ಮೇಲ್ಮನೆಯಲ್ಲಿ ದೊರೆಸ್ವಾಮಿ v/s ಸಾವರ್ಕರ್ ಗದ್ದಲ: ಚರ್ಚೆ ನೀತಿ ನಿರೂಪಣಾ ಸಮಿತಿಗೆ ಶಿಫಾರಸು

ನಿಜವಾಗಿಯೂ ಯಾರು ಸ್ವಾತಂತ್ರ್ಯ ಹೋರಾಟಗಾರರೆಂಬ ಆಡಳಿತಾರೂಢ ಮತ್ತು ವಿಪಕ್ಷ ಸದಸ್ಯರ ನಡುವೆ ಬಿರುಸಿನ ಚರ್ಚೆಗೆ ಗ್ರಾಸವಾದ ಘಟನೆ ಮೇಲ್ಮನೆಯಲ್ಲಿಂದು ನಡೆಯಿತು.
ಸಾವರ್ಕರ್-ದೊರೆಸ್ವಾಮಿ
ಸಾವರ್ಕರ್-ದೊರೆಸ್ವಾಮಿ
Updated on

ಬೆಂಗಳೂರ: ನಿಜವಾಗಿಯೂ ಯಾರು ಸ್ವಾತಂತ್ರ್ಯ ಹೋರಾಟಗಾರರೆಂಬ ಆಡಳಿತಾರೂಢ ಮತ್ತು ವಿಪಕ್ಷ ಸದಸ್ಯರ ನಡುವೆ ಬಿರುಸಿನ ಚರ್ಚೆಗೆ ಗ್ರಾಸವಾದ ಘಟನೆ ಮೇಲ್ಮನೆಯಲ್ಲಿಂದು ನಡೆಯಿತು. 

ಬಿಜೆಪಿ ಸಾವರ್ಕರ್ಅ ನ್ನು ನಿಜವಾದ ದೇಶದ ಹೋರಾಟಗಾರ ಎಂದು ಬಿಂಬಿಸಲೆತ್ನಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ದೊರೆಸ್ವಾಮಿ ಬಗ್ಗೆ ತಮ್ಮ ನಿಲುವನ್ನು ಪ್ರತಿಪಾದಿಸಿದರು‌. ಬುಧವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಬಸನಗೌಡ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಮತ್ತು ಸರ್ಕಾರದ ಕ್ಷಮೆಗೆ ಒತ್ತಾಯಿಸಿ ಕಳೆದೆರಡು ದಿನಗಳಿಂದ‌ ನಡೆಸುತ್ತಿರುವ ಧರಣಿಯನ್ನು ಮುಂದುವರೆಸಿದರು. ಜೆಡಿಎಸ್ ಹಿರಿಯ ಸದಸ್ಯ ಹೊರಟ್ಟಿ ಮಾತನಾಡಿ, ಧರಣಿಗೆ ತಾರ್ಕಿಕ ಅಂತ್ಯ ಹಾಡಬೇಕು. ಸದನ ವ್ಯವಸ್ಥಿತವಾಗಿ ನಡೆಯಬೇಕು. ಬಸನಗೌಡ  ಪಾಟೀಲ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಿ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಆ ಬಗ್ಗೆ ಚರ್ಚೆ ಆಗಲಿ. ಬಿಜೆಪಿ ಒಂದು ತೀರ್ಮಾನಕ್ಕೆ ಬರಲಿ ಎಂದು ಸಲಹೆ ನೀಡಿದರು.

