ಮಂಡ್ಯ: ಕೀಲಾರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತೃತೀಯ ಲಿಂಗಿ ಪ್ರಫುಲ್ಲಾ ದೇವಿ ಸ್ಪರ್ಧೆ

ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದ್ದು, ಅಲ್ಲಲ್ಲಿ ಸೀಟುಗಳ ಹರಾಜಾಗುತ್ತಿವೆ ಎಂಬ ಸುದ್ದಿಗಳನ್ನು ಕೇಳುತ್ತಿರುತ್ತೇವೆ. 
ಮತಯಾಚನೆಯಲ್ಲಿ ಪ್ರಫುಲ್ಲ ದೇವಿ
ಮತಯಾಚನೆಯಲ್ಲಿ ಪ್ರಫುಲ್ಲ ದೇವಿ

ಮೈಸೂರು: ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದ್ದು, ಅಲ್ಲಲ್ಲಿ ಸೀಟುಗಳ ಹರಾಜಾಗುತ್ತಿವೆ ಎಂಬ ಸುದ್ದಿಗಳನ್ನು ಕೇಳುತ್ತಿರುತ್ತೇವೆ. 

ಇವೆಲ್ಲಕ್ಕೂ ಸೆಡ್ಡು ಹೊಡೆದು ಚುನಾವಣಾ ಕಣಕ್ಕಿಳಿದಿದ್ದಾರೆ 30 ವರ್ಷದ ತೃತೀಯಲಿಂಗಿ ಪ್ರಫುಲ್ಲಾ ದೇವಿ. ಮಂಡ್ಯ ಮೂಲದ ಸಾಮಾಜಿಕ ಕಾರ್ಯಕರ್ತೆ ಗ್ರಾಮ ಪಂಚಾಯತ್ ಚುನಾವಣಾ ಸ್ಪರ್ಧೆಗಿಳಿದಿದ್ದು, ಕೃಷ್ಣರಾಜ ಸಾಗರ ಜಲಾಶಯ ಸುತ್ತಮುತ್ತ ಅಕ್ರಮ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಗ್ರಾಮದಲ್ಲಿ ವೈನ್ ಶಾಪ್ ತೆರೆದುದರ ವಿರುದ್ಧ ಮಹಿಳೆಯರನ್ನೆಲ್ಲಾ ಸೇರಿಸಿ ಹೋರಾಟ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳಲ್ಲಿ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಗ್ರಾಮದಲ್ಲಿ 20 ಸ್ವಸಹಾಯ ಮಹಿಳಾ ಗುಂಪುಗಳನ್ನು ರಚಿಸಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮಾಜಿ ಶಿಕ್ಷಣ ಸಚಿವ ಕೆ ವಿ ಶಂಕರೇ ಗೌಡರ ಹುಟ್ಟೂರು ಕೀಲಾರ ಗ್ರಾಮವಾಗಿದ್ದು, ಇಲ್ಲಿ ಎಲ್ಲಾ ಜಾತಿ, ಧರ್ಮಗಳ ಜನರಲ್ಲಿ ಸಾಮರಸ್ಯವಿದೆ. ಗಾಂಧಿ ತತ್ವದ ಅನುಯಾಯಿಯಾದ ಪ್ರಫುಲ್ಲಾ ದೇವಿ, ಶಂಕರೇ ಗೌಡರಿಂದಲೂ ಪ್ರಭಾವಿತರಾಗಿದ್ದಾರೆ.

ಸಮಾಜ ಸೇವೆಯಲ್ಲಿ ತೃಪ್ತಿ ಕಾಣುತ್ತಿರುವ ಪ್ರಫುಲ್ಲಾ ದೇವಿ, ಪಂಚಾಯತ್ ಚುನಾವಣೆಯಲ್ಲಿ ತೃತೀಯ ಲಿಂಗಿಗಳ ಸ್ಪರ್ಧೆಗಳ ಹೋರಾಟಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಚುನಾವಣಾ ಅಧಿಕಾರಿ ಕಚೇರಿಯವರೆಗೆ ಹೋಗಿ ಹೋರಾಟ ಮಾಡಿದ್ದಾರೆ. 

ಸಾಮಾನ್ಯ ಮಹಿಳೆ ವರ್ಗದಲ್ಲಿ ಸ್ಪರ್ಧಿಸುತ್ತಿರುವ ಪ್ರಫುಲ್ಲಾ ದೇವಿ, ಆಟೋರಿಕ್ಷಾ ಚಿಹ್ನೆ ಹೊಂದಿದ್ದಾರೆ. ಹಾಲು ಮಾರಾಟ ಮತ್ತು ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪ್ರಫುಲ್ಲಾ ದೇವಿ, ಆಕೆಯ ಪೋಷಕರು ಮತ್ತು ಸ್ನೇಹಿತರು ಮನೆಮನೆಗೆ ಹೋಗಿ ಮತ ಕೇಳುತ್ತಿದ್ದಾರೆ. 

ಗ್ರಾಮದಲ್ಲಿ ಒಳಚರಂಡಿ ಸಮಸ್ಯೆ, ಶೌಚಾಲಯ ನಿರ್ಮಾಣ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com