ಗ್ರಾಮ ಪಂಚಾಯಿತಿಗಳಿಗೆ ವರ್ಷಕ್ಕೆ 1.5 ಕೋಟಿ ರೂ. ನೇರ ಅನುದಾನ, ನರೇಗಾ ಯೋಜನೆ ಶಿಫ್ಟ್: ಡಿಸಿಎಂ

ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ಕೋಟಿ ರೂ. ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ. 

Published: 01st December 2020 03:56 PM  |   Last Updated: 01st December 2020 04:47 PM   |  A+A-


Ashwath Narayan

ಸಿ.ಎನ್. ಅಶ್ವತ್ಥನಾರಾಯಣ

Posted By : Lingaraj Badiger
Source : UNI

ರಾಮನಗರ: ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ಕೋಟಿ ರೂ.ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ. 

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದ ವರದಿಯಲ್ಲಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೇ ಹೆಚ್ಚು ಅನುದಾನ ನೀಡುವ ಅಂಶಗಳಿವೆ. ಅದರಂತೆ, ಗ್ರಾಮೀಣಾ ಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ಒದಗಿಸಲಾಗುವುದು. ಜತೆಗೆ, ಆಯಾ ಗ್ರಾಮಗಳ ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ನಮ್ಮ ಪಕ್ಷದ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಂತೆ ಆದರ್ಶ ಗ್ರಾಮಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆರೋಗ್ಯ, ಮೂಲಸೌಕರ್ಯ, ಶಿಕ್ಷಣ, ರಸ್ತೆ, ಕೆರೆಕುಂಟೆ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಕೇವಲ ಆರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆ ಶೇ.30ರಷ್ಟು ಮಾತ್ರ ಇತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಶೌಚಾಲಯ ಕಟ್ಟುವುದೂ ಅಸಾಧ್ಯ ಎನ್ನುವಂಥ ಸ್ಥಿತಿ ಇತ್ತು. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್‌ ಅಭಿಯಾನದಿಂದ ಇವತ್ತು ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ಕಾಣಬಹುದು. ಸ್ವಚ್ಛತೆ ಎನ್ನುವುದು ಜನಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಎಲ್ಲೆಲ್ಲೂ ಕಾಣಬಹುದು ಎಂದರು. 

ಗರೀಬಿ ಹಠಾವೋ ಸೇರಿದಂತೆ ಯಾವುದೇ ಘೋಷಣೆಗಳ ಮೂಲಕ ಗ್ರಾಮಗಳಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಎಪ್ಪತ್ತು ವರ್ಷಗಳಾದರೂ ಬಡತನ ಜೀವಂತವಾಗಿದೆ. ಮಾತಿನ ಬದಲಿಗೆ ರಚನಾತ್ಮಕವಾಗಿ ಕೆಲಸ ಮಾಡಿದರೆ ಗ್ರಾಮಗಳು ಉದ್ಧಾರವಾಗುತ್ತವೆ. ಕಾಂಗ್ರೆಸ್‌ ಬರೀ ಘೋಷಣೆಗಳನ್ನು ಮಾಡುತ್ತಾ ಬಂದಿತ್ತು. ಅವುಗಳಲ್ಲಿ ಗರೀಬಿ ಹಠಾವೋ ಎನ್ನುವುದು ಕೂಡ ಒಂದು. ಇಂಥ ನೂರಾರೂ, ಸಾವಿರಾರು ಘೋಷಣೆಗಳನ್ನು ಕಾಂಗ್ರೆಸ್‌ ಮಾಡಿದೆಯಾದರೂ, ಸಿಕ್ಕಿರುವ ಫಲಿತಾಂಶ ಮಾತ್ರ ಶೂನ್ಯ. ಬಿಜೆಪಿ ಹಾಗೆ ಮಾಡುತ್ತಿಲ್ಲ. ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡಲು ಯತ್ನಿಸುತ್ತಿದೆ. ಘೋಷಣೆ ಬದಲು ಕೆಲಸ ಮಾಡುತ್ತಿದೆ. ಪರಿಣಾಮವಾಗಿ ಭಾರತ ಬದಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಅನೇಕ ವರ್ಷಗಳಿಂದ ಆಡಳಿತ ನಡೆಸಿವೆ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಟ್ಟಂಥ ಜಿಲ್ಲೆ ನಮ್ಮದು. ಅನೇಕ ನಾಯಕರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ನೆಲವೂ ರಾಮನಗರವೇ. ಹೀಗಿದ್ದರೂ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಗೆದ್ದು ಹೋದ ಮೇಲೆ ಜಿಲ್ಲೆಯನ್ನು ಮರೆತು, ಚುನಾವಣೆ ಬಂದಾಗ ಮಾತ್ರ ಪ್ರತ್ಯಕ್ಷವಾಗುವ ನಾಯಕರಿಗೆ ಪಾಠ ಕಲಿಸಬೇಕಾದ ಸಮಯ ಗ್ರಾಮ ಪಂಚಾಯಿತಿ ಚುನಾವಣೆ ಮೂಲಕ ಬಂದಿದೆ ಎಂದು ಅವರು ತಿಳಿಸಿದರು.

