ಯಡಿಯೂರಪ್ಪ
ಯಡಿಯೂರಪ್ಪ

ತೀವ್ರ ಟೀಕೆಗಳ ಬಳಿಕ ಎಚ್ಚೆತ್ತ ಸರ್ಕಾರ: ಮಠಗಳಿಗೆ ಮತ್ತೆ ಧಾನ್ಯ ಪೂರೈಕೆ

ರಾಜ್ಯದ ಪ್ರಸಿದ್ಧ ಸಿದ್ಧಗಂಗಾ ಮಠ ಸೇರಿದಂತೆ ವೃದ್ಧಾಶ್ರಮ, ಅನಾಥಾಶ್ರಮದಂತಹ ಸಂಘ ಸಂಸ್ಧೆಗಳಿಗೆ ರಿಯಾಯಿತಿ ದರದಲ್ಲಿ ಅನ್ನದಾಸೋಹ ಯೋಜನೆಯಡಿ ನೀಡುತ್ತಿದ್ದ ಅಕ್ಕಿ, ಗೋಧಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಬ ವಿಷಯವನ್ನು ಮಾಜಿ ಸಚಿವ ಯುಟಿ ಖಾದರ್ ಬಹಿರಂಗಪಡಿಸಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ...
Published on

ಬೆಂಗಳೂರು: ರಾಜ್ಯದ ಪ್ರಸಿದ್ಧ ಸಿದ್ಧಗಂಗಾ ಮಠ ಸೇರಿದಂತೆ ವೃದ್ಧಾಶ್ರಮ, ಅನಾಥಾಶ್ರಮದಂತಹ ಸಂಘ ಸಂಸ್ಧೆಗಳಿಗೆ ರಿಯಾಯಿತಿ ದರದಲ್ಲಿ ಯೋಜನೆಯಡಿ ನೀಡುತ್ತಿದ್ದ ಅಕ್ಕಿ, ಗೋಧಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಬ ವಿಷಯವನ್ನು ಮಾಜಿ ಸಚಿವ ಯುಟಿ ಖಾದರ್ ಬಹಿರಂಗಪಡಿಸಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಇದೀಗ ಮತ್ತೆ ಅಕ್ಕಿ ಗೋಧಿ ಪೂರೈಸಲು ನಿರ್ಧರಿಸಿದೆ. 

ಮಂಗಳವಾರ ನಡೆದ ಸಚಿವ ಸಂಪುಟ ಸಬೆಯಲ್ಲಿ ಟಿಪ್ಪಣಿ ಮಂಡಿಸಿದ ಸರ್ಕಾರ, ಅನ್ನ ದಾಸೋಹ ಯೋಜನೆ ಮುಂದುವರೆಸುವ ಸಲುವಾಗಿ ರೂ.18 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಸಂಪುಟದ ನಿರ್ಧಾರಗಳನ್ನು ಸುದ್ದಿಗೋಷ್ಟಿಯಲ್ಲಿ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ. ಮಾಧುಸ್ವಾಮಿಯವರು, 351 ಕಲ್ಯಾಣ ಸಂಸ್ಥೆಗಳ 37,700 ಮಕ್ಕಳಿಗೆ ರಿಯಾಯಿ ದರದಲ್ಲಿ ಅಕ್ಕಿ ಹಾಗೂ ಗೋಧಿ ಪೂರೈಸಲಾಗುತ್ತಿತ್ತು. ಬಳಿಕ ಸರ್ಕಾರಿ ಶಾಲೆಗಳಿಗೆ ಮಾತ್ರ ಅಕ್ಕಿ ಹಾಗೂ ಗೋಧಿ ಪೂರೈಸಬೇಕು ಎಂಬ ಪ್ರಸ್ತಾವನೆ ಬಂದಿತ್ತು. 

ಇದೀಗ ಸಚಿವ ಸಂಪುಟ ಸಭೆಯಲ್ಲಿ ಈ ವರೆಗೆ ರಿಯಾಯಿತಿ ದರದಲ್ಲಿ ಅಕ್ಕಿ ಹಾಗೂ ಗೋಧಿ ಪಡೆಯುತ್ತಿದ್ದ ಸಂಸ್ಥೆಗಳಿಗೆ ಮುಂದಿನ ಒಂದು ವರ್ಷದವರೆಗೆ ಅಕ್ಕಿ ಗೋಧಿ ಪೂರೈಸಲು ರೂ.18 ಕೋಟಿ ಬಿಡುಗಡೆ ಮಾಡಿ ತೀರ್ಮಾನ ಮಾಡಲಾಗಿದೆ. ಇದರಿಂದ 37,700 ಮಕ್ಕಳಿಗೆ ಉಪಯೋಗವಾಗಲಿದೆ ಎಂದು ಹೇಳಿದರು. 

ಈ ಹಿಂದೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಖಾದರ್ ಅವರು, ತುಮಕೂರಿನ ಸಿದ್ಧಗಂಗಾ ಮಠ ಸೇರಿದಂತೆ ರಾಜ್ಯದಲ್ಲಿರುವ 453 ಮಠ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೀಡುತ್ತಿದ್ದ ಅನ್ನವನ್ನು ಸರ್ಕಾರ ಕಸಿದುಕೊಂಡಿದೆ. ಕಳೆದ ಮೂರು ತಿಂಗಳಿಂದ ಅಕ್ಕಿ ಹಾಗೂ ಗೋಧಿ ಪೂರೈಕೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದ್ದರು. 

ಮಛ ಮಾನ್ಯಗಳ 73,359 ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 7.2 ಲಕ್ಷ ಕೆಜಿ ಅಕ್ಕಿ, 3,67,950 ಕೆಜಿ ಗೋಧಿ ನೀಡಲಾಗುತ್ತಿತ್ತು. ಪ್ರತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿ 5 ಕೆಜಿ ಗೋಧಿ ವಿತರಿಸಲಾಗುತ್ತಿತ್ತು. ಇದೀಗ ಸರ್ಕಾರ ಏಕಾಏಕಿ ಅನ್ನ ದಾಸೋಹ ಯೋಜನೆ ರದ್ದುಗೊಳಿಸಿ ಬಡವರ ಅನ್ನಕ್ಕೆ ಕನ್ನ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

ಖಾದರ್ ಅವರ ಈ ಹೇಳಿಕೆ ಬೆನ್ನಲ್ಲೇ ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಹಲವರು ರಾಜ್ಯ ಸರ್ಕಾರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಅಕ್ಕಿ, ಗೋಧಿ ಪೂರೈಸುತ್ತಿದ್ದ ಅನ್ನ ದಾಸೋಹ ಯೋಜನೆಯಡಿ ಅಕ್ಕಿ ಪೂರೈಕೆ ಸ್ಥಗಿತಗೊಳಿಸಿರುವುದು ನಿಜ ಎಂದು ಸ್ಪಷ್ಟಪಿಸಿದ್ದರು. ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಟೀಕೆ ಹಾಗೂ ಆಕ್ರೋಶಗಳು ವ್ಯಕ್ತವಾಗಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com