ಕೆಪಿಸಿಸಿ ಅಧ್ಯಕ್ಷ ನೇಮಕಾತಿ: ಕಾಂಗ್ರೆಸ್'ಗಿಂತಲೂ ಜೆಡಿಎಸ್ ನಾಯಕರಲ್ಲಿ ಹೆಚ್ಚಿದ ಕುತೂಹಲ
ಬೆಂಗಳೂರು: ಉಪಚುನಾವಣೆ ಸೋಲಿನ ನೈತಿಕ ಹೊಣೆಹೊತ್ತು ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮುಂದೆ ಯಾರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆಂಬ ಕುತೂಹಲ ಹೆಚ್ಚಾಗಿದೆ. ಈ ನಡುವಲ್ಲೇ, ಕಾಂಗ್ರೆಸ್ ನಾಯಕರಿಗಿಂತಲೂ ಜೆಡಿಎಸ್ ನಾಯಕರಲ್ಲಿ ಕುತೂಹಲಗಳು ಹೆಚ್ಚಾದಂತಿದೆ.
ಕೆಲ ಜೆಡಿಎಸ್ ನಾಯಕರು ಹಾಗೂ ಅಧಿಕಾರದಲ್ಲಿರುವ ಶಾಸಕರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದರೆ, ಹಳೇ ಮೈಸೂರು ಬಾಗದ ನಾಯಕರು ಡಿ.ಕೆ.ಶಿವಕುಮರ್ ಅವರು ಕಾಂಗ್ರೆಸ್ ನೇತೃತ್ವ ವಹಿಸಿದರೆ, ಭವಿಷ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕೆಲ ನಾಯಕರು ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಬಳಿಯೂ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಡಿಕೆ.ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷರಾಗಿದ್ದೇ ಆದರೆ, ಅದು ಜೆಡಿಎಸ್ ಪಕ್ಷಕ್ಕೆ ಭಾರೀ ಹೊಡೆತ ನೀಡಲಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಪಕ್ಷದ ಕೆಲ ನಾಯಕರು ಈಗಾಗಲೇ ಕುಮಾರಸ್ವಾಮಿಯವರ ಮೇಲೆ ಅಸಮಾಧಾನ ಹೊಂದಿದ್ದು, ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಪ್ರಮುಖವಾಗಿ ಹಳೇ ಮೈಸೂರು ಭಾಗದ ನಾಯಕರೆಂದು ವರದಿಗಳು ತಿಳಿಸಿವೆ.
ತುಮಕೂರು ಭಾಗದ ನಾಯಕರಾಗಿರುವ ಮಾಜಿ ಸಚಿವ ಶ್ರೀನಿವಾಸ್, ಕಾಂತರಾಜು, ಸುರೇಶ್ ಬಾಬು, ಸುಧಾಕರ್ ಲಾಲ್ ಅವರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದು, ಪಕ್ಷಕ್ಕೆ ಸೇರ್ಪಡೆಗೊಳ್ಳಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಈ ನಾಯಕರು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಸಿದ್ಧರಿದ್ದಾರೆಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಮಧು ಬಂಗಾರಪ್ಪ ಹಾಗೂ ಜಿಟಿ ದೇವೇಗೌಡ ಕೂಡ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ನೇಮಕಾತಿಗಾಗಿ ಕಾದು ಕುಳಿತಿದ್ದಾರೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