ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ: ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಅಂತಿಮ ನಿರ್ಧಾರ
ಬೆಂಗಳೂರು: ಜೂನ್ 19 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಈಗಾಗಲೇ ಮೂರೂ ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆಯಲ್ಲಿ ತೊಡಗಿವೆ. ಪ್ರಮುಖವಾಗಿ ಜೆಡಿಎಸ್ ಕೂಡ ಅಭ್ಯರ್ಥಿ ಆಯ್ಕೆಗೆ ಮುಂದಾಗಿದೆ.
ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಸಭೆಯಲ್ಲಿ ದೇವೇಗೌಡರ ಸ್ಪರ್ಧೆ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.
ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.
ಈಗಾಗಲೇ ರಾಜ್ಯಸಭೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸ್ಪರ್ಧೆ ಮಾಡುವಂತೆ ಬಹುತೇಕ ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಒತ್ತಡ ಹಾಕುತ್ತಿದ್ದಾರೆ. ರಾಜ್ಯಸಭೆಗೆ ದೇವೇಗೌಡರೇ ಹೋಗಬೇಕೆಂದು ಶಾಸಕರ ಒತ್ತಡವಾಗಿದೆ. ಆದರೆ, ದೇವೇಗೌಡರು ಮಾತ್ರ ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ಆಸಕ್ತಿ ತೋರಿಲ್ಲ ಎಂದು ಜೆಡಿಎಸ್ ಎಂಎಲ್ ಸಿ ಟಿ ಎ ಶರವಣ ಹೇಳಿದ್ದಾರೆ.
ಜೆಡಿಎಸ್ನಿಂದ ಯಾವುದೇ ಅಭ್ಯರ್ಥಿಆಯ್ಕೆಯಾಗಬೇಕಿದ್ದರೂ ಅವರ ಗೆಲುವಿಗೆ 45 ಮತಗಳು ಬೇಕು. ಸದ್ಯ ಜೆಡಿಎಸ್ ನಲ್ಲಿ 34 ಜನ ಶಾಸಕರು ಇದ್ದು, ಉಳಿದ ಮತಗಳನ್ನು ಕಾಂಗ್ರೆಸ್ ನಿಂದ ಪಡೆಯಲು ಜೆಡಿಎಸ್ ಮನಸ್ಸು ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಲು ಜೆಡಿಎಸ್ ಮುಂದಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