ನಮ್ಮದು ಜನಪರ ಹೋರಾಟ, ಸದನದಲ್ಲಿ ಕಾಂಗ್ರೆಸ್ ಗೆ ಬೆಂಬಲವಿಲ್ಲ: ಕುಮಾರಸ್ವಾಮಿ
ಗುರುವಾರದಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಗೆ ವಿಷಯಾಧಾರಿತ ಬೆಂಬಲ ನೀಡುವ ಅಗತ್ಯವಿಲ್ಲ. ನಮ್ಮ ಪಕ್ಷದಿಂದ ಜನಪರ ಹೋರಾಟ ನಡೆಯಲಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
Published: 09th October 2019 05:53 PM | Last Updated: 09th October 2019 05:53 PM | A+A A-

ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಗುರುವಾರದಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಗೆ ವಿಷಯಾಧಾರಿತ ಬೆಂಬಲ ನೀಡುವ ಅಗತ್ಯವಿಲ್ಲ. ನಮ್ಮ ಪಕ್ಷದಿಂದ ಜನಪರ ಹೋರಾಟ ನಡೆಯಲಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆ.ಪಿ.ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮಸ್ಯೆಗಳಿಗೆ ಪಕ್ಷದಿಂದ ಹೋರಾಟ ಮಾಡಲಾಗುವುದು. ಜನಪರ ಸಮಸ್ಯೆಗಳಿಗೆ ಜಂಟಿಯಾಗಿ ಹೋರಾಟ ಮಾಡುವ ಅಗತ್ಯವಿಲ್ಲ. ಏಕಾಂಗಿಯಾಗಿ ಹೋರಾಟ ನಡೆಯಲಿದೆ ಎಂದರು.
ಕಾಂಗ್ರೆಸ್ ನ ಸಿದ್ದರಾಮಯ್ಯ ಅವರಿಗೆ ನಮಗಿಂತಲೂ ಹೆಚ್ಚಿನ ಶಕ್ತಿ ಹೊಂದಿದ್ದು, ಅವರ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರಿದ್ದಾರೆ. ಜೆಡಿಎಸ್ ಬೆಂಬಲ ಅವರಿಗೆ ಅಗತ್ಯವಿಲ್ಲ ಎಂದು ಭಾವಿಸಿದ್ದೇವೆ. ನಮ್ಮ ಶಕ್ತಿಯ ಮೇಲೆ ಅವರು ಅವಲಂಬಿತರಾಗಿಲ್ಲ. ನಾವು ನಮ್ಮ ಕೆಲಸ ನಾವು ಮಾಡುತ್ತೇವೆ. ಅವರು ತಮ್ಮ ಕೆಲಸ ಮಾಡುತ್ತಾರೆ ಎಂದರು.
ನೆರೆ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟ ಮಾಡುವ ಕುರಿತು ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.ಪಕ್ಷ ಸಂಘಟನೆ ಹಾಗೂ ಜೆಡಿಎಸ್ ಸರ್ಕಾರದಲ್ಲಿ ಜಾರಿಗೆ ತಂದಂತಹ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಮನಮುಟ್ಟಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಕುಂಠಿತಗೊಂಡಿರುವ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಲಾಗುವುದು. ನವೆಂಬರ್ 1 ರಿಂದ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸಕ್ಕೆ ಚಿಂತನೆ ನಡೆಸಿದ್ದು ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುವ ರೀತಿಯಲ್ಲಿ ಬಿಜೆಪಿಯಲ್ಲಿ ವಾಸ್ತವ ಇರುವುದೇ ಆದರೆ ಯಡಿಯೂರಪ್ಪ ಮಧ್ಯಂತರ ಚುನಾವಣೆಗೆ ಹೋಗುವುದು ಸೂಕ್ತ. ಮೈತ್ರಿ ಸರ್ಕಾರ ಇದ್ದಾಗ ಅಷ್ಟೋ ಇಷ್ಟೋ ಕೆಲಸ ಮಾಡಿದ್ದೇವೆ. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಏನೇನು ಕೆಲಸ ಆಗುತ್ತಿಲ್ಲ ಎಂಬುದು ಯತ್ನಾಳ್ ಹೇಳಿಕೆಯಿಂದ ತಿಳಿಯುತ್ತಿದೆ. ಅವರ ಹೇಳಿಕೆಯ ವಾಸ್ತವ ನೋಡಿದರೆ ಹೊಸದಾಗಿ ಚುನಾವಣೆಗೆ ಹೋಗುವುದು ಒಳ್ಳೆಯದು. ಯತ್ನಾಳ್ ಹೇಳಿಕೆ ಸತ್ಯವಾಗಿದ್ದಲ್ಲಿ ಯಡಿಯೂರಪ್ಪ ಈರೀತಿ ಸರ್ಕಾರ ನಡೆಸುವ ಬದಲು ಮಧ್ಯಂತರ ಚುನಾವಣೆಗೆ ಹೋಗಿ ಹೊಸದಾಗಿ ಮತ್ತೆ ಗೆದ್ದು ಬಂದು ಸರ್ಕಾರ ರಚಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಬಿಜೆಪಿ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದು ಅವರ ವ್ಯಯಕ್ತಿಕ ಅಭಿಪ್ರಾಯ. ಅವರ ನಿರ್ಧಾರದ ಬಗ್ಗೆ ತಾವು ಮಾತನಾಡಿಕೊಳ್ಳುತ್ತಾರೆ ಎಂದರು.
