ಕೇಂದ್ರ ಸಂಪುಟ ಸಭೆಯಲ್ಲಿ ರಾಜ್ಯದ ಪ್ರವಾಹ ಪರಿಹಾರ ವಿಚಾರ ಪ್ರಸ್ತಾಪಿಸುತ್ತೇನೆ: ಸದಾನಂದಗೌಡ

ರಾಜ್ಯದ ಪ್ರವಾಹ ಪರಿಸ್ಥಿತಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎನ್ನುವ ಆಕ್ರೋಶದ ನಡುವೆಯೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ...
ಡಿವಿ ಸದಾನಂದಗೌಡ
ಡಿವಿ ಸದಾನಂದಗೌಡ

ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎನ್ನುವ ಆಕ್ರೋಶದ ನಡುವೆಯೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರು ಪರಿಹಾರ ವಿಚಾರವನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಬುಧವಾರ ಹೇಳಿದ್ದಾರೆ.

ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸದಾನಂದಗೌಡ, ಗುರುವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಮುಂದೆ ಕರ್ನಾಟಕ ನೆರೆ ಪರಿಹಾರ ವಿಚಾರ ಎತ್ತುವುದಾಗಿ ಹೇಳಿದರು.

ನೆರೆ ಅಧ್ಯಯನ ತಂಡ ಇಂದು ಅಥವಾ ನಾಳೆ ಕೇಂದ್ರಕ್ಕೆ ಪ್ರವಾಹ ಪರಿಸ್ಥಿತಿಯಿಂದಾದ ಹಾನಿ ಕುರಿತು ವರದಿ ಸಲ್ಲಿಸಲಿದೆ. ಆದಷ್ಟು ಶೀಘ್ರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡಲಿದ್ದು, ಕರ್ನಾಟಕಕ್ಕೆ ಹೆಚ್ಚಿನ‌ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು‌.

ಸಂತ್ರಸ್ತರ ರಕ್ಷಣೆಗೆ ಕೈಗೊಳ್ಳಬೇಕಾದ ತುರ್ತುಕ್ರಮಗಳನ್ನು ಈಗಾಗಲೇ ಸರ್ಕಾರ ತೆಗೆದುಕೊಂಡಿದೆ. ನೆರೆ ‌ಸಂತ್ರಸ್ತರಿಗೆ ನೆರವು ಒದಗಿಸಲು ಜಿಲ್ಲಾಧಿಕಾರಿಗಳ ಹಾಗೂ ಪಿಡಿ ಖಾತೆಗಳಲ್ಲಿ ಇದಕ್ಕಾಗಿ ಹಣ ಮೀಸಲಿಡಲಾಗಿದೆ. ಡಿಸೆಂಬರ್ ನಲ್ಲಿ ಬಿಡುಗಡೆಗೊಳಿಸಬೇಕಾಗಿದ್ದ ಎಸ್ ಡಿಆರ್ ಎಫ್ ಅನುದಾನವನ್ನು ಕೇಂದ್ರ ಈಗಾಗಲೇ ಮುಂಚಿತವಾಗಿ ರಾಜ್ಯಕ್ಕೆ ನೀಡಿದೆ ಎಂದು ಕೇಂದ್ರದ ನಡೆಯನ್ನು ಸಮರ್ಥಿಸಿಕೊಂಡರು.

ಹಣ ದುರುಪಯೋಗ ಆಗಬಾರದೆಂಬ ಉದ್ದೇಶ ಕೇಂದ್ರದ್ದಾಗಿದೆ. ಇನ್ನೂ ಮಳೆ ನಿಂತಿಲ್ಲ. ಮಳೆ ನಿಂತ ಬಳಿಕ ನೆರೆ ಹಾನಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ತರಾತುರಿಯಲ್ಲಿ ಯಾವ ನಿರ್ಧಾರವನ್ನೂ ಕೈಗೊಳ್ಳಲು ಸಾಧ್ಯವಿಲ್ಲ. ನಾಳಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ ಎಂದರು.

ಕೇಂದ್ರದ ನೆರೆ ಅಧ್ಯಯನದ ತಂಡದ ವರದಿಯನ್ವಯ ಆದಷ್ಟು ಬೇಗ ಕರ್ನಾಟಕಕ್ಕೆ ನೆರವು ಸಿಗಲಿದೆ‌. ಕೇಂದ್ರ ಸರ್ಕಾರ ಎಲ್ಲವನ್ನೂ ನಿಯಮಾನುಸಾರ ಮಾಡಬೇಕಿರುವ ಕಾರಣದಿಂದ ವಿಳಂಬವಾಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗುರಿ ಮಾಡಿಕೊಂಡಿರುವ ಕಾರಣದಿಂದಲೇ ಕರ್ನಾಟಕಕ್ಕೆ ಮೋದಿ ನೆರೆ ಪರಿಹಾರ ನೀಡಿಲ್ಲ ಎನ್ನುವುದು ಸರಿಯಲ್ಲ. ನೆರೆ ವಿಚಾರವನ್ನು ಮಾಧ್ಯಮಗಳು ರಾಜಕೀಯವಾಗಿ ನೋಡುವುದು ಸರಿಯಲ್ಲ ಎಂದು ಸದಾನಂದಗೌಡ ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com