ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಸದನದಲ್ಲಿ ವಿಶ್ವಾಸಮತ ಗೆದ್ದ ಯಡಿಯೂರಪ್ಪ

ಸುಮಾರು ಆರು ಗಂಟೆಗಳ ಕಾಲ ತೀವ್ರ ಸ್ವರೂಪದ ಚರ್ಚೆಯ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಗೆದ್ದಿದ್ದಾರೆ. 

ಬೆಂಗಳೂರು:ಸುಮಾರು ಆರು ಗಂಟೆಗಳ ಕಾಲ ತೀವ್ರ ಸ್ವರೂಪದ ಚರ್ಚೆಯ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಗೆದ್ದಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ  ನಿರ್ಣಯಕ್ಕೆ ವಿಧಾನಮಂಡಲದಲ್ಲಿ ಧ್ವನಿಮತದಿಂದ  ಸೋಲಾಗಿದೆ. ಈ ಮೂಲಕ ಬಿಎಸ್ ವೈ ಅವರ ಸರ್ಕಾರ ಸೇಫ್ ಆಗಿದೆ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗೊತ್ತುವಳಿಯನ್ನು ಧ್ವನಿಮತಕ್ಕೆ ಹಾಕಿದಾಗ ಆಡಳಿತ ಪಕ್ಷದ ಪರ ಮತ ಚಲಾವಣೆಯಾಗಿದ್ದು ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರೋನಾ ಕಾರಣಕ್ಕೆ ಕೆಲ ಶಾಸಕರು ಸದನಕ್ಕೆ ಹಾಜರಾಗದ ಹಿನ್ನೆಲೆ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು.

ಇದಕ್ಕೆ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ರಾಜೀನಾಮೆ ಸಲ್ಲಿಸ್ಲುವ ಕುರಿತು ಸವಾಲ್ ಹಾಕಿಕೊಂಡಿದ್ದರು.

ನನ್ನ ಕುಟುಂಬದ ವಿರುದ್ಧ ಒಂದೇ ಒಂದು ಆರೋಪದ ತುಣುಕು ಸಾಬೀತಾದರೂ ನಾನು ತಕ್ಷಣ ರಾಜೀನಾಮೆ ನೀಡುತ್ತೇನೆ ಸಾಬೀತು ಮಾಡದೇ ಇದ್ದರೆ ನೀವು ರಾಜೀನಾಮೆ ಕೊಡುತ್ತೀರಾ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಅವಿಶ್ವಾಸ ನಿರ್ಣಯದ ಮೇಲೆ ಪ್ರತಿಪಕ್ಷದ ಟೀಕೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ,ನೀವು ಈ ಸದನದ ಸದಸ್ಯರಲ್ಲದ ವ್ಯಕ್ತಿ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ.ವಿಜಯೇಂದ್ರ ನಮ್ಮ ಕುಟುಂಬ.ಅವರ ಪಾತ್ರ ಇದ್ದರೆ ರಾಜಕೀಯ ನಿವೃತ್ತಿ ಆಗುತ್ತೇನೆ. ಸಾಬೀತು ಮಾಡಿ,ಇಲ್ಲದಿದ್ದರೆ ನೀವು ರಾಜೀನಾಮೆ ಕೊಡಿ.ಲೋಕಾಯುಕ್ತಕ್ಕಾದರೂ ಹೋಗಿ,ಯಾವುದೇ ರೀತಿ ತನಿಖೆ ಮಾಡಿಸಿ,ಸಣ್ಣ ಸತ್ಯಾಂಶವಿದ್ದರೂ ಒಂದೇ ಒಂದು ಕ್ಷಣ ಕುರ್ಚಿಯಲ್ಲಿರಲ್ಲ ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸಿದ ಆರೋಪಗಳನ್ನು ಸಾಬೀತುಪಡಿಸುವುದು ಅವರ ಕರ್ತವ್ಯ. ಸಿಬಿಐ, ಲೋಕಾಯುಕ್ತ, ಹೈಕೋರ್ಟ್ ಸೇರಿ ಯಾವುದೇ ತನಿಖೆ ನಡೆಸಲಿ, ಇದರಲ್ಲಿ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ಬಿಡಿಎ ಹಗರಣದ ನಡೆದಿರುವುದು ನಮ್ಮ ಕಾಲದಲ್ಲಿ ಅಲ್ಲ. ಈ ಆರೋಪಗಳಿಗೂ ತಮ್ಮ ಕುಟುಂಬಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ವಾರದ ಹಿಂದೆ ಪ್ರಧಾನಿ ಮತ್ತು ಏಳು ಕೇಂದ್ರ ಸಚಿವರನ್ನು ಭೇಟಿ ಮಾಡಿ ಬಂದಿದ್ದೇನೆ. ಪ್ರಧಾನಿ ಜೊತೆ ಅರ್ಧ ಗಂಟೆ ಕಾಲ ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದೇನೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳ್ಳಲಿವೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com