ಆಗ  ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸದನ ಸರಿಯಾಗಿ ನಡೆಯಲಿ. ಶಾಸಕರಿಂದ  ಸ್ಪಷ್ಟೀಕರಣ ಕೊಡಿಸೋಣ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿ. ಪ್ರಶ್ನೋತ್ತರ ನಡೆಯಲಿ ಎಂದರು. ಕೆಲವು ಬಾರಿ ಶಾಸಕರು ವೈಯಕ್ತಿಕವಾಗಿ ಹೇಳಿಕೆ ಕೊಡುತ್ತಾರೆ. ಆಗ ಶಾಸಕರಿಗೆ ತಮ್ಮ  ಹೇಳಿಕೆಗೆ ಸ್ಪಷ್ಟೀಕರಣ ನೀಡಿ ಎನ್ನಬಹುದೇ ವಿನಃ ಹೀಗೆಯೇ ನಡೆದುಕೊಳ್ಳಿ ಎನ್ನಲು  ಸಾಧ್ಯವಿಲ್ಲ ಎಂದರು. ಸಭಾನಾಯಕರ ಉತ್ತರದಿಂದ ತೃಪ್ತರಾಗದ ಹೊರಟ್ಟಿ ಮತ್ತೆ ಮಾತನಾಡಿ,  ಸರ್ಕಾರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಲಿ ಸಾಕು. ಒಂದು ವಿಷಾದ ವ್ಯಕ್ತಪಡಿಸಿದರೆ  ಆಕಾಶ ಕಳಚಿ ಬೀಳುವುದಿಲ್ಲ. ಸ್ಪಷ್ಟೀಕರಣ ಕೊಡಿಸುತ್ತೇವೆ ಎನ್ನುವುದು ಸರಿಯಾದ  ಪರಿಹಾರವಲ್ಲ. ನಾವು ರವಿಕುಮಾರ್ ಅವರ ಬಗ್ಗೆ ಹೇಗೆ ಬೇಕಾದರೂ ಹೇಳಬಹುದು. ಹೀಗೆಯೇ  ನಡೆದುಕೊಳ್ಳಿ ಎಂದು ಹೇಳಲಿಲ್ಲ ಎಂದು ತಿರುಗೇಟು ನೀಡಿದರು. ಆಗ ಮಾತನಾಡಿದ ಕೋಟಾ  ಶ್ರೀನಿವಾಸ ಪೂಜಾರಿ, ಸ್ಪಷ್ಟೀಕರಣ ಕೊಡುತ್ತೇವೆ ಎಂದರು.

ವಿಪಕ್ಷ ನಾಯಕ  ಎಸ್.ಆರ್.ಪಾಟೀಲ್ ಮಾತನಾಡಿ, ದೊರೆಸ್ವಾಮಿ ಕೊಲೆಪಾತಕರು ಅವರಿಗೆ ನಾಚಿಕೆಯಾಗಬೇಕು ಎಂದು  ರವಿಕುಮಾರ್ ಹೇಳಿದ್ದು ಸಹ ಸರಿಯಲ್ಲ. ಕಡತದಲ್ಲಿ ಇದು ದಾಖಲಾಗಿದೆ. ಹೊರಟ್ಟಿಯವರು  ಅಮೂಲ್ಯವಾದ ಸಲಹೆಯನ್ನೇ ನೀಡಿದ್ದಾರೆ ಎಂದಾಗ ಬಿಜೆಪಿಯ ಅರುಣ್ ಶಹಾಪೂರ್  ಮಧ್ಯಪ್ರವೇಶಿಸಿ, ಕಡತದಲ್ಲಿ ಇಲ್ಲದನ್ನು ಸಭಾನಾಯಕರು ಹೇಳುತ್ತಿದ್ದಾರೆ ಎಂದರು. ಮತ್ತೆ ಮಾತು ಮುಂದುವರೆಸಿದ ಎಸ್.ಆರ್.ಪಾಟೀಲ್, ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ಕ್ಷಮೆ  ಕೇಳಿದರೆ ಸಾಕಷ್ಟು ಸಮಸ್ಯೆಗಳು ಬಗೆಹರಿದು ಬಿಡುತ್ತವೆ. ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ  ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಇಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸುವುದನ್ನು ಬಿಟ್ಟು ಬಿಜೆಪಿಗರು ಮತ್ತೆ ಮತ್ತೆ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗಬೇಕು. ಅದಕ್ಕೂ ಅವಕಾಶ ಕೊಡುತ್ತೇವೆ‌. ಹೀಗಾಗಿ ಸರ್ಕಾರ ಯತ್ನಾಳ್ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟು ವಿಷಾದ ವ್ಯಕ್ತಪಡಿಸಲಿ ಎಂದರು.

