ಬಿಎಸ್ ವೈ ವಿರೋಧಿಗಳಿಗೆ ಮತ್ತೆ ಪಟ್ಟ; ಒಳಗೊಳಗೆ ನಡೆಯುತ್ತಿದೆಯೇ ಸಂತೋಷ್-ನಳಿನ್ ಮಸಲತ್ತು?

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರುಗಳಾಗಿ ಎಂ ಬಿ ಭಾನು ಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುವರ್ಣ ಅವರನ್ನು ಮತ್ತೆ ನೇಮಕ ಮಾಡುತ್ತಿರುವುದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರನ್ನು ಅಸ್ಥಿರಗೊಳಿಸಲು ಎಂದು ಆರ್ ಎಸ್ಎಸ್ ನ ಉನ್ನತ ಮೂಲಗಳು ಆರೋಪಿಸಿವೆ. 
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮಂಗಳೂರು: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರುಗಳಾಗಿ ಎಂ ಬಿ ಭಾನು ಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುವರ್ಣ ಅವರನ್ನು ಮತ್ತೆ ನೇಮಕ ಮಾಡುತ್ತಿರುವುದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರನ್ನು ಅಸ್ಥಿರಗೊಳಿಸಲು ಎಂದು ಆರ್ ಎಸ್ಎಸ್ ನ ಉನ್ನತ ಮೂಲಗಳು ಆರೋಪಿಸಿವೆ.

ಸಂಘದ ಒಂದು ವರ್ಗ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಮೂಲಕ ರಾಜ್ಯ ಬಿಜೆಪಿಯನ್ನು ನಿಯಂತ್ರಣ ಮಾಡಿಕೊಳ್ಳುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಕನಸು ನಿಧಾನಕ್ಕೆ ಸಾಕಾರಗೊಳ್ಳಲಿದೆ ಎನ್ನಲಾಗುತ್ತಿದೆ.


ಕಳೆದ ಏಪ್ರಿಲ್ 2017ರಲ್ಲಿ ಪ್ರಕಾಶ್ ಮತ್ತು ಸುವರ್ಣ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಬಿಎಸ್ ವೈಯವರ ಏಕಪಕ್ಷೀಯ ನಿರ್ಧಾರಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಈ ಇಬ್ಬರು ನಾಯಕರು ಹಾಜರಾಗಿದ್ದರು. ಇವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಮಾಡುವ ವಿಚಾರ ಪೂರ್ವ ಯೋಜಿತವಾಗಿತ್ತು ಎಂದು ಆರ್ ಎಸ್ ಎಸ್ ಮೂಲಗಳು ಹೇಳಿವೆ. ಸಂತೋಷ್ ಅವರ ಇಚ್ಚೆಯಂತೆ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಆರ್ ಎಸ್ಎಸ್ ನಲ್ಲಿ ಹಲವರಿಗೆ ಈ ನಿರ್ಧಾರ ಇಷ್ಟವಾಗಿರಲಿಲ್ಲ, ಹಲವು ತಳಮಟ್ಟದ ನಾಯಕರನ್ನು ಕಡೆಗಣಿಸಿ ನಳಿನ್ ಕುಮಾರ್ ಕಟೀಲ್ ಅವರಿಗೆ ಮಣೆ ಹಾಕಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು.


2017ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪ್ರಕಾಶ್ ಮತ್ತು ಸುವರ್ಣ ಅವರನ್ನು ತೆಗೆದುಹಾಕಲಾಗಿತ್ತು, ಆ ಸಮಯದಲ್ಲಿ ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್ ನಲ್ಲಿ ಇವರು ಭಾಗಿಯಾಗಿದ್ದರು. ಸಂಘ ಪರಿವಾರದ ತತ್ವ, ಸಿದ್ಧಾಂತಗಳು ಸಂಘಟನೆಯನ್ನು ಬಲಪಡಿಸುವುದೇ ಹೊರತು ವ್ಯಕ್ತಿಯನ್ನಲ್ಲ. ಬಿ ಎಸ್ ಯಡಿಯೂರಪ್ಪನವರೂ ಕಷ್ಟಪಟ್ಟು ಈ ಮಟ್ಟಕ್ಕೆ ಬಂದವರು. ಅವರಿಗೂ ಅದರ ಅರಿವಿದೆ. ಈ ಕಾನೂನು ಸಂತೋಷ್ ಅವರಿಗೆ ಅನ್ವಯವಾಗುವುದಿಲ್ಲ ಎಂದು ಕಾಣುತ್ತದೆ, ಹೀಗಾಗಿ ಇಂದು ಬಿಜೆಪಿಯಲ್ಲಿ ಬಿಎಸ್ ವೈ ವರ್ಸಸ್ ಬಿಎಲ್ಎಸ್ ನಂತೆ ಕಂಡುಬರುತ್ತಿದೆ ಎಂದು ಮೂಲಗಳು ಹೇಳುತ್ತವೆ. 


ಬಿಎಸ್ ವೈಗೆ ಸೆಡ್ಡು ಹೊಡೆಯಲು, ಅವರ ಪ್ರಭಾವ ಕುಗ್ಗಿಸಲು ಸಂತೋಷ್ ಇಂತಹ ಯೋಜನೆಗಳಿಗೆ ನಳಿನ್ ಕುಮಾರ್ ಕಟೀಲ್ ಅವರನ್ನು ಮುಂದೆ ಬಿಟ್ಟು ಚೆಕ್ ಮೇಟ್ ಮಾಡುತ್ತಿದ್ದಾರೆ. ತಮ್ಮ ಇಷ್ಟದವರನ್ನು ಪ್ರಮುಖ ಹುದ್ದೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಸಂತೋಷ್ ಅವರ ಈ ನಿರ್ಧಾರಗಳು ತಮ್ಮದೇ ಆದ ಪರಿಣಾಮಗಳನ್ನು ಬೀರಲಿವೆ. ಅವರ ಕಾರ್ಯವೈಖರಿಯು ಅನೇಕ ತಳಮಟ್ಟದ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿವೆ ಎಂದರು.


ಕೇಂದ್ರದ ಬಿಜೆಪಿ ನಾಯಕರು ಬಿಎಸ್ ವೈಯವರನ್ನು ಹುದ್ದೆಯಿಂದ ಕೆಳಗಿಳಿಸಲು ನೋಡುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಈ ಬಗ್ಗೆ ಪ್ರತಿಕ್ರಿಯೆಗೆ ಬಿ ಎಲ್ ಸಂತೋಷ್ ಮತ್ತು ನಳಿನ್ ಕುಮಾರ್ ಕಟೀಲು ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com