ರಣಾಂಗಣವಾದ ವಿಧಾನ ಪರಿಷತ್ (ಸಂಗ್ರಹ ಚಿತ್ರ)
ರಣಾಂಗಣವಾದ ವಿಧಾನ ಪರಿಷತ್ (ಸಂಗ್ರಹ ಚಿತ್ರ)

ಪರಿಷತ್ ಜಟಾಪಟಿ: ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ಪಾಲನೆಯಾಗಿಲ್ಲ ಎಂದು ಒಪ್ಪಿದ ಬಿಜೆಪಿ

ಬಿಜೆಪಿ-ಕಾಂಗ್ರೆಸ್ ನಡುವೆ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಜಟಾಪಟಿಗೆ ವಿಧಾನಪರಿಷತ್ ಸಾಕ್ಷಿಯಾಗಿದ್ದು ಬಿಜೆಪಿಯಲ್ಲೇ ಹಲವು ನಾಯಕರಿಗೆ ಸರಿ ಕಂಡಿಲ್ಲ.
Published on

ಬೆಂಗಳೂರು: ಬಿಜೆಪಿ-ಕಾಂಗ್ರೆಸ್ ನಡುವೆ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಜಟಾಪಟಿಗೆ ವಿಧಾನಪರಿಷತ್ ಸಾಕ್ಷಿಯಾಗಿದ್ದು ಬಿಜೆಪಿಯಲ್ಲೇ ಹಲವು ನಾಯಕರಿಗೆ ಸರಿ ಕಂಡಿಲ್ಲ.

ಹೆಸರು ವರದಿಯಲ್ಲಿ ಬಹಿರಂಗಪಡಿಸುವುದಕ್ಕೆ ಇಚ್ಛಿಸದ ಕೆಲವು ಬಿಜೆಪಿ ನಾಯಕರು ವಿಧಾನ ಪರಿಷತ್ ಜಟಾಪಟಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ, ಆ ಘಟನೆಯನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ.

ವಿಧಾನಪರಿಷತ್ ನ ಅಧ್ಯಕ್ಷ, ಕಾಂಗ್ರೆಸ್ ನ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರವೇಶವನ್ನು ಒತ್ತಾಯಪೂರ್ವಕವಾಗಿ ತಡೆದು, ಉಪಾಧ್ಯಕ್ಷರನ್ನು ಆ ಸ್ಥಾನದಲ್ಲಿ ಕೂರಿಸಿದ ಬಿಜೆಪಿ ನಡೆಗೆ ಕಾಂಗ್ರೆಸ್ ಸದಸ್ಯರು ಕೆಂಡಾಮಂಡಲರಾಗಿ ಇಡೀ ವಿಧಾನಪರಿಷತ್ ಕಲಾಪವೇ ರಣಾಂಗಣವಾಗಿ ಮಾರ್ಪಾಡಾಗಿತ್ತು.

ಕಾಂಗ್ರೆಸ್ ನವರಾಗಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರು ಮಂಗಳವಾರದ ಕಲಾಪಕ್ಕೂ ಮುನ್ನ ಸ್ವತಃ ರಾಜೀನಾಮೆ ನೀಡುವುದಕ್ಕೆ ಮುಂದಾಗಿದ್ದರು. ಆದರೆ ಕಾಂಗ್ರೆಸ್ ನ ಹಿರಿಯ ನಾಯಕರು ಅವರನ್ನು ಪಾಲಿಸಲೇಬೇಕಾದ ಪ್ರಕ್ರಿಯೆಗಳನ್ನು ಬದಿಗಿರಿಸಿ ರಾಜೀನಾಮೆ ನೀಡಬೇಡಿ ಎಂದು ಸೂಚಿಸಿದ್ದರು. ಮತ್ತೊಮ್ಮೆ ಮಂಗಳವಾರದ ಪ್ರಹಸನ ಮುಕ್ತಾಯಗೊಂಡ ಬಳಿಕವೂ ರಾಜೀನಾಮೆ ನೀಡಲು ಮುಂದಾದ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ತಡೆಯಲಾಯಿತು. ಪರಿಷತ್ ನ ನಿಯಮಗಳ ಪ್ರಕಾರ, 14 ದಿನಗಳ ಮುನ್ನವೇ ನೋಟಿಸ್ ಜಾರಿ ಮಾಡಿ ನಂತರ ಸದನದಲ್ಲಿ ಪಟ್ಟಿಯಾಗಿರುವ ನಿರ್ಣಯಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಪ್ರಕ್ರಿಯೆಗಳನ್ನು ಪಾಲನೆ ಮಾಡದೇ ಇರುವುದಕ್ಕೆ ಆಡಳಿತ ಪಕ್ಷದ ನಾಯಕರ ಆತುರವಲ್ಲದೇ ಯಾವುದೇ ಕಾರಣವೂ ಇರಲಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ನಾಯಕರೂ ಸಹ ಘಟನೆ ಬಗ್ಗೆ ಆಂತರಿಕವಾಗಿ ತೀವ್ರ ಅಸಮಾಧಾನ ಹೊಂದಿದ್ದು, "ಪಕ್ಷಕ್ಕೆ ಈ ಘಟನೆಯಿಂದ ತೀವ್ರ ಮುಜುಗರ ಉಂಟಾಗಿದೆ. ಇದನ್ನು ಸಂಪೂರ್ಣವಾಗಿ ತಡೆಯಬಹುದಾಗಿತ್ತು. ಸದನದಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಿರುವುದರಿಂದ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗಿತ್ತಷ್ಟೇ. ಅದರ ಬದಲಾಗಿ ಉಪಾಧ್ಯಕ್ಷರನ್ನು ಸಭಾಧ್ಯಕ್ಷರ ಸ್ಥಾನದಲ್ಲಿ ಕೂರಿಸುವ ಅಗತ್ಯವಿರಲಿಲ್ಲ, ಅಧ್ಯಕ್ಷರಾಗಿದ್ದ ಶೆಟ್ಟಿ ಅವರು ಎಲ್ಲರಿಗೂ ಸಮಾಧಾನವಾಗುವ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ" ಎಂದು ಹೇಳಿದ್ದಾರೆ.

ಮತ್ತೋರ್ವ ಬಿಜೆಪಿ ಶಾಸಕ ಈ ಬಗ್ಗೆ ಮಾತನಾಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನ ಅನನುಭವಿ ವ್ಯಕ್ತಿಗಳಿಂದ ಪರಿಷತ್ ನಲ್ಲಿ ಈ ಅಚಾತುರ್ಯ ನಡೆದಿದೆ. ಪರಿಷತ್ ನ್ನು ರಣಾಂಗಣ ಮಾಡುವ ಬದಲು ಪ್ರಕ್ರಿಯೆಗಳನ್ನು, ನಿಯಮಗಳನ್ನು ಪಾಲನೆ ಮಾಡಬಹುದಾಗಿತ್ತು ಹಾಗೂ ನಿರ್ಣಯವನ್ನು ಕೈಗೆತ್ತಿಕೊಳ್ಳುವಂತೆ ಅಧ್ಯಕ್ಷರನ್ನು ಒತ್ತಾಯಿಸಬಹುದಾಗಿತ್ತು ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com