ನಿರಾಶ್ರಿತರ ಕೇಂದ್ರದಲ್ಲಿ ವಾಸ್ತವ್ಯ ಹೂಡಲು ಚಿಂತನೆ: ಸಚಿವ ಆರ್.ಅಶೋಕ್

ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸಂಕಷ್ಟಕ್ಕೀಡಾಗಿರುವ ನೆರೆ ಸಂತ್ರಸ್ತ ಪ್ರದೇಶಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ಅಲ್ಲಿನ ನಿರಾಶ್ರಿತ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಲು ಚಿಂತನೆ ನಡೆಸಿರುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಅವರು ಗುರುವಾರ ಹೇಳಿದ್ದಾರೆ.
ಆರ್ ಅಶೋಕ್
ಆರ್ ಅಶೋಕ್

ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸಂಕಷ್ಟಕ್ಕೀಡಾಗಿರುವ ನೆರೆ ಸಂತ್ರಸ್ತ ಪ್ರದೇಶಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ಅಲ್ಲಿನ ನಿರಾಶ್ರಿತ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಲು ಚಿಂತನೆ ನಡೆಸಿರುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಅವರು ಗುರುವಾರ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾಗಿರುವ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಮತ್ತು ಅತಿವೃಷ್ಟಿಯಿಂದ ಸಂತ್ರಸ್ತ ಪ್ರದೇಶಗಳಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ವಾಸ್ತವ್ಯ ಹೂಡುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸಲು ತೀರ್ಮಾನಿಸಿದ್ದೇನೆ. ನಿರಾಶ್ರಿತ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಖುದ್ದಾಗಿ ಅರಿತು, ಆಲಿಸಿ ಪರಿಹರಿಸುವ ಕೆಲಸ ಮಾಡುತ್ತೇನೆ. ಈ ವೇಳೆ ತಮ್ಮ ಜೊತೆ ಹಿರಿಯ ಹಾಗೂ ಜಿಲ್ಲೆಯ ಉನ್ನತ ಅಧಿಕಾರಿಗಳು ಸಹ ವಾಸ್ಯವ್ಯ ಹೂಡಲಿದ್ದಾರೆ ಎಂದರು.

ಕಚೇರಿಯಲ್ಲಿಂದು ಸರಳವಾಗಿ ಪೂಜೆ ಸಲ್ಲಿಸಿದ್ದು, ಮೊದಲು ಕಡತಗಳಿಗೆ ಸಹಿ ಹಾಕಿದ್ದೇನೆ. ಬೆಳಗಾವಿ ಹಾಗೂ ಇತರ ಪ್ರದೇಶಗಳಲ್ಲಿ ಮತ್ತೆ ಪ್ರವಾಹ ಎದುರಾಗುವ ಸಾಧ್ಯತೆ ಕಂಡು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 30 ಕೋಟಿ ರೂ, ಅದೇ ರೀತಿ ಶಿವಮೊಗ್ಗ ಜಿಲ್ಲೆಗೆ 10 ಕೋಟಿ ರೂ‌ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು‌. ಅರ್ಹರಿಗೆ ಮಾತ್ರ ಇದರ ಸೌಲಭ್ಯ ದೊರೆಯಬೇಕು. ಅನರ್ಹರಿಗೆ ಪರಿಹಾರ ದೊರೆಯಬಾರದು ಎಂದರು. 

