600 ವರ್ಷಗಳ ಆಳ್ವಿಕೆಯಲ್ಲಿ ಹಿಂದೂ-ಮುಸ್ಲಿಮರಿಗೆ ಹುಟ್ಟಿದ ಸಾಕಷ್ಟು ಜನರಿದ್ದಾರೆ; ಲವ್ ಜಿಹಾದ್ ವಿರುದ್ಧದ ಕಾನೂನು ಮೂರ್ಖತನ: ಸಿದ್ದರಾಮಯ್ಯ

ಲವ್ ಜಿಹಾದ್ ಕಾಯ್ದೆ ಜಾರಿಗೆ ತರುವುದರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಇದು ಮೂರ್ಖತನದ ಚಿಂತನೆ ಎಂದು ಟೀಕಿಸಿದ್ದಾರೆ. 

Published: 01st December 2020 06:15 PM  |   Last Updated: 01st December 2020 06:34 PM   |  A+A-


siddaramaiah

ಸಿದ್ದರಾಮಯ್ಯ

Posted By : Srinivas Rao BV
Source : UNI

ಬೆಂಗಳೂರು: ಲವ್ ಜಿಹಾದ್ ಮತ್ತು ಗೋಹತ್ಯೆ ವಿಚಾರದಲ್ಲಿ ಸರ್ಕಾರ ಕಾಯ್ದೆ ತರಲು ಮುಂದಾದರೆ ವಿರೋಧಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದರು. 

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು,ರಾಜ್ಯ ಸರ್ಕಾರದ ಪಶುಸಂಗೋಪನಾ ಸಚಿವರು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದಾಗಿ ಹೇಳಿದ್ದರು, ಇದರಿಂದ ಆತಂಕಕ್ಕೀಡಾದ ಮುಸ್ಲಿಂ ಸಮುದಾಯದ ನಾಯಕರು ಇಂದು ನನ್ನನ್ನು ಭೇಟಿಯಾಗಿ,ಮಾತುಕತೆ ನಡೆಸಿದರು. ಈ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಏಕೆ ಇದುವರೆಗೂ ಜಾರಿಗೊಳಿಸಿಲ್ಲ? ಕರ್ನಾಟಕವೇ ಏಕೆ? ಕಾಯ್ದೆ ಜಾರಿಯಾದರೆ ತಾವು ಕಷ್ಟ ನಷ್ಟಕ್ಕೆ ಈಡಾಗುತ್ತೇವೆ ಎಂಬ ಭಯದಿಂದ ಮುಸ್ಲಿಂ ಸಮುದಾಯದ ಮುಖಂಡರು ನನ್ನ ಬಳಿಗೆ ಬಂದಿದ್ದರು. ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಲ್ಲಿ ನಾವು ತೀವ್ರವಾಗಿ ವಿರೋಧಿಸಲಿದ್ದೇವೆ ಎಂದರು. 

ಉತ್ತರ ಪ್ರದೇಶದಲ್ಲಿ ಜಾರಿಯಿರುವ ಲವ್ ಜಿಹಾದ್ ತಡೆ ಕಾನೂನು ಅಸಂವಿಧಾನಿಕ.ನಿಗದಿತ ವಯೋಮಾನಕ್ಕೆ ಮೇಲ್ಪಟ್ಟ ಪ್ರತಿಯೊಬ್ಬರಿಗೂ ತಮಗೆ ಇಷ್ಟವಾಗುವ ವ್ಯಕ್ತಿಯನ್ನು ಮದುವೆಯಾಗುವ ಸ್ವಾತಂತ್ರ್ಯ ಇದೆ. ಯಾವುದೇ ಒಂದು ಜಾತಿ ಇಂತಹುದೇ ಜಾತಿ - ಧರ್ಮದ ಹುಡುಗ ಅಥವಾ ಹುಡುಗಿಯನ್ನು ವಿವಾಹವಾಗಬೇಕೆಂಬ ಕಾನೂನು ನಮ್ಮ ಸಂವಿಧಾನದಲ್ಲಿ ಇಲ್ಲ. ಇದು ವಿವೇಕ- ವಿವೇಚನೆಯಿಲ್ಲದೆ ರಚನೆಯಾದ ಕಾನೂನು. ಹಿಂದೂ ಮುಸ್ಲಿಂನನ್ನು, ಮುಸ್ಲಿಂ ಹಿಂದೂವನ್ನು ಮಧುವೆಯಾಗುವಂತಿಲ್ಲ ಎಂಬ ನಿಯಮ ರೂಪಿಸುವುದು ತಪ್ಪು ಎಂದು ತಿಳಿಸಿದರು.

