ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ: ಹೆಚ್.ಡಿ. ಕುಮಾರಸ್ವಾಮಿ

ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ನಿನ್ನೆ ವಿಧಾನ ಪರಿಷತ್ ನಲ್ಲಿ ಅಂಗೀಕಾರವಾದ ಬಗ್ಗೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಬುಧವಾರ ಪ್ರತಿಕ್ರಿಯಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಕಾಂಗ್ರೆಸ್ ನ ತೀವ್ರ ವಿರೋಧದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆ ನಿನ್ನೆ ವಿಧಾನ ಪರಿಷತ್ ನಲ್ಲಿ ಅಂಗೀಕಾರವಾದ ಬಗ್ಗೆ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಭೂಸುಧಾರಣ ಕಾಯ್ದೆಯಲ್ಲಿ ನಿಜವಾದ ಸುಧಾರಣಾ ಕ್ರಮಗಳನ್ನು ಸಾಧಿಸಿದ್ದು ಜೆಡಿಎಸ್‌. ಆದರೂ ವಿಮರ್ಶೆ ಇಲ್ಲದೇ ಏಕಾಏಕಿ ಜೆಡಿಎಸ್‌ ಅನ್ನು ದೂರಲಾಗುತ್ತಿದೆ. ಜೆಡಿಎಸ್‌ನ ಮೇಲೆ ದಾಳಿ ಮಾಡುತ್ತಿರುವ ಕೆಲ ರೈತ ಮುಖಂಡರು ಒಂದು ಬಾರಿ ಪರಾಮರ್ಶೆ ಮಾಡಲಿ. ಜೆಡಿಎಸ್‌ ರೈತ ವಿರೋಧಿ ನಿಲುವು ತಳೆಯಲು ಎಂದಾದರೂ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್‌ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್‌ ಕಡೆಯೂ ಇರಲಿಲ್ಲ, ಬಿಜೆಪಿ ಕೆಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್‌ ಮಾಡಿದೆ ಎಂದಿದ್ದಾರೆ ಕುಮಾರಸ್ವಾಮಿ.

79(ಎ, ಬಿ) ಕಲಂ ಅಗತ್ಯತೆ, ಸಾಧಕ-ಬಾಧಕಗಳ ಪರಾಮರ್ಶೆಗೆ ಸಿದ್ದರಾಮಯ್ಯ ಅವರೂ ಸಿಎಂ ಆಗಿದ್ದಾಗ ಶ್ರೀನಿವಾಸ ಪ್ರಸಾದ್‌ರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದ್ದರು. ಆದರೆ, ಈ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಅವರದ್ದು ಈಗ ದಿವ್ಯ ಮೌನ. ಈ ಕಲಂ ತೆಗೆದು ಹಾಕಿ ಕೃಷಿ ಮಾಡುವ ಮನಸ್ಸುಗಳಿಗೆ ಕೃಷಿ ಸಾಧ್ಯವಾಗಿಸುತ್ತಿರುವುದು ಜೆಡಿಎಸ್ ಎಂದಿದ್ದಾರೆ.

ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತ ಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ, ಈ ವರೆಗಿನ ನನ್ನ ರೈತ ಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ. ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com