ಮಡಿಕೇರಿ, ಬೆಳಗಾವಿ, ಲಿಂಗನಗನಮಕ್ಕಿ ಪ್ರದೇಶಗಳಲ್ಲಿ ಮತ್ತೆ ಮಳೆ ತೀವ್ರವಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್  ಘೋಷಣೆ ಮಾಡಲಾಗಿದೆ. ಬೆಳಗಾವಿಗೆ ಎನ್‌ಡಿಆರ್ ಎಫ್ ತಂಡಗಳು ಆಗಮಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಬಾಡಿಗೆ ಮನೆಗೆ ತೆರಳಲು ಇಷ್ಟವಿಲ್ಲದ ಕುಟುಂಬಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು 50 ಸಾವಿರ ರೂ ನೀಡಲು ನಿರ್ಧರಿಸಲಾಗಿದೆ. ನಿರಾಶ್ರಿತರಿಗೆ ಮನೆ ಕಟ್ಟಲು ನೀಡಲಾದ ನಿವೇಶನದಲ್ಲೇ ಅವರೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಹಣ ಕೊಡುತ್ತೇವೆ. ಕೂಡಲೇ ಅಂತಹ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಲಾಗುಗುವುದು. ಇದಕ್ಕೆ ಯಾವುದೇ‌ ದಾಖಲೆ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು ಮುಂದೆ‌ ಗಂಜಿ ಕೇಂದ್ರ ಹಾಗೂ ನಿರಾಶ್ರಿತರ ಕೇಂದ್ರವನ್ನು ಕಾಳಜಿ ಕೇಂದ್ರ ಎಂದು ಹೆಸರಿಡಲು ಸರ್ಕಾರ ತೀರ್ಮಾನಿಸಿದೆ. ಗಂಜಿ ಕೇಂದ್ರ ಎಂಬ ಪದ ಬಳಕೆ ಸರಿಯಾದುದಲ್ಲ. ಅದು ನೆರೆ ಸಂತ್ರಸ್ಥರಿಗೆ ಅವಮಾನ‌‌ ಮಾಡಿದಂತಾಗುತ್ತದೆ. ಇವುಗಳಿಗೆ ಕಾಳಜಿ ಕೇಂದ್ರ ಎಂದು ಹೆಸರಿಡಲು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದು, ಈ ಸಂಬಂಧ ಆದೇಶ ಹೋರಬೀಳಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ಅವರನ್ನು ಮುಖ್ಯಮಂತ್ರಿ ಅವರ ನೇತೃತ್ವದ ನಿಯೋಗ ಭೇಟಿ ಮಾಡಿ ಮಧ್ಯಂತರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಿದೆ. ನಾಲ್ಕು ದಿನಗಳ ಹಿಂದೆ ನೆರೆ ಮತ್ತು ಅತಿವೃಷ್ಟಿ ಹಾನಿ ಕುರಿತ ವರದಿಯನ್ನು ಕೇಂದ್ರದ ಗೃಹ ಇಲಾಖೆಗೆ ಸಲ್ಲಿಸಲಾಗಿದೆ. ಕೇಂದ್ರ‌ ಸರ್ಕಾರ ಅನುದಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಎಲ್ಲೂ ತುರ್ತು ಕಾಮಗಾರಿಗಳನ್ನು ಸ್ಥಗಿತಗೊಳಿಸಿಲ್ಲ. ಆ ರೀತಿಯ ಯಾವುದೇ ದೂರು, ಅರೋಪಗಳು ತಮ್ಮ ಗಮನಕ್ಕೆ ತಂದರೆ ತಕ್ಷಣ ಸೂಕ್ತ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಇನ್ನು ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿನ ರೈತರ ಸಾಲ ಮರುಪಾವತಿಗೆ ನೊಟೀಸ್ ನೀಡುವುದಾಗಲೀ, ಮರುಪಾವತಿಗೆ ಬಲವಂತಮಾಡದಂತೆ ಖಾಸಗಿ‌ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ‌. ಕೆಲವೆಡೆಗಳಲ್ಲಿ ಬ್ಯಾಂಕ್ ಗಳಿಂದ ನೋಟೀಸ್ ನೀಡಲಾಗಿರುವ ಮಾಹಿತಿ ತಮಗೆ ದೊರೆತಿದೆ ಹೇಳಿದರು.

ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ರಾಜಕೀಯ ಪ್ರೇರಿತ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ಹಿಂದೆ ಯಡಿಯೂರಪ್ಪ ಅವರನ್ನು ಲೋಕಾಯುಕ್ತ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾಗ ಕಾಂಗ್ರೆಸ್, ಜೆಡಿಎಸ್ ನಾಯಕರು ಏಕೆ ಈ ಮಾತು ಹೇಳಿರಲಿಲ್ಲ. ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ‌‌. ಡಿ.ಕೆ. ಶಿವಕುಮಾರ್ ಬಂಧನದಲ್ಲಿ ನಮ್ಮ ಪಕ್ಷ ಮತ್ತು ಸರ್ಕಾರದ ಪಾತ್ರವಿಲ್ಲ. ಇದು ಜಾರಿ ನಿರ್ದೇಶನಾಲಯ ನೀಡಿದ ಆದೇಶವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲಿನ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಿ ಹೊರ ಬಂದಿಲ್ಲವೇ..? ಎಂದು ಪ್ರಶ್ನಿಸಿದ ಅವರು, ನೀವು ಅದೇ ರೀತಿ ಕಾನೂನು ಹೋರಾಟ ನಡೆಸಿ ದೋಷಮುಕ್ತರಾಗಿ. ಅದರ ಬದಲು ಪ್ರತಿಭಟನೆ ನಡೆಸಿ ಬೆಂಕಿ ಹಚ್ಚುವುದು ಸರಿಯಲ್ಲ ಎಂದರು.

ಕಚೇರಿ ಪೂಜೆಗೆ ಆಗಮಿಸುವ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅಧಿಕಾರಿಗಳು ತಮಗೆ ಹೂವಿನ ಹಾರ, ತುರಾಯಿ ತರುವ ಬದಲು ನೆರೆ ಸಂತ್ರಸ್ತರಿಗೆ ಧನ ಸಹಾಯ ಮಾಡುವಂತೆ ಆರ್.ಅಶೋಕ್ ಮನವಿ ಮಾಡಿದರು. ಈ ಹಿನ್ನೆಲೆ ತಮ್ಮ ಕಚೇರಿಯಲ್ಲೇ ಪರಿಹಾರ ಸಂಗ್ರಹದ ಪೆಟ್ಟಿಗೆಯನ್ನು ಇಟ್ಟು ಕಚೇರಿ ಪೂಜೆಗೆ ಬಂದವರಿಂದ ದೇಣಿಗೆ ಸಂಗ್ರಹ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com