ನಾನು ಮನಸ್ಸು ಮಾಡಿದರೆ ಇಡೀ ಜಗತ್ತು ಹಿಂದುತ್ವ ಆಗುತ್ತೆ: ಅನಂತ್ ಕುಮಾರ್ ಹೆಗಡೆ

ನಾನು ಮನಸ್ಸು ಮಾಡಿದರೆ ಇಡೀ ಜಗತ್ತು ಹಿಂದುತ್ವದತ್ತ ಹೊರಳುತ್ತದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಗುಡುಗಿದ್ದಾರೆ. 
ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ

ಬೆಂಗಳೂರು: ನಾನು ಮನಸ್ಸು ಮಾಡಿದರೆ ಇಡೀ ಜಗತ್ತು ಹಿಂದುತ್ವದತ್ತ ಹೊರಳುತ್ತದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಗುಡುಗಿದ್ದಾರೆ. 

ಕೆಲ ಬ್ರಾಹ್ಮಣ ವಿರೋಧಿಗಳು ಹಿಂದುತ್ವವನ್ನ ವಿರೋಧಿಸುವ ಕಾಯದಲ್ಲಿ ತೊಡಗಿದ್ದಾರೆ. ಬೆಂಗಳೂರಷ್ಟೇ ಅಲ್ಲ ಇಡೀ ಜಗತ್ತನ್ನು ಹಿಂದುತ್ವದ ರಾಜಧಾನಿ ಮಾಡಬೇಕು. ಈ ಕುರಿತು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ಹಿಂದುತ್ವದ ಬಗ್ಗೆ ಅರ್ಥವಿಲ್ಲದ ಗೂಬೆಗಳು ಏನು ಬೇಕಾದರೂ ಮಾಡಲಿ. ಆದರೆ ಈ ಹೆಗಡೆ ಮನಸು ಮಾಡಿದರೆ ನಾಳೆಯೇ ಜಗತ್ತು ಹಿಂದೂತ್ವ ಆಗುತ್ತದೆ ಎಂದರು.

ಮೊದಲು ಬೆಂಗಳೂರನ್ನು ಹಿಂದುತ್ವದ ರಾಜಧಾನಿ ಮಾಡಬೇಕು. ಹಿಂದೂತ್ವವನ್ನು ಅರ್ಥಮಾಡಿಕೊಳ್ಳಲು ಯೋಗ್ಯತೆ ಇರಬೇಕು. ಪೂರ್ವಾಗ್ರಹಪೀಡಿತ ಪಿಂಡಗಳಿಗೆ ಇತಿಹಾಸ ಗೊತ್ತಿಲ್ಲ. ಹೀಗಾಗಿಯೇ ಏನೋನೋ ಮಾತನಾಡುತ್ತಿವೆ. ಕೆಲವರಿಗೆ ಬ್ರಾಹ್ಮಣರನ್ನು ಕಂಡರೆ ಆಗುವುದಿಲ್ಲ. ಅದಕ್ಕಾಗಿ ಟೀಕೆ ಮಾಡುತ್ತಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದರು. 

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಮತ್ತೆ ಮತ್ತೆ ಸಾವರ್ಕರ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಿಂದುತ್ವ ಎಂದು ಬಿಜೆಪಿಯವರು ಹೇಳಿದರೆ ಕೆಲವರು ಅದು ವಿರೋಧದ ವಿಚಾರ ಎನ್ನುತ್ತಾರೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಆಗದವರಿಗೆ, ಯೋಗ್ಯತೆಯಿಲ್ಲದವರಿಗೆ  ಹಿಂದುತ್ವ ಅರ್ಥವಾಗುವುದಿಲ್ಲ. ಇತಿಹಾಸ ಗೊತ್ತಿಲ್ಲದ ಮೂರ್ಖರು ಈ ದೇಶದಲ್ಲಿದ್ದಾರೆ. ವೇದಗಳಿಗೆ ಚೌಕಟ್ಟು ಹಾಕಲು ಹೋದವರು ಅಜ್ಞಾನಿಗಳು ಎಂದು ಪರೋಕ್ಷವಾಗಿ ಕಾಂಗ್ರೆಸ್‌ನ್ನು ಕುಟುಕಿದರು.

ಸತ್ಯ ಅರ್ಥ ಆಗಿದ್ದರೂ ಒಪ್ಪಿಕೊಳ್ಳುವ ಶಕ್ತಿ ಅವರಲಿಲ್ಲ. ಅದಕ್ಕಾಗಿ ಆರ್ಯರು ಮಧ್ಯ ಏಷ್ಯಾದಿಂದ ಬಂದವರು ಎಂದು ಪೂರ್ವಾಗ್ರಹ ಪೀಡಿತ ಪಿಂಡಗಳು ಮಾತನಾಡುತ್ತಿವೆ. ಮೂಢರ ಬಗ್ಗೆ ತಾವು ಕಠೋರವಾಗಿಯೇ ಪದ ಪ್ರಯೋಗಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. 

