ನಾಯಕತ್ವದ ಬಗ್ಗೆ ಮಾತನಾಡಲು ಯತ್ನಾಳ್ ಯಾರು?: ಸದಾನಂದಗೌಡ; ಕೇಂದ್ರ ಸಚಿವನಾಗಿದ್ದ ನಾನೊಬ್ಬ ಸಾಮಾನ್ಯ ಶಾಸಕ: ಯತ್ನಾಳ್ ತಿರುಗೇಟು

ನಾಯಕತ್ವ‌ ಬಗ್ಗೆ ಮತ್ತೆ ಹೇಳಿಕೆ‌‌ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿ ಕಾರಿದ್ದಾರೆ.
ಡಿ.ವಿ.ಸದಾನಂದಗೌಡ ಬಸನಗೌಡ ಪಾಟೀಲ್ ಯ ತ್ನಾಳ್
ಡಿ.ವಿ.ಸದಾನಂದಗೌಡ ಬಸನಗೌಡ ಪಾಟೀಲ್ ಯ ತ್ನಾಳ್

ಬೆಂಗಳೂರು: ನಾಯಕತ್ವ‌ ಬಗ್ಗೆ ಮತ್ತೆ ಹೇಳಿಕೆ‌‌ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಿಡಿ ಕಾರಿದ್ದಾರೆ.

ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥಹ ವಿಷಯಗಳನ್ನೆಲ್ಲ ಮಾತಾಡಲು ಬಸನಗೌಡ ಪಾಟೀಲ್ ಯಾರು? ಅವರಿಗೆ ಮಾತಾಡೋದು ಇದ್ರೆ ಪಕ್ಷದ ಚೌಕಟ್ಟಿನೊಳಗೆ ಮಾತಾಡಲಿ. ಅವರು ಇಂತಹ ಹೇಳಿಕೆಗಳನ್ನು ಕೊಡೋದನ್ನು ನಿಲ್ಲಿಸಲಿ. ಅವರ ಭವಿಷ್ಯದ ದೃಷ್ಟಿಯಿಂದ ಇಂಥ ಹೇಳಿಕೆಗಳನ್ನು ಯತ್ನಾಳ್ ಕೊಡದಿರಲಿ ಎಂದು ಅವರು ಎಚ್ಚರಿಕೆ ನೀಡಿದರು.

ಯಾರು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಹಾಗೂ ಗೌರವ ಸಿಗುತ್ತದೆ. ಅವರೇನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ಅಲ್ಲ. ನಮ್ಮ ರಾಜ್ಯದ ಪಕ್ಷದ ಯಾವುದೇ ಅಧ್ಯಕ್ಷನೂ ಅಲ್ಲ. ಅಥವಾ ಯಾವುದಾದರೂ ಒಂದು ಹೇಳುವ ಸ್ಥಾನದಲ್ಲೂ ಇಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಅಷ್ಟೇ. ದಿನನಿತ್ಯ ಮಾಧ್ಯಮಕ್ಕೆ ಹಾಗೂ ಹೊರಗೆ ಮಾತಾಡೋದು ಅವರಿಗೆ ಶೋಭೆ ತರುವುದಿಲ್ಲ. ಅವರು ಏನಾದರೂ ಹೇಳೋದು ಇದ್ರೆ ರಾಷ್ಟ್ರೀಯ ನಾಯಕರು ಅಥವಾ ಪಕ್ಷದ ರಾಜ್ಯಾದ ಅಧ್ಯಕ್ಷರ ಜೊತೆ ಮಾತನಾಡಬೇಕು. ಆದರೆ ಎಲ್ಲೋ ಬಂದು ಬೀದಿಯಲ್ಲಿ ಮಾತನಾಡಿ ಅವರ ಭವಿಷ್ಯದ ಬಗ್ಗೆ ಒಳ್ಳೆಯ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

ಯತ್ನಾಳ್ ವಿರುದ್ಧ ಕ್ರಮ ಯಾಕೆ ತಗೋತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಂದನ್ನು ಅವರರವೇ ಅರ್ಥ ಮಾಡಿಕೊಳ್ಳಬೇಕು. ಕೆಲವರಿಗೆ ಕೆಲ ಸಂದರ್ಭ, ಸಮಯ ಬರುತ್ತದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳೋದಕ್ಕೆ ಕೆಲವರು ಮಾತನಾಡುತ್ತಾರೆ. ಇದು ನಿಜವಾಗಿಯೂ ಅವರಿಗೆ ಸರಿ ಇರೋದಿಲ್ಲ ಎಂದು ಕಿಡಿ‌ಕಾರಿದರು.

ಯತ್ನಾಳ್ ಹೇಳಿಕೆಗೆ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ‌‌ ಎಂಬ ಬೇಸರ ಇದೆ. ಈ ಬೇಸರದಿಂದ ಯತ್ನಾಳ್ ಇಂಥ ಹೇಳಿಕೆ ಕೊಡ್ತಿದ್ದಾರೆ. ಈಗಾಗಲೇ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಹ ನಾಯಕತ್ವ ಬದಲಾವಣೆ ಇಲ್ಲ‌ ಅಂದಿದ್ದಾರೆ. ಯತ್ನಾಳ್ ಅವರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಂದರ್ಭದಲ್ಲಿ ವರಿಷ್ಠರು ನಿರ್ಧಾರ ತಗೆದುಕೊಳ್ಳುತಾರೆ ಎಂದರು.

ಯತ್ನಾಳ್ ತಿರುಗೇಟು

ಇನ್ನು ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಬಸನಗೌಡ ಪಾಟೀಲ್​ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿಯವರೇ "ನಾನೊಬ್ಬ ಪ್ರಧಾನ ಸೇವಕ" ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಾನೊಬ್ಬ ಸಾಮಾನ್ಯ ಶಾಸಕ ಎನ್ನುವ ಸದಾನಂದಗೌಡರ ಹೇಳಿಕೆ ಸತ್ಯವಾದದ್ದು.  ನಾನು ರಾಷ್ಟ್ರೀಯ ನಾಯಕನೆಂದು ಎಲ್ಲಿಯೂ ಹೇಳಿಕೊಂಡಿಲ್ಲ ಎಂದಿದ್ದಾರೆ.

"ನಾನು ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗಿದ್ದೆ, ಸದಾನಂದಗೌಡರು ಈಗ ಸಚಿವರಾಗಿದ್ದಾರೆ. ಯಾರು ಹಿರಿಯರೆಂದು ನೀವೇ ತೀರ್ಮಾನಿಸಿ" ಎಂದು ಯತ್ನಾಳ್ ಸದಾನಂದಗೌಡರಿಗೆ  ಪರೋಕ್ಷವಾಗಿ ಟಾಂಗ್ ನೀಡೀದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com