ದೇವೇಗೌಡ
ದೇವೇಗೌಡ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಬಿಜೆಪಿ ಯತ್ನ: ಎಚ್.ಡಿ. ದೇವೇಗೌಡ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದು ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಲು ಬಿಜೆಪಿ ಹೊರಟಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಟೀಕಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದು ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಲು ಬಿಜೆಪಿ ಹೊರಟಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಟೀಕಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧದ ಬಗ್ಗೆ 1964ರ ಗೋ ಹತ್ಯೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಈ ಕಾಯಿದೆಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘಿಸಿದವರ ಮೇಲೆ ವಿಧಿಸಬಹುದಾದ ದಂಡ, ಜುಲ್ಮಾನೆ ಮತ್ತು ಇತರ ದಂಡನೆ ಬಗ್ಗೆ ಸೆಕ್ಷನ್ 11,12,13 ಮುಂತಾದವುಗಳಲ್ಲಿ ಅವಕಾಶವಿದೆ. 

2010ನೇ ಇಸವಿಯಲ್ಲಿ ರಾಜ್ಯದಲ್ಲಿದ್ದ ಅಂದಿನ ಬಿಜೆಪಿ ಸರ್ಕಾರ ತಂದ ಕಾನೂನಿನಲ್ಲಿ ಈ ಕಾಯಿದೆಯಲ್ಲಿ ಕಾಣಿಸಿದ ದಂಡನೆ, ಜುಲ್ಮಾನೆ, ಇತರ ದಂಡನೆಯನ್ನು ಸಮಾಜದ ಕೆಲವೊಂದು ಸಮುದಾಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಈ ಸಮುದಾಯಗಳನ್ನು ಗೋಹತ್ಯೆ ಬಗ್ಗೆ ಗುರಿ ಮಾಡಲು ವಿಧಿಸಬಹುದಾದ ದಂಡ ಮತ್ತು ಜುಲ್ಮಾನೆಗಳನ್ನು 1 ರಿಂದ 7 ಪಟ್ಟು ಜಾಸ್ತಿಮಾಡಿ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಲಾಯಿತು. ಈ ವಿಧೇಯಕವನ್ನು ವಿರೋಧಿಸಿ ಅಂದಿನ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸದನದಲ್ಲಿ ಧರಣಿ ನಡೆಸಿದರೂ ಈ ಧರಣಿ ಮಧ್ಯೆ ಈ ವಿಧೇಯಕವನ್ನು ಸದನದಲ್ಲಿ ಬಹುಮತ ಹೊಂದಿದ್ದ ಬಿಜೆಪಿ ಸರ್ಕಾರ ಪಾಸ್ ಮಾಡಿಕೊಂಡು ರಾಜ್ಯಪಾಲರ ಅನುಮೋದನೆಗೆ ವಿಧೇಯಕವನ್ನು ಕಳುಹಿಸಿತ್ತು.

ಈ ಸಂದರ್ಭದಲ್ಲಿ ಅಂದಿನ ರಾಜ್ಯಪಾಲ ಚತುರ್ವೇದಿ ಅವರನ್ನು ತಾವು ಮತ್ತು ತಮ್ಮ ಪಕ್ಷದ ಮುಖಂಡರೊಂದಿಗೆ ಭೇಟಿ ಮಾಡಿ ಈ ವಿಧೇಯಕಕ್ಕೆ ಅಂಗೀಕಾರ ನೀಡಬಾರದು ಎಂದು ಮನವಿ ಮಾಡಿದ್ದೆ. ಈ ವಿಧೇಯಕವನ್ನು ಅಂದಿನ ರಾಜ್ಯಪಾಲರು, ಈ ವಿಧೇಯಕದಲ್ಲಿ ಅಡಕವಾಗಿರುವ ಕೆಲವೊಂದು ನಿಬಂಧನೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿಗಳ ಅಂಗೀಕಾರ ಬೇಕೆಂದು ಕಳುಹಿಸಿದ್ದರು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದಾಗ, ತಾವು ಮತ್ತು ತಮ್ಮ ಪಕ್ಷದ ಮುಖಂಡರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮಸೂದೆಯಲ್ಲಿರುವ ಹಲವು ನಿಬಂಧನೆಗಳು ಸಮಾಜದಲ್ಲಿರುವ ಸಮುದಾಯಗಳಿಗೆ ಮತ್ತು ರೈತ ಸಮುದಾಯಕ್ಕೆ ಮಾರಕವೆಂದು ಮನವರಿಕೆ ಮಾಡಿಕೊಡಲಾಯಿತು.

ನಂತರ ರಾಜ್ಯದಲ್ಲಿ ಉಂಟಾದ ಸರ್ಕಾರದ ಬದಲಾವಣೆಯಲ್ಲಿ ಈ ಮಸೂದೆಯನ್ನು ವಾಪಸ್ ಪಡೆದು ನಿಷ್ಕ್ರಿಯಗೊಳಿಸಲಾಗಿದೆ. ಇಂತಹ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ 2020 ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ, ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲ ಕಲ್ಲೋಲ ಮಾಡಲು ಹೊರಟಿದೆ ಎಂದು ದೇವೇಗೌಡ ಟೀಕಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com