ಬಳಿಕ ರವಿಕುಮಾರ್ ಅವರಿಗೆ ಸಭಾಪತಿ ಪ್ರತಾಪ್ ಚಂದ್ರ  ಶೆಟ್ಟಿ ಮಾತನಾಡಲು ಅವಕಾಶ ನೀಡಿದರು. ಸಾವರ್ಕರ್ ಸ್ವಾತಂತ್ರ್ಯ ಆಂದೋಲನದ ಕೇಂದ್ರಬಿಂದು ಎಂದು ಸಾವರ್ಕರ್ ಬಗ್ಗೆ ವಿವರವನ್ನು ಬಿಚ್ಚಿಡಲು ಮುಂದಾದಾಗ ವಿಪಕ್ಷ ಸದಸ್ಯರು ಆಕ್ಷೇಪ  ವ್ಯಕ್ತಪಡಿಸಿದರು. ದೊರೆಸ್ವಾಮಿ ಬಗ್ಗೆ ಚರ್ಚೆಯಾಗಲಿ ಅದನ್ನು ಬಿಟ್ಟು ಸಾವರ್ಕರ್ ಬಗ್ಗೆ ಮಾತನಾಡಿ ಸದನದ ಹಾದಿ  ತಪ್ಪಿಸುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಆಗ ಬಿಜೆಪಿಯ ಸುನೀಲ್ ಕುಮಾರ್, ಅವರು ಮಾತನಾಡುವಾಗ ನಾವು ಸುಮ್ಮನಿದ್ದೆವು. ಈಗ ಸಾವರ್ಕರ್  ಬಗ್ಗೆ ನಾವು ಮಾತನಾಡುವಾಗ ಸುಮ್ಮನಿರಲಿ ಎಂದರು. ಈ ಸಂದರ್ಭದಲ್ಲಿ ಸದನದಲ್ಲಿ  ಸಣ್ಣ ಗದ್ದಲವುಂಟಾಯಿತು. ಬಸವರಾಜ ಹೊರಟ್ಟಿ ಮಾತನಾಡಿ,‌ ಸಾವರ್ಕರ್ ಬಗ್ಗೆ ನಮಗೂ ಗೌರವವಿದೆ. ಆದರೆ ಅವರ ಬಗ್ಗೆ ಈಗ ಚರ್ಚೆ ಅಗತ್ಯವಿಲ್ಲ. ಎಚ್‌.ಎಸ್. ದೊರೆಸ್ವಾಮಿ ವಿಚಾರ  ಪ್ರಸ್ತಾಪವಾದ್ದರಿಂದ ಆ ಬಗ್ಗೆ ಚರ್ಚೆಯಾಗಬೇಕು‌. ತಪ್ಪು ಎಲ್ಲರಿಂದಲೂ ಆಗುತ್ತದೆ. ಹೀಗಾಗಿ  ಸರ್ಕಾರ ಸ್ಪಷ್ಟನೆ ನೀಡಿ ವಿಷಾದ ವ್ಯಕ್ತಪಡಿಸಲಿ ಎಂದು ಸದನಕ್ಕೆ ತಿಳಿಸಿದರು.

ಆಗ  ಜೆಡಿಎಸ್‌ನ ಶ್ರೀಕಂಠೇಗೌಡ, ಕ್ರಿಯಾಲೋಪದ ವಿಚಾರ ಪ್ರಸ್ತಾಪಿಸಿದರು. ಕಾಂಗ್ರೆಸ್ ಸದಸ್ಯ  ಐವಾನ್ ಡಿಸೋಜಾ ಮಾತನಾಡುತ್ತಿದ್ದಾಗ ಬಿಜೆಪಿಯ ರವಿಕುಮಾರ್ ದೊರೆಸ್ವಾಮಿಗೆ ಧಿಕ್ಕಾರ ಎಂದಿರುವುದು ಸರಿಯಾ? ಲೋಪವಲ್ಲವೇ? ಕ್ರಿಯಾಲೋಪಕ್ಕೆ ರೂಲಿಂಗ್ ನೀಡಿ ಎಂದರು.ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದರು. ಕ್ರಿಯಾಲೋಪಕ್ಕೆ  ಅವಕಾಶ ಮಾಡಿಕೊಟ್ಟಾಗ ರವಿಕುಮಾರ್ ಸ್ಪಷ್ಟನೆಗೆ ಮುಂದಾದರು. ಸಾವರ್ಕರ್ ಬ್ಯಾರಿಸ್ಟರ್  ಪದವಿ ಪಡೆದವರು. ಅವರ ಇಡೀ ಕುಟುಂಬ ಸ್ವಾತಂತ್ರ್ಯರ ಹೋರಾಟಕ್ಕೆ ಆಹುತಿಯಾಗಿದ್ದಾರೆ. ಸಾವರ್ಕರ್  ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಮಹಾತ್ಮಾ ಗಾಂಧೀಜಿ ಹಾಗೂ ಸಾವರ್ಕರ್ ಲಂಡನ್ ನಲ್ಲಿ  ಹೋರಾಟ ಆರಂಭಿಸಿದವರು ಎನ್ನುತ್ತಿದ್ದಾಗ ಬಿಜೆಪಿ ಸದನದ ದಿಕ್ಕು ತಪ್ಪಿಸಿ ಸಮಯ ವ್ಯರ್ಥ  ಮಾಡುತ್ತಿದೆ ಎಂದು ಸಭಾಪತಿ ಪೀಠದ ಮುಂಭಾಗದಲ್ಲಿ ಧರಣಿ ನಿರತರಾಗಿದ್ದ ಕಾಂಗ್ರೆಸಿನ ಐವಾನ್ ಡಿಸೋಜಾ ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com