ಜೊತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದವರಿಂದ ಸರ್ಕಾರ ಪತನ: ಕ್ಷಮಿಸಿ ಬಿಡಿ ಕುಮಾರಣ್ಣ

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಕುಮಾರಸ್ವಾಮಿ ಅಭಿಮಾನಿಗಳು "Sorry ಕುಮಾರಣ್ಣ" ಎಂಬ ಹೆಸರಿನಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಅಭಿಯಾನ
ಜೆಡಿಎಸ್ ಕಾರ್ಯಕರ್ತರ ಅಭಿಯಾನ
Updated on

ಮಂಡ್ಯ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಕುಮಾರಸ್ವಾಮಿ ಅಭಿಮಾನಿಗಳು "Sorry ಕುಮಾರಣ್ಣ" ಎಂಬ ಹೆಸರಿನಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಜೊತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದವರಿಂದ ಸರ್ಕಾರ ಪತನವಾಗಿ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಯುವಂತಾಯಿತು. ಈ ಘಟನೆಯಿಂದಾಗಿ ಕುಮಾರಸ್ವಾಮಿ ಸೇರಿದಂತೆ ಅವರನ್ನು ನಂಬಿ, ಆರಾಧಿಸುತ್ತಿದ್ದ ಅಸಂಖ್ಯಾತ ಅಭಿಮಾನಿಗಳು, ಬೆಂಬಲಿಗರು ಆ ಕಹಿ ಘಟನೆಯಿಂದ ತುಂಬಾ ನೊಂದಿದ್ದರು. ಇಂದಿಗೂ ಆ ನೋವಿನಿಂದ ಕುಮಾರಸ್ವಾಮಿ ಆಗಲಿ, ಅವರ ಬೆಂಬಲಿಗರಾಗಲಿ ಹೊರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಆ ಕಹಿ ಘಟನೆಯಿಂದ ಹೊರಬಂದು ಮತ್ತೊಮ್ಮೆ ಹೊಸ ಚೈತನ್ಯ ಮೂಡುವಂತಾಗಲು ಈ ಅಭಿಯಾನ ಮಾಡಲಾಗಿದೆ ಎಂದು ಅವರ ಮಂಡ್ಯದ ಅಭಿಮಾನಿಗಳು ಹೇಳುತ್ತಾರೆ.

"Sorry ಕುಮಾರಣ್ಣ, ಕ್ಷಮಿಸಿ ಬಿಡಿ ಕುಮಾರಣ್ಣ, ಕುಮಾರಣ್ಣ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು" ಹೆಸರಿನ ಅಭಿಯಾನವನ್ನು ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಶುರು ಮಾಡಿದ್ದಾರೆ.

ಅಧಿಕಾರದಲ್ಲಿ ಇಲ್ಲದ ನಿಮ್ಮನ್ನು ನೋಡಲು ನಮ್ಮಿಂದ ಸಾಧ್ಯವಿಲ್ಲ. ನಂಬಿಕೆ ದ್ರೋಹಿಗಳು ಮಾಡಿದ ತಪ್ಪಿಗೆ ನಾವು ಕ್ಷಮೆ ಕೋರುತ್ತೇವೆ. ಅತಿಯಾಗಿ ನಂಬಿ, ನೀವೇ ಸಾಕಿ, ಬೆಳೆಸಿದವರು, ಗೆಲ್ಲಿಸಿದವರೇ ಇಂದು ನಿಮ್ಮ ಈ ಸ್ಥಿತಿಗೆ ಕಾರಣರಾಗಿದ್ದಾರೆ. ನಾವೆಂದೂ ಅವರನ್ನು ಕ್ಷಮಿಸುವುದಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
 
ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಮಾಡಿದ ಸಾಲಮನ್ನಾ, ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ, ಕೃಷಿ, ರೈತರು, ನೀರಾವರಿ, ಬಡವರು, ಹಿಂದುಳಿದವರು, ದಲಿತರು, ಉತ್ತರ ಕರ್ನಾಟಕ ಅಭಿವೃದ್ದಿ ಕೈಗೊಂಡಿದ್ದ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕುಮಾರಸ್ವಾಮಿ ಅವರ ಸಾಧನೆಯನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.

ಜನಪರ, ರೈತರ ಪರ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬ ಘೋಷಣೆಯುಳ್ಳ ಪೋಸ್ಟ್ ಗಳನ್ನು ತಮ್ಮ ತಮ್ಮ ವಾಟ್ಸಾಪ್ ಮತ್ತು ಫೇಸ್‌ಬುಕ್ ಪೇಜ್ ನಲ್ಲಿ ಹಾಕುವ ಮೂಲಕ ಮತ್ತೊಮ್ಮೆ ಕುಮಾರಣ್ಣನ ಮುಖ್ಯಮಂತ್ರಿ ಮಾಡುವ ಸಂಕಲ್ಪ ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com