ಕಾಂಗ್ರೆಸ್ ನಲ್ಲಿ ವರ್ಚಸ್ಸು ಹೆಚ್ಚಿಸಿಕೊಂಡ ಡಿ ಕೆ ಶಿವಕುಮಾರ್: ಕಾರಣ, ಜೈಲಿಗೆ ಹೋಗಿ ಬಂದದ್ದೇ, ಸೋನಿಯಾ ಭೇಟಿಯೇ?

ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದು ಅಲ್ಲಿ ಅದ್ದೂರಿ ಸ್ವಾಗತ ಪಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ನಂತರ ನಿನ್ನೆ ತಮ್ಮೂರಾದ ಕನಕಪುರದತ್ತ ಪ್ರಯಾಣ ಬೆಳೆಸಿದರು.
ದೊಡ್ಡಾಲಹಳ್ಳಿಯಲ್ಲಿ ಧಾರ್ಮಿಕ ಕ್ರಿಯೆ ನೆರವೇರಿಸಿದ ಡಿ ಕೆ ಶಿವಕುಮಾರ್ ಮತ್ತು ಕುಟುಂಬಸ್ಥರು
ದೊಡ್ಡಾಲಹಳ್ಳಿಯಲ್ಲಿ ಧಾರ್ಮಿಕ ಕ್ರಿಯೆ ನೆರವೇರಿಸಿದ ಡಿ ಕೆ ಶಿವಕುಮಾರ್ ಮತ್ತು ಕುಟುಂಬಸ್ಥರು

ಬೆಂಗಳೂರು: ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದು ಅಲ್ಲಿ ಅದ್ದೂರಿ ಸ್ವಾಗತ ಪಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ನಂತರ ನಿನ್ನೆ ತಮ್ಮೂರಾದ ಕನಕಪುರದತ್ತ ಪ್ರಯಾಣ ಬೆಳೆಸಿದರು.


ಬೆಂಗಳೂರಿನಿಂದ ಕನಕಪುರದ ದೊಡ್ಡಾಲಹಳ್ಳಿಗೆ ತಮ್ಮ ಪೂರ್ವಜರ ಮನೆಗೆ ಹೊರಟ ಡಿ ಕೆ ಶಿವಕುಮಾರ್ ಅವರ  ಸುಮಾರು 90 ನಿಮಿಷಗಳ ಪ್ರಯಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಅವರ ಬೆನ್ನತ್ತಿ ಹೋದರು. ಅಲ್ಲಿ ಕಾರಿನಿಂದ ಇಳಿದ ಡಿಕೆಶಿ ತಮ್ಮ ತಂದೆ ಮತ್ತು ಅಜ್ಜಿಯ ಸಮಾಧಿಗೆ ತೆರಳಿ ಧಾರ್ಮಿಕ ಕ್ರಿಯೆಗಳನ್ನು ಪೂರೈಸಿದರು.


ಈ ಧಾರ್ಮಿಕ ಕ್ರಿಯೆಗಳನ್ನು ನಾನು 7-8 ವಾರಗಳ ಹಿಂದೆಯೇ ನಡೆಸಬೇಕಾಗಿತ್ತು, ಆದರೆ ಜಾರಿ ನಿರ್ದೇಶನಾಲಯದವರು ಬಂಧಿಸಿ ಕರೆದುಕೊಂಡು ಹೋಗಿದ್ದರಿಂದ ಸಾಧ್ಯವಾಗಲಿಲ್ಲ ಎಂದರು. ಸಮಾಧಿ ಬಳಿ ತೆರಳಿ ಹಿರಿಯರಿಗೆ ಪೂಜೆ ಸಲ್ಲಿಸಿದ್ದು ನಿಮಿತ್ತ ಮಾತ್ರ, ಡಿ ಕೆ ಶಿವಕುಮಾರ್ ಅವರು ತಮ್ಮ ಕುಟುಂಬದವರ ಜೊತೆ ಸೇರಿಕೊಂಡು ಪಕ್ಷದ ನಾಯಕರು ತಮ್ಮನ್ನು ತುಳಿಯುವುದನ್ನು ತಡೆಯಲು ಹಿರಿಯರ ಮತ್ತು ದೇವರ ಮೊರೆ ಹೋದರು ಎಂದು ಅಲ್ಲಿ ನೆರೆದವರು ಮಾತನಾಡಿಕೊಂಡದ್ದು ಸುಳ್ಳಲ್ಲ.


