ನಿಮ್ಮ ಜೀನ್ ಗಳು ಪಾಕಿಸ್ತಾನದಲ್ಲಿರಬಹುದು, ನನ್ನ ಜೀನ್ ಈ ಮಣ್ಣಿನಲ್ಲಿದೆ: ಎಚ್.ಡಿ. ಕುಮಾರಸ್ವಾಮಿ ತಿರುಗೇಟು
ಬೆಂಗಳೂರು: ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ, ನಿಮ್ಮ ಜೀನ್ಗಳು ಪಾಕಿಸ್ತಾನದಲ್ಲಿರಬಹುದು ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ನನ್ನ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು, ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗತ್ತು" ಎಂಬ ಕವಿವಾಣಿ ನೆನಪಿರಲಿ. ಅವರ ಪ್ರತಿನಿಧಿ ನಾನು. ರೈತರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡವ ನಾನು. ನೀವು ನನ್ನನ್ನು ಕೊಲ್ಲಲಾದೀತೇ? ನನ್ನನ್ನು ಪಾಕಿಸ್ತಾನಿ ಎನ್ನುವಿರೇ? ಮುಂದೊಂದು ದಿನ ಪ್ರಾಯಶ್ಚಿತಪಡಲೆಂದೇ ಇಂದು ನೀವು ಮಾಡಿಕೊಳ್ಳುತ್ತಿರುವ ಪಾಪಗಳಿವು ಎಂದು ಟೀಕಿಸಿದ್ದಾರೆ.
ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದ ನಡೆದುಕೊಂಡು ಬಂದಿದೆ. ದೇವೇಗೌಡರಂಥವರ ಮೇಲೇ ಹಲ್ಲೆ ಪ್ರಯತ್ನಗಳು ನಡೆದಿವೆ. ಅವರಿಗೆ ಅಧಿಕಾರ ವಂಚಿಸಲು ಯತ್ನಿಸಿದ್ದನ್ನು ಸಮಾಜ ನೋಡಿದೆ. ಈಗ ಈ ಶಕ್ತಿಗಳು ನನ್ನ ವಿರುದ್ಧ ನಿಂತಿವೆ. ಇದಕ್ಕೆ ಬೆದರುವ ವ್ಯಕ್ತಿ ನಾನಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿಗೆ ಪಾಕ್ ಮೇಲೆ ಪ್ರೀತಿ ಬೆಳೆದಿದೆ. ಹೀಗಾಗಿ ಪಾಕ್ ಮೇಲೆ ಪ್ರೀತಿಯಿರುವ ಕುಮಾರಸ್ವಾಮಿ ದೇಶ ಬಿಟ್ಟು ತೊಲಗಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