ಶಾಸಕರು ಒಂದೆಡೆ ಸೇರಿ ಚಹಾ ಕುಡಿದರೆ, ಊಟ ಮಾಡಿದರೆ ಅದು ಭಿನ್ನಮತವೆ? ನಳಿನ್ ಕುಮಾರ್ ಕಟೀಲ್

ನಮ್ಮ ಪಕ್ಷದ ಶಾಸಕರು ಒಂದೆಡೆ ಸೇರಿ ಊಟ ಮಾಡಿ, ಚಹಾ ಸೇವಿಸಿ ಮಾತುಕತೆ ಮಾಡಿದರೆ ಅದು ಭಿನ್ನಮತವೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಕೊಪ್ಪಳ: ನಮ್ಮ ಪಕ್ಷದ ಶಾಸಕರು ಒಂದೆಡೆ ಸೇರಿ ಊಟ ಮಾಡಿ, ಚಹಾ ಸೇವಿಸಿ ಮಾತುಕತೆ ಮಾಡಿದರೆ ಅದು ಭಿನ್ನಮತವೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿಯಲ್ಲಿ ರಾಜ್ಯಸಭಾ ಅಭ್ಯರ್ಥಿಗಳಾಗಿ ಆಯ್ಕೆಗೊಂಡಿರುವ ಅಶೋಕ್ ಗಸ್ತಿ ಅವರಿಗೆ ಸಿಹಿ ತಿನ್ನಿಸಿ, ಈರಣ್ಣ ಕಡಾಡಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆಮಾತನಾಡಿದ ಅವರು, ಮಾತುಕತೆ ಮಾಡಿದ್ದನ್ನು ಭಿನ್ನಮತ ಎಂದು ತಿಳಿದುಕೊಂಡರೆ ನಾವೇನು ಮಾಡಲು ಸಾಧ್ಯವಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಚರ್ಚೆ ನಡೆಸಿ ಬಳಿಕ ಊಟ ಮಾಡಲು ಸೇರಿದ್ದೇವೆ ಎಂದು ಈಗಾಗಲೇ ಅವರೆಲ್ಲಾ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂದರು.

ಶಾಸಕ ಉಮೇಶ್ ಕತ್ತಿ ನಮ್ಮ ಜೊತೆಗಿದ್ದು, ಅವರು ಪಕ್ಷ ತೊರೆಯುವುದಿಲ್ಲ. ರಾಜ್ಯದಲ್ಲಿ ಈಗ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ತರವಲ್ಲ. ಸಿದ್ದರಾಮಣ್ಣ ಗೊಂದಲ ಸೃಷ್ಟಿಸುವುದರಲ್ಲಿ ಮೊದಲಿಗರು. ಅವರು ಮುಖ್ಯಮಂತ್ರಿಯಾಗಿದ್ದಾಗ ಬೇರೆ ಕೈಗಳು ಕೆಲಸ ಮಾಡಿದ್ದಾವೋ ಇಲ್ಲವೋ ಗೊತ್ತಿಲ್ಲ. ಆದರೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗೆ ಇಳಿಸುವ ಕೆಲಸ ಮಾಡಿದ್ದರು. ನಮ್ಮ ಪಾರ್ಟಿಯಲ್ಲಿ ಏಕೈಕ ನಾಯಕ ಎಂದರೆ ಅದು ಯಡಿಯೂರಪ್ಪ. ಈಗ ಅವರೊಬ್ಬರೇ ಮುಖ್ಯಮಂತ್ರಿ ಎಂದರು. 

ಒಟ್ಟು 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು ಅನನ್ಯ. ದೇಶದ ಹಿತದೃಷ್ಟಿಯಿಂದ ಲಾಕ್ ಡೌನ್ ಅನ್ನು ಹಾಗೆಯೇ ಮುಂದುವರೆಸಲು ಬರುವುದಿಲ್ಲ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ವರದಿ, ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸೋಂಕು ನಿಯಂತ್ರಣದಲ್ಲಿದ್ದು, ಮರಣ ಪ್ರಮಾಣ ಕಡಿಮೆ ಇದೆ. ಇದೆಲ್ಲವನ್ನು ಗಮನಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಸಕಾಲಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಅಶೋಕ್ ಗಸ್ತಿ ಮಾತನಾಡಿ, ನಾನೊಬ್ಬ ಬಿಜೆಪಿ ಕಾರ್ಯಕರ್ತ ನನಗೆ ಟಿಕೆಟ್ ನೀಡಿರುವುದು ಪಕ್ಷದ ನಿರ್ಣಯ. ನಾನು ಯಾವತ್ತೂ ಏನನ್ನೂ ಕೇಳಿಲ್ಲ. ಯಾವುದನ್ನೂ ಬಯಸಿಲ್ಲ. ಪಕ್ಷ ನನ್ನ ಕೆಲಸ ಗುರುತಿಸಿ ಕೆಲಸ ಮಾಡಿದೆ ಎಂದರು.

ಪಕ್ಷ ಕೊಟ್ಟ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನಗೆ ಪಕ್ಷ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಪಕ್ಷದ ನಿರ್ಣಯ ಕಾರ್ಯಕರ್ತರಿಗೆ ಸಲ್ಲುವ ಗೌರವ ಪಕ್ಷ ಕಾರ್ಯಕರ್ತರನ್ನು ಗುರುತಿಸಿರುವುದು ಸಂತೋಷ ತಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com