ಕೋವಿಡ್‌ನಂಥ ಸಂಕಷ್ಟ ಕಾಲದಲ್ಲಿ ಜಿಲ್ಲಾಸ್ಪತ್ರೆಗೆ ಹೋಗಿ ನೋಡಿದಾಗ ಕೊನೆಪಕ್ಷ ಒಂದು ಸುಸಜ್ಜಿತ ಐಸಿಯು ಕೂಡ ಇರಲಿಲ್ಲ. ಸಣ್ಣ ಜ್ವರ ಬಂದರೂ ಬಸ್‌ ಹತ್ತಿ ಕೆಂಗೇರಿಗೆ ಹೋಗಬೇಕಾದ ಪರಿಸ್ಥಿತಿ. ಬೆಂಗಳೂರು-ಮೈಸೂರು ಹೆದ್ದಾರಿ ಆಯಕಟ್ಟಿನ ಜಾಗದಲ್ಲಿರುವ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಇಂಥ ಅವ್ಯವಸ್ಥೆ ಇತ್ತು. ಒಂದು ತಾಲ್ಲೂಕು ಆಸ್ಪತ್ರೆಯಲ್ಲಿರಬೇಕಾದ ಬೇಸಿಕ್‌ ಸೌಲಭ್ಯಗಳೂ ಈ ಜಿಲ್ಲಾಸ್ಪತ್ರೆಯಲ್ಲಿ ಇರಲಿಲ್ಲ. ಈಗ ನೀವು ಯಾರೇ ಹೋಗಿ ನೋಡಿದರೂ ಆಸ್ಪತ್ರೆಯಲ್ಲಿ ಆಗಿರುವ ಬದಲಾವಣೆಗಳನ್ನು ನೋಡಬಹುದು. ಎಲ್ಲ ರೀತಿಯಲ್ಲೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಜನರಿಗೆ ಬಿಜೆಪಿ ಮಾತ್ರ ಉತ್ತಮ ಆಯ್ಕೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈಗ ಪಂಚಾಯಿತಿ ಚುನಾವಣೆ ಬಂದಿದೆ. ನಮ್ಮ ಹಳ್ಳಿಗೆ ನಮ್ಮದೇ ಆಡಳಿತವನ್ನು ಆಯ್ಕೆ ಮಾಡಿಕೊಳ್ಳುವಂಥ ಚುನಾವಣೆ ಇದು. ಇಷ್ಟು ದಿನ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು, ಮತ್ತೊಬ್ಬರ ಹೆಸರಿನಲ್ಲಿ ಮಗದೊಬ್ಬರು ಆಡಳಿತ ನಡೆಸಿದ್ದು ಸಾಕು. ಇಡೀ ದೇಶದಲ್ಲಿ ಸಮಸ್ತ ಭಾರತೀಯರ ಏಕೈಕ ರಾಜಕೀಯ ಆಯ್ಕೆ ಎಂದರೆ, ಅದು ಬಿಜೆಪಿ ಮಾತ್ರ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಬೇಕು. ಆ ಮೂಲಕ ಗ್ರಾಮ ಗ್ರಾಮದಲ್ಲಿಯೂ ಸ್ವರಾಜ್ಯ ಬರಬೇಕು. ಆ ಮೂಲಕ ನಮ್ಮ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಬಲ ತಂಬಬೇಕು ಎಂದರು.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp