ಬಿಜೆಪಿ ಸೇರ್ತಾರಾ ಜಿಟಿಡಿ?: ಯಡಿಯೂರಪ್ಪ ಜೊತೆ ಮಾತುಕತೆ ಬಳಿಕ ಜೆಡಿಎಸ್ ನಾಯಕ ಹೇಳಿದ್ದಿಷ್ಟು! 

ಭವಿಷ್ಯದ ನಿರ್ಣಯದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ  ಎಂದು ಹೇಳುವ ಮೂಲಕ ಸ್ವಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ  ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ.
ಜಿಟಿಡಿ
ಜಿಟಿಡಿ

ಬೆಂಗಳೂರು: ಭವಿಷ್ಯದ ನಿರ್ಣಯದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ  ಎಂದು ಹೇಳುವ ಮೂಲಕ ಸ್ವಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ  ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ

ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಜಿ.ಟಿ.ದೇವೇಗೌಡ ಭೇಟಿ ನೀಡಿ, ಚಾಮುಂಡೇಶ್ವರಿ ಕ್ಷೇತ್ರದ ಅನುದಾನ ಹಂಚಿಕೆ, ಕಾಮಗಾರಿಗಳು ಹಾಗೂ ಹುಣಸೂರು ಕ್ಷೇತ್ರದ ಉಪಚುನಾವಣೆ ಸಂಬಂಧ ಮಹತ್ವದ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೂರು ವಿಧಾನಸಭಾ ಕ್ಷೇತ್ರದಿಂದಾಗಲೀ ಬೇರೆ ಕ್ಷೇತ್ರದಿಂದಾಗಲೀ ಪುತ್ರನನ್ನು ಕಣಕ್ಕಿಳಿಸುವುದಿಲ್ಲ. ಸದ್ಯಕ್ಕೆ ಬಿಜೆಪಿಗೆ ಸೇರುವುದಿಲ್ಲ. ಬಿಜೆಪಿ ನಾಯಕರು ‌ಪಕ್ಷಕ್ಕೆ ಆಹ್ವಾನಿಸಿಲ್ಲ. ಇನ್ನು ಮೂರುವರೆ ವರ್ಷ ಏನನ್ನೂ ಮಾತನಾಡುವುದಿಲ್ಲ. ಮುಂದೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮೂಲಕ ಭವಿಷ್ಯದಲ್ಲಿ ಬಿಜೆಪಿ ಸೇರಲಿರುವ   ಸುಳಿವು ನೀಡಿದರು.

ಮತಕ್ಷೇತ್ರ ಚಾಮುಂಡೇಶ್ವರಿ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳ ಕಾಮಗಾರಿಗೆ ತಡೆ ಆಗಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಟೆಂಡರ್ ಆಗಿದ್ದರೂ ಕಾಮಗಾರಿ ನಡೆಯುತ್ತಿಲ್ಲ. ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿ ಬಗ್ಗೆ  ಚರ್ಚಿಸಲು ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದಾಗಿ ಜಿ.ಟಿ.ದೇವೇಗೌಡ ಹೇಳಿದರು.

ಜೆಡಿಎಸ್  ಪಕ್ಷದ ಸಭೆ, ಸಮಾರಂಭಗಳಿಗೆ ಹೋಗುತ್ತಿಲ್ಲ. ಪಕ್ಷದಲ್ಲಿ ತಮಗೆ ಬಹಳಷ್ಟು ನೋವಾಗಿದೆ.  ಇದರಿಂದ ಸುಧಾರಿಸಿಕೊಳ್ಳಲು ಸಮಯ ಬೇಕು. ಹೀಗಾಗಿ ಸದ್ಯಕ್ಕೆ ಪಕ್ಷದ ಚಟುವಟಿಕೆಗಳಿಂದ ತಟಸ್ಥನಾಗಿದ್ದೇನೆ. ಪಕ್ಷದ ಕಾರ್ಯಕರ್ತರನ್ನು ಬಿಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಪಕ್ಷದಲ್ಲಿ ಇನ್ನೂ ಇದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ಪಕ್ಷದಲ್ಲಿ ವಿ.ಸೋಮಣ್ಣ, ರಾಮ್ ದಾಸ್, ನಾಗೇಂದ್ರ ಸೇರಿದಂತೆ ಇನ್ನೂ ಹಲವು ಸ್ನೇಹಿತರಿದ್ದಾರೆ. ಸ್ನೇಹಿತರಾದ ಕಾರಣ ಅವರ ಜೊತೆ ಕಾರ್ಯಕ್ರಮಗಳಿಗೆ ಹೋಗುವುದು, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿರುತ್ತೇನೆ. ಮೊದಲಿನಿಂದಲೂ ತಾವು ಪಕ್ಷಾತೀತ ವ್ಯಕ್ತಿ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಜೆಡಿಎಸ್‌ನಿಂದ ಒಂದು ಹೆಜ್ಜೆ ಮುಂದೆ ಇಟ್ಟಿರುವ ಜಿ.ಟಿ.ದೇವೇಗೌಡ ಅವರ ನಡೆಯಿಂದ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಸುಪ್ರಿಂಕೋರ್ಟ್ ನಲ್ಲಿ ಅನರ್ಹ ಶಾಸಕರ ಪ್ರಕರಣದ ತೀರ್ಪಿನ ಮೇಲೆ ಕಣ್ಣಿಟ್ಟಿರುವ ಜಿ.ಟಿ.ದೇವೇಗೌಡ ಅವರಿಗೆ ಬಿಜೆಪಿಯತ್ತ ಒಲವು ಇದ್ದರೂ ಬಿಜೆಪಿ ಸೇರುತ್ತೇನೆ ಎಂದು ಬಹಿರಂಗವಾಗಿ ಹೇಳುವಂತಿಲ್ಲ. ಒಂದು ವೇಳೆ ಜೆಡಿಎಸ್‌ ನಲ್ಲಿದ್ದು ಕೊಂಡು ಬಿಜೆಪಿ ಬಗ್ಗೆ ಮಾತನಾಡಿದರೆ ಪಕ್ಷ ಉಲ್ಲಂಘನೆ ಪ್ರಕರಣ ಎದುರಿಸಬೇಕಾಗುತ್ತದೆ. ಹೀಗಾಗಿ ಅವರು ಜಾಣ ನಡೆ ಅನುಸರಿಸುತ್ತಿದ್ದಾರೆ.

ಇನ್ನು ಹುಣಸೂರು ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಪುತ್ರ ಪ್ರಜ್ವಲ್ ಗೆ ಟಿಕೆಟ್ ಬಯಸಿದ್ದಾರೆ. ಆದರೆ ಕ್ಷೇತ್ರದ ಮೇಲೆ ಹೆಚ್.ವಿಶ್ವನಾಥ್ ಹಿಡಿತವೂ ಇದ್ದು, ಅವರು ತಮ್ಮ ಪುತ್ರನನ್ನು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ. ಮೈತ್ರಿ ಸರ್ಕಾರದ ಪತನಕ್ಕೆ ಸಹಕರಿಸಿರುವ ವಿಶ್ವನಾಥ್ ಗೆ ಕೊಟ್ಟ ಮಾತಿನಂತೆ ಅವರ ಪುತ್ರ ಅಮಿತ್ ದೇವರಹಟ್ಟಿಗೆ ಬಿಜೆಪಿ ಟಿಕೆಟ್ ಕೊಡುವ ಸಾಧ್ಯತೆಯೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com