ಕೆಲವು ಬಾರಿ ಜೆಡಿಎಸ್ ಖಾಲಿಯಾಗುತ್ತದೆ .ಮತ್ತೆ ಹಲವು ಬಾರಿ ತಾನೇ ತಾನಾಗಿ ತುಂಬುತ್ತದೆ. ಮಗದೊಮ್ಮೆ ಅತಿ ಹೆಚ್ಚಾಗಿರುತ್ತದೆ. ಇದುವೇ ಕಾಲಚಕ್ರ ಎಂದು ಪರೋಕ್ಷವಾಗಿ ಮಾಜಿ ಶಾಸಕ ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದರು.
ನೈಸರ್ಗಿಕ ವಿಕೋಪಕ್ಕಾಗಿ ಕಾಯ್ದಿರಿಸಿದ್ದ ಹಣದಲ್ಲಿ ಕೆಲ ಪಾಲನ್ನು ಮಾತ್ರ ಕೆಲವೊಮ್ಮೆ ಮಾತ್ರ ರಾಜ್ಯಗಳಿಗೆ ಕೊಡುತ್ತಾರೆ. ಕಳೆದೈದು ವರ್ಷದಲ್ಲಿ ಮಹಾರಾಷ್ಟ್ರ, ರಾಜಸ್ಥಾನಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ಆದರೆ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ನೀಡಲಾಗಿದೆ. ಸ್ವಿಸ್ ಬ್ಯಾಂಕ್ ನಿಂದ ಹಣ ತರುತ್ತಿದ್ದು, ಎಲ್ಲರ ಖಾತೆಗೆ ಹಣ ಹಾಕುವ ಕಾಲ ಸನ್ನಿಹಿತವಾಗಿದೆ ಎಂದು ಕೇಂದ್ರದ ವಿರುದ್ಧ ಲೇವಡಿ ಮಾಡಿದರು.
15 ಲಕ್ಷ ಹಣವನ್ನು ಎಲ್ಲರ ಖಾತೆಗೆ ಹಾಕುವುದು ಬೇಡ. ನಿಜವಾಗಿಯೂ ಕಪ್ಪು ಹಣವನ್ನು ವಿದೇಶದಿಂದ ತಂದು ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಕೊಟ್ಟು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮಾತನಾಡಿ, ನಾಳೆಯಿಂದ ಅಧಿವೇಶನ ನಡೆಯಲಿದ್ದು, ಉಭಯ ಸದನಗಳಲ್ಲಿ ಪಕ್ಷದ ಶಾಸಕರು ಹೋರಾಟ ನಡೆಸುತ್ತಾರೆ. ನಗರದ ಮೌರ್ಯ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಸರ್ಕಾರದ ನೆರೆ ವೈಫಲ್ಯತೆ ಖಂಡಿಸಿ ಪಾದಯಾತ್ರೆ ಮಾಡಲಾಗುವುದು. ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಗುರುವಾರ ಸದನದ ಕಾರ್ಯಕಲಾಪ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.