ಸೋನಿಯಾ ಗಾಂಧಿ ಪಕ್ಷಕ್ಕೆ ತಾಯಿಯಿದ್ದಂತೆ, ಪತ್ರ ಸೋರಿಕೆ ಮಾಡಿದವರಿಗೆ ಶಿಕ್ಷೆಯಾಗಬೇಕು: ವೀರಪ್ಪ ಮೊಯ್ಲಿ

ಪಕ್ಷದ ಹಿತದೃಷ್ಟಿಯಿಂದ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಾವು ಪತ್ರ ಬರೆದಿದ್ದು, ಇಂತಹ ರಹಸ್ಯ ಪತ್ರ ಹೇಗೆ ಸೋರಿಕೆ ಆಗಿದೆ ಎಂಬುದು ಗೊತ್ತಿಲ್ಲ.
ವೀರಪ್ಪ  ಮೊಯ್ಲಿ
ವೀರಪ್ಪ ಮೊಯ್ಲಿ

ಬೆಂಗಳೂರು: ಪಕ್ಷದ ಹಿತದೃಷ್ಟಿಯಿಂದ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನಾವು ಪತ್ರ ಬರೆದಿದ್ದು, ಇಂತಹ ರಹಸ್ಯ ಪತ್ರ ಹೇಗೆ ಸೋರಿಕೆ ಆಗಿದೆ ಎಂಬುದು ಗೊತ್ತಿಲ್ಲ. ಪತ್ರವನ್ನು ಸೋರಿಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.

ಇಂದು ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆಯಾಗಿದೆ. ಪ್ರಮುಖ 23 ಮುಖಂಡರು ಕಾಂಗ್ರೆಸ್ ಪುನರ್ ಸಂಘಟನೆ ಬಗ್ಗೆ ಪತ್ರ ಬರೆದಿದ್ದು, ಇದಕ್ಕೆನಾನೂ ಸಹ ಸಹಿ ಮಾಡಿದ್ದೇನೆ. ಆದರೆ ಇದು ನಾಯಕತ್ವ ಬದಲಾವಣೆ ಬಗ್ಗೆ ಬರೆದ ಪತ್ರವಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಈಗ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇದೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದೆ. ಕಾಂಗ್ರೆಸ್ ಎಲ್ಲಾ ಚಟುವಟಿಕೆಗಳಲ್ಲಿ ನಾವು ಭಾಗಿಯಾದವರು. ದೇವರಾಜ್ ಅರಸ್ ಅವರು ಕಾಂಗ್ರೆಸ್ ವಿರುದ್ಧ ಹೋದರು. ಆಗ ನಮ್ಮ ಪಕ್ಷದ ಹಲವರು ಅರಸು ಹಿಂದೆ ಹೋದರು. ನಾನು ಪಕ್ಷಕ್ಕೆ ವಿಧೇಯನಾಗಿದ್ದೆ. ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ನಾನು ಸಾಯುವವರೆಗೂ ಕಾಂಗ್ರೆಸ್ ನಲ್ಲಿ ಇರುತ್ತೇನೆ, ಬಿಜೆಪಿ ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ನಾನು ಪಕ್ಷದಲ್ಲಿ ಹಲವು ಸ್ಥಾನಮಾನ ಪಡೆದಿದ್ದೇನೆ. ನಾನು ಕನಸಿನಲ್ಲೂ ಮೋದಿಗೆ ಬೆಂಬಲ ಕೊಡುವನಲ್ಲ. ರಾಷ್ಟ್ರ ಮತ್ತು ಪಕ್ಷದ ಹಿತದೃಷ್ಟಿಯಿಂದ ತಳಮಟ್ಟ, ಬೂತ್ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆಯಾಗಬೇಕು ಎಂದು ಪತ್ರ ಬರೆದಿದ್ದೆವು. ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆದಿರುವುದಕ್ಕೆ ನನ್ನ ಸ್ವಾಗತವಿದೆ. ಪಕ್ಷದ ಘನತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಸೋನಿಯಾ ಮಾಡಿದ್ದಾರೆ. ಪಕ್ಷದ ಮಟ್ಟಿಗೆ ಅವರು ತಾಯಿಯಿದ್ದಂತೆ. ನಮ್ಮ ಬೆಂಬಲ ಎಂದೆಂದಿಗೂ ಮುಂದುವರಿಯಲಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com