'ಗಂಡಾಂತರ' ದಿಂದ ಮೈತ್ರಿ ಸರ್ಕಾರ ಪಾರು: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ

ಆಪರೇಷನ್ ಕಮಲದ ಭೀತಿಯಲ್ಲಿ ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ,ಪುನಾರಚನೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು
'ಗಂಡಾಂತರ' ದಿಂದ ಮೈತ್ರಿ ಸರ್ಕಾರ ಪಾರು: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ
'ಗಂಡಾಂತರ' ದಿಂದ ಮೈತ್ರಿ ಸರ್ಕಾರ ಪಾರು: ಸದ್ಯಕ್ಕಿಲ್ಲ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ
ಬೆಂಗಳೂರು: ಆಪರೇಷನ್ ಕಮಲದ ಭೀತಿಯಲ್ಲಿ ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ,ಪುನಾರಚನೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಶಾಸಕರು,ಸಚಿವರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಿರಂತರ ಎರಡು ದಿನ ಶಾಸಕಾಂಗ ಸಭೆ,ಸಚಿವರ ಸಭೆ ಜೊತೆ ಅತೃಪ್ತರನ್ನು ಸಮಾಧಾನಪಡಿಸುವಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಶಾಸಕಾಂಗ ನಾಯಕ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ.
ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಸದಾಶಿವನಗರದ ಗೃಹ ಕಚೇರಿಯಲ್ಲಿ ನಡೆದ ಉಪಹಾರ ಕೂಟದ ಸಭೆಯಲ್ಲಿ ಸಚಿವರು ರಾಜೀನಾಮೆ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದ್ದು,ಅಂತೆಯೇ ಪಕ್ಷದ ನಾಯಕರಿಂದಲೂ ಪುನಾರಚನೆ ಬಗ್ಗೆ ಒಮ್ಮತ ಅಭಿಪ್ರಾಯ ಮೂಡದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಯಾರನ್ನು ಕೈಬಿಡದೆ, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬೇಡ. ತರಾತುರಿಯಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. 
ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಂಡು ಮುಂದುವರೆಯುವುದು ಸೂಕ್ತ. ತೀರಾ ಅಗತ್ಯ, ಅನಿವಾರ್ಯತೆ ಕಂಡು ಬಂದರೆ ಮಾತ್ರ ಸಚಿವ ಸಂಪುಟ ಪುನಾರಚನೆ ಮಾಡೋಣ ಎಂದು ಎಲ್ಲಾ ಸಚಿವರು,ಶಾಸಕಾಂಗ ನಾಯಕ, ಕೆಪಿಸಿಸಿ ಅಧ್ಯಕ್ಷರ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎರಡು ದಿನಗಳಿಂದ ಸಚಿವರು,ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ನಿನ್ನೆಯ ಶಾಸಕಾಂಗ ಸಭೆಯಲ್ಲಿ ಶಾಸಕರ ನೀಡಿದ ಸಲಹೆಗಳನ್ನು ಇಂದು ಚರ್ಚಿಸಲಾಗಿದೆ. ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವ ಕುರಿತು ಚರ್ಚಿಸಿದ್ದೇವೆ. ಎಲ್ಲಾ ಸಚಿವರು ಸರ್ಕಾರದ ಸ್ಥಿರತೆ ಹಾಗೂ ಸುಭದ್ರ ಸರ್ಕಾರ ನೀಡಲು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ. ವರಿಷ್ಠರ ತೀರ್ಮಾನಕ್ಕೆ ಭಿನ್ನಾಭಿಪ್ರಾಯ ಇಲ್ಲದೆ ಸಹಮತ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸಚಿವರು ಅವರವರ ಜಿಲ್ಲೆಗಳಲ್ಲಿ ಸಮರ್ಥವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಒತ್ತು ನೀಡುವಂತೆ ಸೂಚಿಸಲಾಗಿದೆ. ಮೈತ್ರಿ ಸರ್ಕಾರದ ಆಡಳಿತ ಜನರಿಗೆ ತಲುಪಿಸಬೇಕಿದೆ. ಈ ಕುರಿತಾಗಿ ಸಂಜೆ ಪಕ್ಷದ ಹಿರಿಯ ಮುಖಂಡರು, ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.
