ಸುಪ್ರೀಂ ತೀರ್ಪಿನಿಂದಾಗಿ ಸಿಎಂ ಯಡಿಯೂರಪ್ಪ ಮೂರುವರೆ ವರ್ಷ ಸೇಫ್: ದೇವೇಗೌಡ

ಅನರ್ಹರ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಸೇಫ್ ಆಗಿದ್ದಾರೆ...
ಹೆಚ್.ಡಿ.ದೇವೇಗೌಡ
ಹೆಚ್.ಡಿ.ದೇವೇಗೌಡ

ಬೆಂಗಳೂರು: ಅನರ್ಹರ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಸೇಫ್ ಆಗಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವ್ಯಾಖ್ಯಾನಿಸಿದ್ದಾರೆ.

ಬುಧವಾರ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಸ್ವಾಗತಿಸುತ್ತೇನೆ, ಈ ತೀರ್ಪಿನಿಂದಾಗಿ ಯಡಿಯೂರಪ್ಪ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ‌. ಅವರೇ ಮೂರುವರೆ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳುವ ಮೂಲಕ ಉಪ ಚುನಾವಣೆ ಬಳಿಕ ಬಿಜೆಪಿ ಬೆಂಬಲ ನೀಡುವ ಸುಳಿವು ನೀಡಿದರು.

ಸುಪ್ರೀಂ ತೀರ್ಪಿನಿಂದ ಯಡಿಯೂರಪ್ಪ ಅವರು ರಾಜಕೀಯವಾಗಿ ಸೇಫ್ ಆಗಿದ್ದಾರೆ. ತೀರ್ಪಿನಿಂದ ರಾಜಕೀಯವಾಗಿ ಎರಡು ಮುಖ್ಯ ಅಂಶಗಳನ್ನು ಪರಿಗಣಿಸಬಹುದು. ಹದಿನೈದು ಕ್ಷೇತ್ರಗಳಲ್ಲಿ ಅನರ್ಹರು ಸ್ಪರ್ಧಿಸಿ ಗೆದ್ದರೇ ಮಾತ್ರ ಅವರು ಮಂತ್ರಿಯಾಗಬಹದು. ಒಂದು ವೇಳೆ ಸೋತರೆ ರಾಜಕೀಯವಾಗಿ ಯಾವುದೇ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ. ಯಾವುದೇ ಮಂತ್ರಿ ಸ್ಥಾನವಾಗಲೀ, ನಿಗಮ ಮಂಡಳಿ ಸ್ಥಾನವಾಗಲೀ ಅನರ್ಹರು ಪಡೆಯಲು ಸಾಧ್ಯವಿಲ್ಲ. ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರಷ್ಟೇ ವಿಶ್ಲೇಷಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.

ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ. ಎಲ್ಲಾ ಕಡೆಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆಯಾದರೂ ಇಂತಿಷ್ಟು ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಹೇಳಲು ಈಗಲೇ ಸಾಧ್ಯವಿಲ್ಲ. ಪಕ್ಷ ಸಂಘಟಿಸುವುದು ಮುಖ್ಯ ಎಂದು ಹೇಳಿದರು.

ಬೆಳಗಾವಿಯಲ್ಲಿನ ಮೂರು ಸ್ಥಾನಗಳ ಬಗ್ಗೆ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಜವಾಬ್ದಾರಿ ಎಚ್‌‌‌‌.ಡಿ.ಕುಮಾರಸ್ವಾಮಿಗೆ ನೀಡಲಾಗಿದೆ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕುಮಾರಸ್ವಾಮಿ ಯಾವುದೇ ತೀರ್ಮಾನ ಕೈಗೊಂಡರೂ ನನ್ನೊಂದಿಗೆ ಚರ್ಚಿಸಿಯೇ ನಿರ್ಧರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು‌.