ಜೈಲಿನಿಂದ ಹೊರಬಂದ ಡಿ ಕೆ ಶಿವಕುಮಾರ್ ಪ್ರಭಾವ ಕಾಂಗ್ರೆಸ್ ನಲ್ಲಿ ಮತ್ತಷ್ಟು ಜಾಸ್ತಿಯಾಗಿದೆ, ಹೈಕಮಾಂಡ್ ಅವರಿಗೆ ಪ್ರಮುಖ ಹುದ್ದೆಯನ್ನೇ ನೀಡಲಿದೆ ಎಂದು ಹೇಳುತ್ತಿರುವುದರ ಮಧ್ಯೆ ಅವರು ಮೊನ್ನೆ ಜೆಡಿಎಸ್ ಬಾವುಟ ಹಾರಿಸಿದರು ಎಂಬ ವಿಚಾರವನ್ನು ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ದೊಡ್ಡದು ಮಾಡಿರುವುದು ಅವರ ವಿರುದ್ಧ ಮತ್ತೊಮ್ಮೆ ವಿವಾದ ಸೃಷ್ಟಿಸಲು ನೋಡುತ್ತಿದ್ದಾರೆಯೇ ಎಂಬ ಸಂದೇಹ ಬರುವುದಂತೂ ಹೌದು.


ಮೊನ್ನೆ ಸೋರಿಕೆಯಾದ ವಿಡಿಯೊದಲ್ಲಿ ಸಿದ್ದರಾಮಯ್ಯನವರು, ಡಿ ಕೆ ಶಿವಕುಮಾರ್ ಜೆಡಿಎಸ್ ಬಾವುಟವನ್ನು ಹಾರಿಸಿದ್ದಾರೆ ಎಂದು ಹೇಳಿರುವುದು ಅವರ ವರ್ಚಸ್ಸಿಗೆ ಧಕ್ಕೆ ತರಲು ಮತ್ತು ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಿದ್ದರಾಮಯ್ಯ ನಡೆಸುತ್ತಿರುವ ಯತ್ನ ಎಂಬ ಮಾತುಗಳನ್ನು ಅಲ್ಲಗಳೆಯಲಾಗದು.


ಡಿ ಕೆ ಶಿವಕುಮಾರ್ ಗೆ ಸಮಸ್ಯೆ ಆರಂಭವಾಗಿದ್ದು ರಾಜ್ಯಸಭೆ ಚುನಾವಣೆಗೆ ಮೊದಲು ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಕರೆತಂದು ರೆಸಾರ್ಟ್ ನಲ್ಲಿಟ್ಟ ಮೇಲೆ, ನಂತರ ಐಟಿ ಇಲಾಖೆಯ ದಾಳಿ ನಡೆಯಿತು. ಶಾಸಕರು ರೆಸಾರ್ಟ್ ನಿಂದ ಬಿಡುಗಡೆಯಾದ ಮೇಲೆ 13 ಮಂದಿಯನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆಯಿತು. 


ಹಾಗಾದರೆ ಡಿ ಕೆ ಶಿವಕುಮಾರ್ ವರ್ಚಸ್ಸು ಹೆಚ್ಚಲು ಕಾರಣವೇನು?ಜೈಲಿಗೆ ಹೋಗಿಬಂದದ್ದೇ, ಅಥವಾ ಅಲ್ಲಿ ಸೋನಿಯಾ ಗಾಂಧಿ ಭೇಟಿಯಾದದ್ದೇ?


ಜೈಲಿನಿಂದ ಬಿಡುಗಡೆಯಾಗುವ ದಿನವೇ ಸೋನಿಯಾ ಗಾಂಧಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಜೈಲಿನಿಂದ ಬಿಡುಗಡೆಯಾದ ಮಾರನೇ ದಿನವೇ ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಹ್ಮದ್ ಪಟೇಲ್ ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದರು.
ಇಂದು ಬೆಂಗಳೂರಿನ ಸದಾಶಿವನಗರದ ತಮ್ಮ ಮನೆಯಲ್ಲಿರುವ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಕಾಂಗ್ರೆಸ್ ನಾಯಕರ ದಂಡೇ ಹರಿದುಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com