ಬಿಜೆಪಿಯ ಆಪರೇಷನ್ ಕಮಲದ ಆತಂಕ ನಮಗಿಲ್ಲ. ಯಾವುದೇ ಶಾಸಕರು ಪಕ್ಷವನ್ನು ತೊರೆಯುವುದಿಲ್ಲ. ರಮೇಶ್ ಜಾರಕಿಹೊಳಿ ಹಾಗೂ ರೋಷನ್ ಬೇಗ್ ಹೊರತುಪಡಿಸಿ ಉಳಿದೆಲ್ಲಾ ನಾಯಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಕುತಂತ್ರಗಳು ನಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬಂದರೆ ಬಡವರಿಗೆ, ಮಹಿಳೆಯರಿಗೆ, ಹಿಂದುಳಿವ ವರ್ಗಗಳಿಗೆ ತೊಂದರೆ ಆಗಲಿದೆ. ಆದ್ದರಿಂದಲೇ ಮೈತ್ರಿ ಸರ್ಕಾರವನ್ನು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಸೇರಿ ರಚನೆ ಮಾಡಿದೆ. ಮೈತ್ರಿ ಸರ್ಕಾರ ಸಂವಿಧಾನ ಬದ್ಧವಾಗಿಯೇ ರಚನೆ ಆಗಿದೆ. ಸರ್ಕಾರ ರಚನೆಯಾದ ಮೇಲೆ ಬಿಜೆಪಿ ವಿರೋಧ ಪಕ್ಷದ ಕೆಲಸ ನಿರ್ವಹಿಸಬೇಕಿತ್ತು ಎಂದರು.
ಬಿಜೆಪಿಗೆ ಜನರು ಬಹುಮತ ನೀಡಿರಲಿಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಿಗೆ ಸರ್ಕಾರ ರಚಿಸಲು ಅಗತ್ಯ ಬಹುಮತವಿರಲಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಿಜೆಪಿಗೆ ಅಧಿಕಾರ ನೀಡಿದರೂ ಬಹುಮತ ಸಾಬೀತುಪಡಿಸಲು ವಿಫಲರಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಆದರೂ ಮತ್ತೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಕಸರತ್ತನ್ನು ಯಡಿಯೂರಪ್ಪ ಅವರ ತಂಡ ನಡೆಸುತ್ತಿದ್ದಾರೆ.ಸರ್ಕಾರದ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್ ಪಕ್ಷದ ಯಾವ ಶಾಸಕರು,ಸಚಿವರು ಪಕ್ಷ ತೊರೆಯುವುದಿಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಉತ್ತಮ ಆಡಳಿತ ನೀಡಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಬಿಜೆಪಿ ಹಾಗೂ ಅದರ ನಾಯಕರಿಗೆ ನೈತಿಕತೆ ಎನ್ನುವುದೇ ಇಲ್ಲ. ನೈತಿಕತೆ ಇರುವುದಾದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ‌. ಸದ್ಯಕ್ಕೆ ಸಂಪುಟ ಪುನಾರಚನೆ, ವಿಸ್ತರಣೆ ಕುರಿತು ತೀರ್ಮಾನ ಆಗಿಲ್ಲ. ವಿಸ್ತರಣೆ, ಪುನರಚನೆ ಈಗ ಇಲ್ಲ.‌ ಮುಂದಿನ ದಿನದಲ್ಲಿ ಮಾಡೋದಾದರೆ ಪುನರಚನೆ ಮಾಡುತ್ತೇವೆ. ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಅವರು ಪಕ್ಷ ಬಿಡುವುದಿಲ್ಲ. ಅವರ ಜೊತೆಯೂ ಚರ್ಚೆ ನಡೆಸಲಾಗಿದೆ. ನಾನೂ ಕೂಡ ಮಾತಾಡುತ್ತೇನೆ. ರೋಷನ್ ಬೇಗ್ ಹೇಳಿಕೆ ಬಗ್ಗೆ ಪಕ್ಷದ ಅಧ್ಯಕ್ಷರು ನೊಟೀಸ್ ನೀಡಿದ್ದಾರೆ.ಅವರಿಂದ ಯಾವ ಉತ್ತರ ಅಥವಾ ಸಮಜಾಯಿಸಿ ನೀಡುತ್ತಾರೆ ಕಾದು ನೋಡೋಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com