ಅತೃಪ್ತಿ ಶಮನಕ್ಕೆ ಯತ್ನ: ಸಚಿವಕಾಂಕ್ಷಿಗಳಿಗೆ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ; 4 ಶಾಸಕರಿಂದ ರಿಜೆಕ್ಟ್

ಸಂಪುಟ ಪುನಾರಚನೆ ಕಾರ್ಯ ರಾಜ್ಯ ಸರ್ಕಾರದಲ್ಲಿ ಚುರುಕುಗೊಳ್ಳುತ್ತಿದ್ದು, ಈ ನಡುವೆ ಭುಗಿಲೇಳಲಿರುವ ಅತೃಪ್ತಿಯನ್ನು ಶಮನ ಮಾಡಲು ಯತ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಖುಷಿಯಲ್ಲಿಯೇ 24 ಮಂದಿ ಶಾಸಕರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ನೀಡಿ ಆದೇಶ ಹೊರಡಿಸಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ
Updated on

ಬೆಂಗಳೂರು: ಸಂಪುಟ ಪುನಾರಚನೆ ಕಾರ್ಯ ರಾಜ್ಯ ಸರ್ಕಾರದಲ್ಲಿ ಚುರುಕುಗೊಳ್ಳುತ್ತಿದ್ದು, ಈ ನಡುವೆ ಭುಗಿಲೇಳಲಿರುವ ಅತೃಪ್ತಿಯನ್ನು ಶಮನ ಮಾಡಲು ಯತ್ನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದ ಖುಷಿಯಲ್ಲಿಯೇ 24 ಮಂದಿ ಶಾಸಕರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ನೀಡಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ನೇಮಕಕ್ಕೆ ಹಲವರು ಅಸಮಾಧಾನಗೊಂಡಿದ್ದು, 3 ಶಾಸಕರು ಹುದ್ದೆ ತಿರಸ್ಕರಿಸಿದ್ದಾರೆಂದು ತಿಳಿದುಬಂದಿದೆ. 

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಹಂಚಿಕೆ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ. ನಿಗಮ ಮಂಡಳಿಗೆ ಆಯ್ಕೆಯಾದ ಕೆಲ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವರು ಮುಖ್ಯಮಂತ್ರಿಗಳನ್ನೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. 

ಚಿತ್ರದುರ್ಗದ ಬಿಜೆಪಿ ಹಿರಿಯನಾಯಕ ಜಿಹೆಚ್.ತಿಪ್ಪಾರೆಡ್ಡಿಯವರು ಸಾರ್ವಜನಿಕವಾಗಿಯೇ ನೇಮಕಾತಿಯನ್ನು ತಿರಸ್ಕರಿಸಿದ್ದು, ಇದು ನಮಗೆ ಮಾಡಿದ ಅವಮಾನವೆಂದು ತಿಳಿಸಿದ್ದಾರೆ. 

ನಾನು ಆರು ಬಾರಿ ಶಾಸಕನಾದವರು. ನನಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಬೇಕಿಲ್ಲ. ನಾನು ಸಚಿವ ಸ್ಥಾನಕ್ಕೆ ಅರ್ಹನಾದ ವ್ಯಕ್ತಿ. ಇದು ನನ್ನ ಹಕ್ಕು ಕೂಡ ಹೌದು. ಸಂಜೆ ಮುಖ್ಯಮಂತ್ರಿಗಳು ಖುದ್ದು ಕರೆ ಮಾಡಿದ್ದು, ನೇಮಕದ ಆದೇಶ ತಡೆ ಹಿಡಿದಿರುವುದಾಗಿ ಹೇಳಿದ್ದಾರೆಂದು ತಿಪ್ಪಾರೆಡ್ಡಿ ತಿಳಿಸಿದ್ದಾರೆ. 

ಶಾಸಕ ಪ್ರೀತಂ ಗೌಡರನ್ನು ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷರಾಗಿ ಹಾಗೂ ದತ್ತಾತ್ರೇಯ ಪಾಟೀಲ್ ರೆವೂರ್ ಅವರನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಅಸಮಾಧಾನವನ್ನು ವೈಯಕ್ತಿಕವಾಗಿ ಹಾಗೂ ನೇರವಾಗಿ ಮುಖ್ಯಮಂತ್ರಿಗಳ ಬಳಿಯೇ ಹೇಳಲು ನಿರ್ಧರಿಸಿದ್ದಾರೆ. 

ನಿಜಕ್ಕೂ ಈ ಬೆಳವಣಿಗೆ ಆಶ್ಚರ್ಯವನ್ನು ತಂದಿದೆ. ಇಂತಹ ದೊಡ್ಡ ಜವಾಬ್ದಾರಿ ನನಗೆ ಬೇಡ. ಇದಕ್ಕೆ ಮುಖ್ಯಮಂತ್ರಿಗಳು ಬೇರೆ ಯಾರನ್ನಾದರೂ ನೇಮಕ ಮಾಡಲಿ ಎಂದಿದ್ದಾರೆ. 

ಮಾಜಿ ಸಚಿವ ಹರತಾಳ್ ಹಾಲಪ್ಪ, ಎಂ.ಪಿ ಕುಮಾರಸ್ವಾಮಿ, ರಾಜು ಗೌಡ, ಎ.ಎಸ್. ಪಾಟೀಲ್ ನಡಹಳ್ಳಿ ಹಾಗೂ ಕಾಳಪ್ಪ ಬಂಡಿಯವರೂ ಕೂಡ ನೇಮಕಾತಿಗೆ ಅಸಮಾಧಾನಗೊಂಡಿದ್ದಾರೆ. ಆದರೆ, ಮೌನದಿಂದಿರುವ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 

ಆದರೆ. ಎಂ.ಚಂದ್ರಪ್ಪ, ಅರಗ ಜ್ಞಾನೇಂದ್ರ ಅವರು ಯಡಿಯೂರಪ್ಪ ಜೊತೆಗೆ ಕೆಲಸ ಮಾಡಲು ಯಾವುದೇ ಸ್ಥಾನ ನೀಡಿದರೂ ಕೆಲಸ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ. 

ಈ ನಡುವೆ 20 ಮಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡವುದರಿಂದ ಸಂಪುಟ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ. ಸಿಪಿ ಯೋಗೇಶ್ವರ್ ಹಾಗೂ ಹೆಚ್.ವಿಶ್ವನಾಥ್ ಅವರಿಗೆ ಕೊಂಚ ನಿರಾಳ ಎದುರಾದಂತಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com