ಸುಪ್ರೀಂನಲ್ಲಿ ಹಿನ್ನಡೆ, ಬಿಜೆಪಿ ಸರ್ಕಾರಕ್ಕೆ ಕೆಲ ಜೆಡಿಎಸ್ ಶಾಸಕರ ಅಭಯ: ಮುಂದಿನ ತಂತ್ರದ ಬಗ್ಗೆ ಅನರ್ಹರು ಚರ್ಚೆ

ಸ್ಪೀಕರ್ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರಿಂಕೋರ್ಟ್ ನಿರಾಕರಿಸಿರುವುದರಿಂದ ದಿಕ್ಕಾಪಾಲಾಗಿರುವ ಅನರ್ಹ ಶಾಸಕರು, ಮುಂದಿನ ರಾಜಕೀಯ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆ.
ಅನರ್ಹ ಶಾಸಕರು
ಅನರ್ಹ ಶಾಸಕರು

ಬೆಂಗಳೂರು: ಸ್ಪೀಕರ್ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರಿಂಕೋರ್ಟ್ ನಿರಾಕರಿಸಿರುವುದರಿಂದ ದಿಕ್ಕಾಪಾಲಾಗಿರುವ ಅನರ್ಹ ಶಾಸಕರು, ಮುಂದಿನ ರಾಜಕೀಯ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆ.

ಮುಂದೇನು ಮಾಡಬೇಕು ಎಂಬ ಕುರಿತು ಶುಕ್ರವಾರ ಅನರ್ಹ ಶಾಸಕ ಡಾ|ಕೆ.ಸುಧಾಕರ್ ಅವರ ಅತಿಥಿ ಗೃಹದಲ್ಲಿ ಸಭೆ ನಡೆಸಿದರು.

ಸರ್ಕಾರ ರಚನೆಗೆ ಸಹಕರಿಸಿದ್ದರೂ ಕಾನೂನು ಹೋರಾಟಕ್ಕೆ ಬಿಜೆಪಿಯಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ ಎಂದು ಸಭೆಯಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ.

ಈ ಮಧ್ಯೆ ಕೆಲ ಜೆಡಿಎಸ್ ಶಾಸಕರು ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಭಯ ನೀಡುತ್ತಿದ್ದು, ಅನರ್ಹ ಶಾಸಕರನ್ನು ಮತ್ತಷ್ಟು ಚಿಂತೆಗಿಡು ಮಾಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟ ತೀರ್ಪು ಹೊರಬೀಳದೆ, ಅತ್ತ ಸರಿಯಾಗಿ ವಿಚಾರಣೆಯೂ ನಡೆಯದೆ  ಅನರ್ಹ ಶಾಸಕರ ಸ್ಥಿತಿ ಸದ್ಯ ತ್ರಿಶಂಕು ಸ್ವರ್ಗದಂತಾಗಿದೆ. ಹೀಗಾಗಿ ಇಂದು ಮುಂದಿನ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಕೇಸುಗಳನ್ನು ಆದಷ್ಟು ಬೇಗ ವಿಚಾರಣೆ ನಡೆಸುವಂತೆ ಮಾಡುವುದು ಮತ್ತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅನರ್ಹ ಶಾಸಕರು ಈ ಸಭೆಯಲ್ಲಿ ಚರ್ಚಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕ ಬಿ.ಸಿ. ಪಾಟೀಲ್‌ ಅವರು, ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ವಕೀಲರ ಮೂಲಕ ಪ್ರಕರಣವನ್ನು ಆದಷ್ಟು ಬೇಗ ವಿಚಾರಣೆಗೆ ಬರುವಂತೆ ಮಾಡುವುದು ಹೇಗೆ ಎಂದು ನಾವು ಚರ್ಚೆ ನಡೆಸಿದೆವು ಎಂದರು.

ಬಿ.ಸಿ. ಪಾಟೀಲ್‌ ಮತ್ತು ಸುಧಾಕರ್‌ ಅಲ್ಲದೆ ಸಭೆಯಲ್ಲಿ ಅನರ್ಹ ಶಾಸಕರಾದ ಎಂ.ಟಿ.ಬಿ. ನಾಗರಾಜ್‌, ಮುನಿರತ್ನ, ಶ್ರೀಮಂತ್‌ ಪಾಟೀಲ್‌ ಮತ್ತು ಬೈರತಿ ಬಸವರಾಜ್‌ ಭಾಗವಹಿಸಿದ್ದರು.

ಸಭೆಯ ನಂತರ ಮಾತನಾಡಿದ ನಾಗರಾಜ್‌, ನಮ್ಮ ನಮ್ಮ ತಾಲೂಕುಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದೆವು ಎಂದಿದ್ದಾರೆ. ಜೊತೆಗೆ ಬಿಜೆಪಿ ಜೊತೆ ಸಂಪರ್ಕ ಕಡಿತಗೊಂಡಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com