ಹಿಂದೆ ಮೊಘಲರ ಆಳ್ವಿಕೆ ಕಾಕದಲ್ಲಿ ಸಾಕಷ್ಟು ಅಂತರ್ಧರ್ಮೀಯ ವಿವಾಹವಾಗಿವೆ. ಹಿಂದೂ ಮುಸ್ಲಿಂ ದಂಪತಿ ಗಳಿಗೆ ಜನಿಸಿರುವ ಸಾಕಷ್ಟು ಮಂದಿ ಇದ್ದರು. ಇಂಥಹ ಕಾನೂನು ಜಾರಿಗೊಳಿಸಲು ಸಂವಿಧಾನ ಅವಕಾಶ ನೀಡಲ್ಲ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಕಾಯ್ದೆ ವಜಾಗೊಳ್ಳಲಿದೆ. ಇಂತಹಾ ಕಾಯ್ದೆಗಳಿಗೆ ಅವಕಾಶವಿಲ್ಲ ಎಂದು ಅಲಹಾಬಾದ್ ಹಾಗೂ ಕರ್ನಾಟಕದ ಉಚ್ಚ ನ್ಯಾಯಾಲಯಗಳು ಹೇಳಿವೆ. ಹಾಗಾಗಿ ಕಾಯ್ದೆ ಜಾರಿ ಅಸಾಧ್ಯ. ಆದರೂ ಇಂತದ್ದೊಂದು ಕೆಲಸಕ್ಕೆ ಸರ್ಕಾರ ಕೈಹಾಕಿದೆ ಅಂದರೆ ಅದು ದುರುದ್ದೇಶದಿಂದ ಕೂಡಿದ ಕೆಲಸವಲ್ಲದೆ ಬೇರೇನು? ಸಮಾಜದ ಶಾಂತಿ ಕದಡಬೇಕು ಎಂಬ ಬಿಜೆಪಿಯವರ ಉದ್ದೇಶ ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದರು.

ನನ್ನನ್ನು ಕಾಂಗ್ರೆಸ್ ಸೇರಿಸಿದ್ದು ವಿಶ್ವನಾಥ್ ಎಂಬುದೇ ಶುದ್ಧ ಸುಳ್ಳು. ನನ್ನನ್ನು ಕರೆದುಕೊಂಡು ಹೋಗಿ ಕಾಂಗ್ರೆಸ್‌ನ ಯಾವ ನಾಯಕರನ್ನು ಭೇಟಿ ಮಾಡಿಸಿದ್ದರು ಅಂತ ವಿಶ್ವನಾಥ್ ಅವರನ್ನೇ ಕೇಳಿ. ನಾನು ಕಾಂಗ್ರೆಸ್ ಸೇರಲು ತಿರಾನ್ ಹಾಗೂ ಅಹಮದ್ ಪಟೇಲ್ ಕಾರಣ. ಇದನ್ನೇ ಹಿಂದೆಯೂ ಹಲವು ಬಾರಿ ಹೇಳಿದ್ದೇನೆ. ಕರ್ನಾಟಕದ ಯಾವೊಬ್ಬ ನಾಯಕ ಕೂಡ ನಾನು ಕಾಂಗ್ರೆಸ್ ಸೇರಲು ಕಾರಣರಲ್ಲ ಎಂದು ಸ್ಪಷ್ಟಪಡಿಸಿದರು. 

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಸೇರಿದಂತೆ ಬಿಜೆಪಿ ಹಾಗೂ ಆರ್.ಎಸ್ಎಸ್ ನಾಯಕರು ನಮ್ಮಲ್ಲಿರುವ ಮಾನವೀಯತೆಯನ್ನು ನೋಡಿ ಕಲಿಯಬೇಕು. ಡಿ.ಕೆ ಶಿವಕುಮಾರ್ ಅವರಿಗೆ ನೀವು ಕಿವಿಮಾತು ಹೇಳುವುದೇನೋ ಸರಿ, ಆದರೆ ತಾವು ಯಾವಾಗ ಮಾನವೀಯತೆ,ಮನುಷ್ಯತ್ವವನ್ನು ಕಲಿಯುವುದು? ನಾನೂ ಹಿಂದೆ ಸಗಣಿ ಬಾಚಿದ್ದೇನೆ, ಗಂಜಲ ಎತ್ತಿದ್ದೇನೆ. ಬಿಜೆಪಿಯ ಯಾವ ನಾಯಕ ಈ ಕೆಲಸವನ್ನೆಲ್ಲಾ ಮಾಡಿದ್ದಾರೆ? ಪಶು ಸಾಕಾಣಿಕೆ ಬಗ್ಗೆ ಬಿಜೆಪಿ ನಾಯಕರಿಗೆ ಎಷ್ಟುಗೊತ್ತಿದೆ? ಮುದಿ ಎತ್ತನ್ನೋ ಅಥವಾ ಹಸುವನ್ನೋ ಅದು ಸಾಯುವವರೆಗೆ ಸಾಕಲು ಎಷ್ಟು ಖರ್ಚು ಬರುತ್ತೆಂದು ಬಿಜೆಪಿಯವರಿಗೆ ಗೊತ್ತೇ? ಹಸು- ಎತ್ತುಗಳಿಗೆ ವಯಸ್ಸಾದ ಮೇಲೆ ಅವನ್ನು ರೈತರು ಬಿಜೆಪಿಯವರ ಮನೆ ಬಾಗಿಲಿಗೆ ಕೊಂಡುಹೋಗಿ ಬಿಟ್ಟು ಬರಬೇಕೆ ಎಂದು ತಿರುಗೇಟು ನೀಡಿದರು. 

ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡುವುದಿಲ್ಲ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ. ಈ ದೇಶ ಮುಸ್ಲಿಂರಿಗೆ ಸೇರಿದೆಯೋ ಇಲ್ಲವೋ ? ಅವರು ಸಂವಿಧಾನ ಓದುವುದು ಒಳ್ಳೆಯದು. ಬಿಜೆಪಿಯವರು ಯಾವ ಪುಸ್ತಕವನ್ನೂ ಓದುವುದಿಲ್ಲ. ಆರ್ ಎಸ್ಎಸ್ ನವರು ಹೇಳಿಕೊಟ್ಟಿದ್ದನ್ನು ಬಂದು ಹೇಳುತ್ತಾರೆ. ಅವರು ಓದುವುದೂ ಇಲ್ಲ. ಬರೆಯುವುದೂ ಇಲ್ಲ ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.

Stay up to date on all the latest ರಾಜಕೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp