ಪ್ರಜಾಪ್ರಭುತ್ವ ಹಣ ಇದ್ದವರಿಗೆ, ಚುನಾವಣೆ ಎನ್ನುವುದೀಗ ಉದ್ಯಮ: ಬಿಜೆಪಿ ಸದಸ್ಯ ರವಿಕುಮಾರ್

ಚುನಾವಣೆ ಎನ್ನುವುದು ಈಗ ವ್ಯಾಪಾರ, ಉದ್ದಿಮೆ, ಬೃಹತ್ ಕೈಗಾರಿಗೆ ಆಗಿದೆ. ಹೂಡಿಕೆ ಮಾಡಿ ಲಾಭ ತೆಗೆಯುವ ವಲಯವಾಗಿದೆ ಎಂದು ಮೇಲ್ಮನೆಯಲ್ಲಿಂದು ಬಿಜೆಪಿ ಸದಸ್ಯ ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ
ಬಿಜೆಪಿ

ಬೆಂಗಳೂರು: ಚುನಾವಣೆ ಎನ್ನುವುದು ಈಗ ವ್ಯಾಪಾರ, ಉದ್ದಿಮೆ, ಬೃಹತ್ ಕೈಗಾರಿಗೆ ಆಗಿದೆ. ಹೂಡಿಕೆ ಮಾಡಿ ಲಾಭ ತೆಗೆಯುವ ವಲಯವಾಗಿದೆ ಎಂದು ಮೇಲ್ಮನೆಯಲ್ಲಿಂದು ಬಿಜೆಪಿ ಸದಸ್ಯ ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ. 

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಪ್ರಜಾಪ್ರಭುತ್ವ ಎನ್ನುವುದು ಹಣ ಇದ್ದವರಿಗೆ ಮಾತ್ರ ಎನ್ನುವಂತಾಗಿದೆ. ಬಡವರಾಗಲೀ ಹೆಣ್ಣುಮಕ್ಕಳಾಗಲೀ ಹಣವಿಲ್ಲದವರಾಗಲೀ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಒಬ್ಬ ಶಾಸಕನಾಗಲೂ ಕನಿಷ್ಠ 28 ಲಕ್ಷ, ಸಂಸದ 70 ಲಕ್ಷ ಖರ್ಚು ಮಾಡಲೇಬೇಕಿದೆ. ವರ್ತೂರು ಗ್ರಾ.ಪಂ.ಚುನಾವಣೆಯೊಂದಕ್ಕೆ ಬರೊಬ್ಬರಿ 1.5 ಕೋಟಿ ಖರ್ಚಾಗಿದೆ. ಜಾತಿ ಮತ್ತು ಹಣ ಸೇರಿದರೆ ಫಲಿತಾಂಶ ಎಂದಾಗ ಮಧ್ಯಪ್ರವೇಶಿಸಿದ ಜೆಡಿಎಸ್ನ ಶರವಣ, ಚುನಾವಣೆಗೆ ವಿ3 ಬದಲಿಗೆ ಎಂ3 ಬೇಕು. ಅದು ಮ್ಯಾನ್ ಮಸಲ್ ಮನಿಪವರ್ ಬೇಕು ಎಂದರು.

ಮತ್ತೆ ಮಾತು ಮುಂದುವರೆಸಿದ ರವಿಕುಮಾರ್, ಅಧಿಕಾರಿ ನೌಕರರ ವರ್ಗಗಳ ಗುಣಮಟ್ಟದ ಮೇಲೆ ವ್ಯವಸ್ಥೆ ನಿಂತಿದೆ. ಸಾಮಾಜಿಕ ಹೋರಾಟದ ಮೇಲೆ ಬಂದ ತಮಗೆ ನಿಮ್ಮಷ್ಟು ರಾಜಕೀಯದ ಅನುಭವವಿಲ್ಲ. ಕಮಿಷನ್ ದಂಧೆಯಿಂದಾಗಿ ಪ್ರಜಾಪ್ರಭುತ್ವ ಹಾಳಾಗಿದೆ ಎಂದರು. ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಸಿಗುತ್ತಿಲ್ಲ. ನೌಕರಿ ಸಿಗಲಿಲ್ಲ, ಸಾಲ ಆಗಿದೆ ಎಂದೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಹಳ ಬುದ್ಧಿವಂತಿಕೆಯಿಂದ ಕೆಲಸ ಆಗುವುದನ್ನು ತಪ್ಪಿಸಲಾಗುತ್ತಿದೆ. ಟ್ರಾನ್ಸಫರ್ ಕಮಿಷನ್ ದಂಧೆ ಸಂವಿಧಾನದ ಉದ್ದೇಶವಾಗಲೀ ಕಲ್ಪನೆಯಾಗಲಿ ಆಗಿರಲಿಲ್ಲ. ಈಗಿನ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್ ಅವರಿಗೆ ದೂರದೃಷ್ಟಿಯಿದ್ದಿದ್ದರೆ ಅಂಬೇಡ್ಕರ್ ಸಂವಿಧಾನವನ್ನೇ ಬರೆಯುತ್ತಿರಲಿಲ್ಲ ಎಂದು ರವಿಕುಮಾರ್ ಹೇಳಿದರು.

ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸಿನ ಐವಾನ್ ಡಿಸೋಜಾ ಅವರು, ಜೆಡಿಎಸ್ನ ಶರವಣ, ಬಿಜೆಪಿಯ ರವಿಕುಮಾರ್ ಯಾರನ್ನುದ್ದೇಶಿಸಿ ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುತ್ತಿದ್ದಾರೆ ಎಂದು ಬಹಿರಂಗಪಡಿಸಬೇಕು ಎಂದಾಗ ಮಧ್ಯಪ್ರವೇಶಿಸಿದ ಜೆಡಿಎಸ್ನ ಶ್ರೀಕಂಠೇಗೌಡ, ರವಿಕುಮಾರ್ ಅವರನ್ನು ಒಪ್ಪಬಹುದೇನೋ ಅದೇ ನಾರಾಯಣಸ್ವಾಮಿ ಆದರೆ ಬೇರೆ ಇತ್ತೇನೋ ಎಂದರು. ಆಗ ಬಿಜೆಪಿಯ ನಾರಾಯಣಸ್ವಾಮಿ, ಶ್ರೀಕಂಠೇಗೌಡರೇ ನಮ್ಮ ಗುರುಗಳು. ವ್ಯವಹಾರದ ಗುರುಗಳು ಎಲ್ಲವೂ ಅವರಿಂದಲೇ ಎಂದು ನಗುವಿನಿಂದಲೇ ತಿರುಗೇಟು ನೀಡಿದರು. 

ಸಚಿವ ಸಿ.ಟಿ.ರವಿ, ಭೋಜೇಗೌಡರು ಈಗಿನ ಕಾಲದ ಅತ್ಯಂತ ಚಲಾವಣೆ ನಾಣ್ಯ ಎಂದಾಗ ಕಾಂಗ್ರೆಸ್ನ ವೆಂಕಟೇಶ್ ಈ ಮಾತಿನ ಸಂದೇಶವೇನು?. ಭೋಜೇಗೌಡರನ್ನು ಉದ್ದೇಶಿಸಿ ಹೀಗೆ ಹೇಳಲು ಕಾರಣ ಏನು ಎಂದಾಗ ಮತ್ತೆ ಉತ್ತರಿಸಿದ ಸಿ.ಟಿ.ರವಿ, ಕೆಲವರು ನಮ್ಮವರಾಗುತ್ತಾರೆ. ಇನ್ನು ಕೆಲವರು ನಮ್ಮವರಾಗಲು ಬರುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಆಗ ಜೆಡಿಎಸ್ನ ಬಸವರಾಜಹೊರಟ್ಟಿ, ಹಣದ ಬಗ್ಗೆ ನಾವೇ ತುಂಬಾ ಮಾತನಾಡುತ್ತೇವೆ. ನ್ಯಾಯಾಧೀಶರ ಬಗ್ಗೆ ಯಾರೂ ಮಾತನಾಡುವುದಿಲ್ಲ. ನಮ್ಮ ದೌರ್ಬಲ್ಯ ನೋಡಿದರೆ ಅವರೇ ಸಲಹೆ ನೀಡುತ್ತಾರೆ. ಇಂತಹದ್ದೇ ಮನೆ ಕಾರು ಬೇಕು ಎಂದು ನ್ಯಾಯಾಧೀಶರೇ ಕೇಳುತ್ತಿದ್ದಾರೆ. ಕೋರ್ಟಿಗೆ ಹೋದವರು ತಪ್ಪು ಮಾಡದೇ ಇದ್ದರೂ ನೋವುಣ್ಣುವ ಪರಿಸ್ಥಿತಿಯಿದೆ. ಬೆಂಗಳೂರು ಧಾರವಾಡ ಗುಲಬರ್ಗಾ ನ್ಯಾಯಾಲಯಗಳಲ್ಲಿ ಎಷ್ಟು ವರ್ಷದಿಂದ ಎಷ್ಟೆಷ್ಟು ಪ್ರಕರಣಗಳು ಬಾಕಿಯಿವೆ ಎನ್ನುವುದನ್ನು ಹೇಳಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com