾಸಕರಾದ ಮುಳುಬಾಗಿಲು ಶಾಸಕ ನಾಗೇಶ್ ಹಾಗೂ ರಾಣೆಬೆನ್ನೂರಿನ ಶಾಸಕ ಆರ್. ಶಂಕರ್, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ ಅವರು ರಮೇಶ್ ಜಾರಕಿಹೊಳಿಯನ್ನು ಅವರ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಲ್ಲಿರುವ ಮನೆಯಲ್ಲಿ ಭೇಟಿ ಮಾಡಿದ ಬಳಿಕ ಎಲ್ಲಾ ಶಾಸಕರು ಖಾಸಗಿ ಹೋಟೆಲಿನತ್ತ ತೆರಳಿ ಅಲ್ಲಿ ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಜೊತೆ ಸೇರಿ ಪ್ರತ್ಯೇಕ ಸಭೆ ನಡೆಸಿದರು.
ರಮೇಶ್ ಜಾರಕಿಹೊಳಿ ಆರಂಭಿಸಿರುವ ಆಪರೇಷನ್ ಕಮಲವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ. ಇಂದು ಖಾಸಗಿ ಹೋಟೆಲಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಹಿನ್ನಲೆಯಲ್ಲಿ ಎಲ್ಲಾ ಶಾಸಕರು ನಗರಕ್ಕೆ ಆಗಮಿಸಿದ್ದು, ಅತೃಪ್ತರನ್ನು ಒಟ್ಟುಗೂಡಿಸಿ ಬೇರೆಡೆಗೆ ಸ್ಥಳಾಂತರಗೊಳಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ, ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಆರ್. ಶಂಕರ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿ ನಾವು ಪಕ್ಷ ತೊರೆಯುವುದಿಲ್ಲ ಎಂದು ಭರವಸೆ ನೀಡಿದ್ದರು. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಸೇರಿದಂತೆ ರಮೇಶ್ ಜಾರಕಿಹೊಳಿ ಬೆಂಬಲಕ್ಕಿರುವ ಎಲ್ಲಾ ಶಾಸಕರನ್ನು ಕರೆಸಿ ಮನವೊಲಿಸುವ ಕೆಲಸ ನಡೆಸಲಾಗಿದೆ.
ಇದರ ನಡುವೆಯೂ ಅತೃಪ್ತ ಕಾಂಗ್ರೆಸ್ ಶಾಸಕರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತಷ್ಟು ತಲೆ ಬಿಸಿ ಹೆಚ್ಚಿಸಿದ್ದಾರೆ. ಶಾಸಕರಿಗೆ ಭರವಸೆ ನೀಡುವುದಕ್ಕಿಂತ ಸಚಿವ ಸ್ಥಾನಗಳನ್ನ ನೀಡಿದರೆ ಪಕ್ಷದಲ್ಲಿ ಉಳಿಯುವ ಸಾಧ್ಯತೆ ಇದೆ ಎಂಬ ಕಾರಣಕ್ಕಾಗಿ ಸಂಪುಟ ಪುನರ್ ರಚನೆಗೆ ಮೈತ್ರಿ ನಾಯಕರು ಕಸರತ್ತು ನಡೆಸಿದ್ದಾರೆ.
ಇತ್ತ ಬಿ.ಎಸ್ ಯಡಿಯೂರಪ್ಪ ಹೆಚ್‍ಡಿಕೆ ಸರ್ಕಾರ ಬಿದ್ದರೆ ನಾವು ಸರ್ಕಾರ ರಚಿಸುತ್ತೇವೆ. ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ ಎಂದಿದ್ದರು. ಆದರೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರ ಜೊತೆ ಸಭೆ ನಡೆಸಿ ಮತ್ತಷ್ಟು ಗೊಂದಲ ಹೆಚ್ಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com