ಜೆಡಿಎಸ್ ಜಾತ್ಯತೀತ ಬಗ್ಗೆ ಪ್ರಶ್ನಿಸಿರುವ ಸಿದ್ದರಾಮಯ್ಯ ತಮ್ಮ ಜಾತ್ಯತೀತತೆಯನ್ನು ರಾಜೀವ್ ಗಾಂಧಿಯಿಂದ ರಾಹುಲ್ ಗಾಂಧಿಗೆ ವರ್ಗಾಯಿಸಿದ್ದಾರೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸಿಗಿಲ್ಲ. ಯಾವಾಗ ರಾಜೀವ್ ಗಾಂಧಿಯಿಂದ ಕಾಂಗ್ರೆಸಿನ ಜಾತ್ಯತೀತತೆ ರಾಹುಲ್ ಗಾಂಧಿಗೆ ವರ್ಗಾವಣೆಯಾಗಿದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರ ಮೂಲ ಯಾವುದು? ಕಾಂಗ್ರೆಸ್ ಸೇರುವ ಮೊದಲು ಸಿದ್ದರಾಮಯ್ಯ ಇದ್ದಿದ್ದು ಜಾತ್ಯತೀತ ಜೆಡಿಎಸ್ ಪಕ್ಷದಲ್ಲಿ ಎನ್ನುವುದನ್ನು ಮರೆಯಬಾರದು‌‌ ಎಂದು ಕುಟುಕಿದರು.

ತಮಿಳುನಾಡಿನಲ್ಲಿ ಜಾತ್ಯತೀತ ಬಗ್ಗೆ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯೇ ಆರು ವರ್ಷ ಬಿಜೆಪಿ ಜೊತೆ ಮೈತ್ರಿಯಾಗಿದ್ದರು. ಇಂತಹ ಕರುಣಾನಿಧಿ ಮನೆಗೆ ಕಾಂಗ್ರೆಸ್ ನಾಯಕರು ಹೋಗಿರಲಿಲ್ಲವೇ? ಕರುಣಾನಿಧಿ ಜೊತೆ ಮೈತ್ರಿ ಬಗ್ಗೆ ಕಾಂಗ್ರೆಸ್ ಮಾತನಾಡಿರಲಿಲ್ಲವೇ? ಹಾಗಂದ ಮೇಲೆ ಕಾಂಗ್ರೆಸ್ ಬಳಿ ನೈತಿಕತೆ ಎಲ್ಲಿ ಉಳಿದಿದೆ ಎಂದು ಸೂಚ್ಯವಾಗಿ ಸಿದ್ದರಾಮಯ್ಯಗೆ ತಿವಿದರು.

ಮಾಜಿ ಸಚಿವ ಬಂಡೆಪ್ಪ ಖಾಶಂಪೂರ‌ ಮಾತನಾಡಿ, ಸುಪ್ರೀಂ ಕೋರ್ಟ್ ನ ತೀರ್ಪು ಒಳ್ಳೆಯ ತೀರ್ಪಾಗಿದೆ. ನ್ಯಾಯ ಸ್ಪೀಕರ್ ತೀರ್ಪನ್ನು ಎತ್ತಿ‌ ಹಿಡಿದಿದೆ. ಬೇರೆ ಪ್ರಕರಣಗಳನ್ನು ಆಧರಿಸಿ ಅನರ್ಹರಿಗೆ ಚುನಾವಣೆಗೆ ಅವಕಾಶ ನೀಡಿದ್ದಾರೆ‌. ಅನರ್ಹರಿಗೆ ಈ ತೀರ್ಪಿನಿಂದ ಹಿನ್ನಡೆಯಾಗಿದೆ. ನ್ಯಾಯಾಲಯ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿದಿದ್ದರೆ ಅನರ್ಹರು ಮಂತ್ರಿಗಳಾಗುತ್ತಿದ್ದರು. ಮೊದಲು ಚುನಾವಣೆ ಗೆಲ್ಲಿ, ನಂತರ ಮಂತ್ರಿಯಾಗಿ ಎನ್ನುವ ತೀರ್ಪಿದು. ಹೀಗಾಗಿ ಸುಪ್ರೀಂ ಕೋರ್ಟ್ ತೀರ್ಪು ಸಮಂಜಸವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com