ಸಭಾಪತಿ ಅಧಿಕಾರಕ್ಕೆ ಅಂಟಿಕೊಂಡಿದ್ದರಿಂದ ಸಮಸ್ಯೆ ಸೃಷ್ಟಿ: ಸಚಿವ ಜೆ.ಸಿ. ಮಾಧುಸ್ವಾಮಿ

ಬಹುಮತ ಇಲ್ಲದಿದ್ದರೂ ಅಧಿಕಾರದಲ್ಲಿ ಉಳಿದುಕೊಳ್ಳಲು ಸಭಾಪತಿ ಪ್ರಯತ್ನಿಸಿದ್ದರಿಂದ ಪರಿಷತ್ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಾಧುಸ್ವಾಮಿ
ಮಾಧುಸ್ವಾಮಿ

ಬೆಂಗಳೂರು: ಬಹುಮತ ಇಲ್ಲದಿದ್ದರೂ ಅಧಿಕಾರದಲ್ಲಿ ಉಳಿದುಕೊಳ್ಳಲು ಸಭಾಪತಿ ಪ್ರಯತ್ನಿಸಿದ್ದರಿಂದ ಪರಿಷತ್ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ವಿರುದ್ಧ ವಿಶ್ವಾಸವಿಲ್ಲ, ಆದ್ದರಿಂದ ತಾವು ನಾಳೆಯ ಪರಿಷತ್ ಕಲಾಪದ ಅಧ್ಯಕ್ಷತೆ ವಹಿಸಬಾರದು ಎಂದು ನಿನ್ನೆ ಬಿಜೆಪಿ ಸದಸ್ಯರು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಪತ್ರ ಬರೆದಿದ್ದರು. ಅದನ್ನು ಮನ್ನಿಸಿ ಅವರು ಇಂದಿನ ಸಭೆಗೆ ಬರಬಾರದಿತ್ತು. ಮಾತ್ರವಲ್ಲ ಉಪ ಸಭಾಪತಿಗೆ ಪತ್ರ ಬರೆದು ಸಭೆಯ ಅಧ್ಯಕ್ಷತೆ ವಹಿಸುವಂತೆ ಕೋರಿದ್ದೆವು ಎಂದು ಹೇಳಿದರು.

ಪರಿಷತ್ ಗಂಟೆ ಮುಗಿದ ನಂತರವೇ ಉಪ ಸಭಾಪತಿ ಪೀಠಕ್ಕೆ ಬಂದು ಕುಳಿತಿದ್ದಾರೆ. ಮುಂದೆ ಏನೆಲ್ಲಾ ಮಾಡಬಹುದು ಎಂಬುದನ್ನು ಚರ್ಚಿಸಿ ತೀರ್ಮಾನ ಮಾಡುತ್ತೇವೆ, ಪರಿಷತ್ ಗೌರವ ಉಳಿಸಬೇಕಾದರೆ ಅವಿಶ್ವಾಸದ ಬಗ್ಗೆ ಚರ್ಚೆಯಾಗಲು ಅವಕಾಶ ಮಾಡಿಕೊಡಬೇಕಾಗಿತ್ತು ಎಂದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, 113 ವರ್ಷಗಳ ಇತಿಹಾಸದಲ್ಲಿ ದೇಶಕ್ಕೆ ಮಾದರಿಯಾದ ಪರಿಷತ್ ನಲ್ಲಿ ಇದೇ ಮೊದಲ ಬಾರಿಗೆ ಕೆಟ್ಟ ಘಟನೆ ನಡೆದಿದೆ. ಇದು ಪರಿಷತ್ ಗೆ ಅವಮರ್ಯಾದೆ, ಮಾನ ಮರ್ಯಾದೆ ಇಲ್ಲದವರು ಈ ರೀತಿ ಮಾಡಿದ್ದಾರೆ. ಇಲ್ಲಿ ಮೊದಲ ತಪ್ಪು ಕಾಂಗ್ರೆಸ್ ನವರದ್ದು, ಸಭಾಪತಿ ಅವಿಶ್ವಾಸ ನಿರ್ಣಯದ ಮೇಲೆ ಬಿಜೆಪಿಗೆ ನಾವು ಬೆಂಬಲ ನೀಡಿದ್ದರಿಂದ ಸಭಾಪತಿ ಕಲಾಪದಿಂದ ದೂರ ಉಳಿಯಬೇಕಾಗಿತ್ತು ಎಂದರು.

ಇದೀಗ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ್ದರಿಂದ ಈಗ ಯಾರು ಕುಳಿತರೂ ಅದಕ್ಕೆ ಬೆಲೆ ಇಲ್ಲ. ಇಂದಿನ ಘಟನೆಗೆ ಎಲ್ಲಾ ಸದಸ್ಯರು ಕಾರಣ ಎಂದರು.

ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ನಿಯಮಗಳ ಪ್ರಕಾರ ಉಪ ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಅದರಂತೆ ಅವರು ಕುಳಿತು, ಕಲಾಪ ಆರಂಭಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಗೂಂಡಾ ವರ್ತನೆ ಮಾಡಿದ್ದಾರೆ. ಭಾವನಾತ್ಮಕವಾಗಿ ನಮಗೆ ತುಂಬಾ ನೋವಾಗಿದೆ. ಯಾವ ಸಂಸ್ಕೃತಿಯನ್ನು ನಾವು ಪ್ರತಿನಿಧಿಸುತ್ತಿದ್ದೇವೆ ಎಂದು ಪ್ರಶ್ನಿಸಿದರು.

ಮಾರ್ಷಲ್ ಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಉಪ ಸಭಾಪತಿಗೆ ಮಾರ್ಷಲ್ ಗಳು ರಕ್ಷಣೆ ಕೊಟ್ಟಿಲ್ಲ. ಪೀಠದ ರಕ್ಷಣೆ ಮಾರ್ಷಲ್ ಗೆ ಸೇರಿಲ್ಲವೇ ? ಇದರ ಬಗ್ಗೆ ತನಿಖೆಯಾಗಬೇಕು. ಪ್ಯಾನೆಲ್ ನಲ್ಲಿ ಹೆಸರು ಇಲ್ಲದವರು ಪೀಠದಲ್ಲಿ ಕುಳಿತಾಗ ಅವರನ್ನು ಯಾಕಾಗಿ ಎಳೆದುಹಾಕಿಲ್ಲ. ಉಪ ಸಭಾಪತಿಗೆ ದೈಹಿಕವಾಗಿ ಹಲ್ಲೆ ನಡೆಸಿದಾಗಲೂ ಮಾರ್ಷಲ್ ಗಳು ಮೌನವಾಗಿದ್ದರು. ಇದು ವ್ಯವಸ್ಥಿತವಾಗಿ ನಡೆದ ಘಟನೆ ಎಂದು ಆರೋಪಿಸಿದರು.

ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಸೂಚನೆ ಪತ್ರ ನೀಡಿ 14 ದಿನಗಳ ಗಡುವು ಮುಗಿದಿದ್ದರಿಂದ ಇಂದು ಉಪ ಸಭಾಪತಿ ಕುಳಿತುಕೊಳ್ಳಬೇಕಾಗಿತ್ತು. ಅದರಂತೆ ಅವರು ಪೀಠದಲ್ಲಿ ಕುಳಿತುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com