ಕೆಲವರು ಭ್ರಮೆಯಲ್ಲಿಯೇ ಬದುಕುತ್ತಿದ್ದಾರೆ. ಅಂತವರಿಗೆ ಅನಂತ್ ಹೆಗಡೆ ವಿರೋಧವಾಗಿ ಕಾಣಬಹುದು. ಸಿಎಎ ಬಗ್ಗೆ ಯಾವುದೇ ವಿವಾದವಿಲ್ಲ. ಇದನ್ನು ವಿರೋಧಿಸಿದವರಿಗೂ ಚೆನ್ನಾಗಿ ಗೊತ್ತಿದೆ. ಆದರೂ ಪೂರ್ವಾಗ್ರಹದಿಂದ ವಿರೋಧಿಸುತ್ತಿದ್ದಾರೆ ಎಂದರು.

ಉದ್ಯೋಗವಿಲ್ಲದ ಎಡಬಿಡಂಗಿಗಳು ವಿವಾದ ಸೃಷ್ಟಿಸುತ್ತಾರೆ. ಹೀಗಾಗಿಯೇ ರಾಷ್ಟ್ರೀಯತೆಯ ಬಗ್ಗೆಯೇ ದೇಶದಲ್ಲಿ ಚರ್ಚೆಯಾಗುತ್ತಿದೆ. ಹಿಂದೂತ್ವದ ಬಗ್ಗೆ ಅಮೆರಿಕಾಕಕ್ಕೆ ಹೋಗಿ ಮಾತನಾಡಲಿ ನೋಡೋಣ. ಇಂತಹ ವೈಕ್ತಿಗಳು ಪಾಕಿಸ್ತಾನಕ್ಕೆ ಹೋಗಿ ಇಸ್ಲಾಂ ಬಗ್ಗೆ ಮಾತನಾಡುವ ಧೈರ್ಯ ತೋರಲಿ ಎಂದು ಸವಾಲು ಹಾಕಿದರು. 

ವಿತಂಡವಾದಕ್ಕೆ ನಾವು ಅವಕಾಶ ಕೊಡಬಾರದು. ಇಂತಹ ಸಂಗತಿಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನಾವು ಒಪ್ಪಿಕೊಳ್ಳಬಾರದು. ಚರ್ಚೆ ದೇಶಕ್ಕೆ ಪೂರಕವಾಗಿರಬೇಕು. ಒಂದು ಅಸ್ತಿತ್ವದ ಬುಡಕ್ಕೆ ಬಾಂಬ್ ಇಡುವ ದುರಂತ ಇನ್ನೆಲ್ಲೂ ನಡೆಯುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ಬಂದ ನಂತರ ತುಂಬ ಒಳ್ಳೆಯದು. ಯಾವ್ಯಾವ ಹುತ್ತದಲ್ಲಿ ಯಾವ್ಯಾವ ಹಾವು ಇವೆ ಎಂಬುದು ಗೊತ್ತಾಗಿದೆ. ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಬುದ್ಧಿಜೀವಿಗಳಿದ್ದಾರೆ ಎಂದು ಗೊತ್ತಾಗುತ್ತಿದೆ. ಇಂತವರು ಇನ್ನಷ್ಟು ಬರಲಿ, ಬಿಲದ ಕೊನೆಯ ಇಲಿಯೂ ಹೊರಬರಲಿ. ನಮಗೂ ಟಾರ್ಗೆಟ್ ಮಾಡಲು ಅವಕಾಶ ಸಿಗುತ್ತದೆ. ಸರ್ಕಾರಕ್ಕೂ ಈ ಬಗ್ಗೆ ಇಚ್ಚಾಶಕ್ತಿಯಿದೆ ಎಂದರು.

ಇತ್ತೀಚೆಗೆ ವಿ.ಡಿ.ಸಾವರ್ಕರ್ ಬಗ್ಗೆ ಮತ್ತೆ ಮತ್ತೆ ವಿವಾದ ಹೊರಬೀಳುತ್ತಿವೆ. ರಾಹುಲ್ ಗಾಂಧಿ ಸಾವರ್ಕರ್ ವಾದ. ಕಪಿಲ್ ಸಿಬಲ್ ಸಾವರ್ಕರ್ ವಾದ ಎಂದು ಬದಲಾಗುತ್ತಿದೆ. ಯುದ್ಧ ನೀತಿಯಲ್ಲಿ ಎರಡು ವಿಧವಿದೆ. ಮತ್ತೊಬ್ಬರ ಸಾವೇ ಜಯವನ್ನು ತಂದುಕೊಡುತ್ತದೆ. ಸಾವು ಜಯವನ್ನು ಗುರ್ತಿಸುತ್ತಿದೆ. ಆದರೆ ಇವತ್ತು ತಂತ್ರವಿಲ್ಲ, ಬರೀ ಕುತಂತ್ರವೇ ತುಂಬಿದೆ. ರವಿ ಕಾಣದ್ದನ್ನ ಕವಿ ಕಂಡ ಎನ್ನುವಂತೆ‌ ರವಿ ಕಾಣದ್ದನ್ನು ಕಪಿ ಕಂಡ ಎಂದು ಹೇಳಬೇಕಾಗುತ್ತದೆ ಎಂದು ಅನಂತ್ ಕುಮಾರ್ ಹೆಗಡೆ ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com