ಜಮೀರ್ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಾರೆ: ಬಿ.ಸಿ. ಪಾಟೀಲ್ 

ಶಾಸಕ ಜಮೀರ್ ಅಹ್ಮದ್ ಪ್ರಚಾರ ಗಿಟ್ಟಿಸಿಕೊಳ್ಳಲು ಹೇಳಿಕೆ ನೀಡುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ.
ಬಿಸಿ ಪಾಟೀಲ್
ಬಿಸಿ ಪಾಟೀಲ್

ಕಲಬುರಗಿ: ಶಾಸಕ ಜಮೀರ್ ಅಹ್ಮದ್ ಪ್ರಚಾರ ಗಿಟ್ಟಿಸಿಕೊಳ್ಳಲು ಹೇಳಿಕೆ ನೀಡುತ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ.

ಜಮೀರ್ ಅಹ್ಮದ್ ಸರ್ಕಾರಕ್ಕೆ ತನ್ನ ಆಸ್ತಿ ಬರೆದು ಕೊಡುವ ವಿಚಾರ ಕುರಿತು ನಗರದ ಐವಾನ್-ಎ -ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅವರು ಬಹಳ ಸವಾಲು ಹಾಕುತ್ತಾರೆ. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಅವರ ಮನೆಯ ವಾಚ್ ಮೇನ್ ಆಗುತ್ತೇನೆ ಎಂದಿದ್ದರು. ಈಗ ಸರ್ಕಾರಕ್ಕೆ ಆಸ್ತಿ ಬರೆದು ಕೊಡುವುದಾಗಿ ಹೇಳಿದ್ದಾರೆ. ಇಂತಹ ಹೇಳಿಕೆಗಳನ್ನು ನೋಡುತ್ತಿದ್ದರೇ ಇದು ಕೇವಲ ಪ್ರಚಾರಕ್ಕಾಗಿ ನೀಡುತ್ತಿರುವ ಹೇಳಿಕೆ ಎಂದು ಅವರು ಟಾಂಗ್ ನೀಡಿದ್ದಾರೆ.

ಡ್ರಗ್ಸ್ ಮಾಫಿಯಾ ಕುರಿತು ಮಾತನಾಡಿದ ಅವರು, ಚಿತ್ರರಂಗ ಮೊದಲು ಈ ಹೀಗೆ ಇರಲಿಲ್ಲ. ಆದರೆ ಇತ್ತೀಚೆಗೆ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು  ವಿಷಾದನೀಯ. ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗುವ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಸಹ ಹಾಳು ಮಾಡುತ್ತಿದ್ದಾರೆ.

ಡ್ರಗ್ ವ್ಯಸನಿ ಕಲಾವಿದರನ್ನು ಅನುಕರಿಸಿದರೆ ದೇಶಕ್ಕೆ ಮಾರಕವಾಗಲಿದೆ. ಡ್ರಗ್ಸ್ ವ್ಯಸನ ಚಿತ್ರರಂಗಕ್ಕೆ ಪೂರಕವಲ್ಲ. ಚಿತ್ರರಂಗದಲ್ಲೀಗ ನಮಸ್ಕಾರ ಸಂಸ್ಕೃತಿ ಬಿಟ್ಟುಹೋಗಿ ಹಾಯ್, ಬಾಯ್ ಸಂಸ್ಕೃತಿ ಬಂದಿದೆ. ಆದರೆ ತಮ್ಮ ಅವಧಿಯಲ್ಲಿ ಕ್ಯಾಮೆರಾ ಮತ್ತು ಕ್ಯಾಮೆರಾಮೆನ್ ಗಳಿಗೂ ನಮಸ್ಕಾರ ಮಾಡುತ್ತಿದ್ದೆವು. ಹಿಂದಿನಂತಹ ಸಂಸ್ಕೃತಿ ಈಗ ಚಿತ್ರರಂಗದಲ್ಲಿ ಕಾಣಲಾಗುತ್ತಿಲ್ಲ. ಎಂದಿಗೂ ನಮ್ಮ ಸಂಸ್ಕೃತಿ ಪಾವಿತ್ರ್ಯತೆಯನ್ನು ಕೈಬಿಡಬಾರದು ಎಂದರು.

ಕ್ಯಾಸಿನೋಗೆ ಹೊರದೇಶದಲ್ಲಿ ಅನುಮತಿ ನೀಡಲಾಗಿದೆ. ಗೋವಾದಲ್ಲಿಯೂ ಇದೆ. ಕ್ಯಾಸಿನೋಗೆ ಹೋದ ಮಾತ್ರಕ್ಕೆ ಡ್ರಗ್ಸ್ ಸೇವಿಸುತ್ತಾರೆ ಎಂದರ್ಥವಲ್ಲ. ಜಮೀರ್ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದಾರೆಯೋ ಇಲ್ಲವೋ ಎಂಬುದು ತನಿಖೆಯಿಂದ ತಿಳಿಯಲಿದೆ. ಜಮೀರ್ ಆಗಾಗ ಪ್ರಚಾರಕ್ಕಾಗಿ ಹೇಳಿಕೆಗಳನ್ನು ಕೊಡುವುದು ಸಹಜ ಎಂದು ಲೇವಡಿ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com