ದೊರೆಸ್ವಾಮಿ ಪಾಕ್ ಏಜೆಂಟ್ ಹೇಳಿಕೆ ಹಿಂಪಡೆಯಲು ಸಾಧ್ಯವೇ ಇಲ್ಲ: ಬಿಜೆಪಿ ಶಾಸಕ ಯತ್ನಾಳ್

ಎಚ್.ಎಸ್.ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೊರಾಟಗಾರ ಎಂದು ತಾವು ನೀಡಿರುವ ಹೇಳಿಕೆಯನ್ನು ಹಿಂಪಡೆಯಲು ಸಾಧ್ಯವೇ ಇಲ್ಲ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ಎಚ್.ಎಸ್.ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೊರಾಟಗಾರ ಎಂದು ತಾವು ನೀಡಿರುವ ಹೇಳಿಕೆಯನ್ನು ಹಿಂಪಡೆಯಲು ಸಾಧ್ಯವೇ ಇಲ್ಲ. ತಮ್ಮ ಹೇಳಿಕೆಗೆ ಬದ್ಧ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, "ದೊರೆಸ್ವಾಮಿ ವಿರುದ್ಧ ನೀಡಿರುವ ಹೇಳಿಕೆ ಹಿಂಪಡೆಯಲು ಸಾಧ್ಯವೇ ಇಲ್ಲ. ದೊರೆಸ್ವಾಮಿ ಅವರ ನಡಾವಳಿಗಳೇ ಅವರು ಹೇಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ದೊರೆಸ್ವಾಮಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖವಾಣಿ ಎಂದು ವಾಗ್ದಾಳಿ ನಡೆಸಿದರು. 

ದೇಶ ವಿರೋಧಿ ಚಟುವಟಿಕೆ ಮಾಡುವವರು, ದೇಶದ ವಿರುದ್ಧ, ಪಾಕಿಸ್ತಾನದ ಪರ ಘೋಷಣೆ ಹಾಕುವವರ ವಿರುದ್ಧ ಕಾಂಗ್ರೆಸ್ ನವರು ಹೋರಾಟ ಮಾಡಲಿ. ನನ್ನ ವಿರುದ್ಧ ಹೋರಾಟ ಮಾಡುವುದರಿಂದ ಅವರಿಗೆ ಯಾವುದೇ ಲಾಭವಿಲ್ಲ. ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕಿಸ್ತಾನದ ಪರ ಹೇಳಿಕೆ ನೀಡಿದವರ ವಿರುದ್ಧ ಬೇಕಿದ್ದರೆ ಅವರು ಹೋರಾಟ ಮಾಡಲಿ. ಕಾಂಗ್ರೆಸ್ ನ ಗೊಡ್ಡು ಬೆದರಿಕೆಗಳಿಗೆ ಹೆದರುವುದೂ ಇಲ್ಲ. ಬೆದರುವುದೂ ಇಲ್ಲ ಎಂದು ಯತ್ನಾಳ್ ಹೇಳಿದರು.

ದೊರೆಸ್ವಾಮಿ ಅವರಿಗೆ ರಾಷ್ಟ್ರಭಕ್ತಿ ಇದ್ದಿದ್ದರೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ವಿರುದ್ಧ, ಪೌರತ್ವ ತಿದ್ದುಪಡಿ ಕಾಯ್ದೆ -ಸಿಎಎ ವಿರೋಧಿ ಹೋರಾಟದ ಬಗ್ಗೆ ಯಾಕೆ ಈವರೆಗೆ ಹೇಳಿಕೆ ನೀಡಿಲ್ಲ. ಇಂತಹ ಧೋರಣೆಯನ್ನು ಯಾಕೆ ಖಂಡಿಸಿಲ್ಲ ಎಂದರು. 

ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಅಂತಹವರಿಗೆ ಭಾರತೀಯ ಪೌರತ್ವ ನೀಡಿ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹೇಳಿದ್ದರು. ಆದರೆ, ಅವರ ತತ್ವಗಳನ್ನು ಎಂದೂ ದೊರೆಸ್ವಾಮಿ ಪುನರುಚ್ಚರಿಸಿಲ್ಲ. ಪಾಲಿಸಿಲ್ಲ. ಹೀಗಿರುವಾಗ ದೊರೆಸ್ವಾಮಿ ಹೇಗೆ ಮಹಾತ್ಮಾ ಗಾಂಧಿ ಅನುಯಾಯಿ ಆಗಲು ಸಾಧ್ಯ ಎಂದು ಯತ್ನಾಳ್ ಪ್ರಶ್ನಿಸಿದರು. 

ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಗಾಂಧಿ ಹೆಸರನ್ನು ಈವರೆಗೆ ಬಂಡವಾಳ ಮಾಡಿಕೊಂಡು ಬಂದಿದೆ. ಇದೀಗ ದೇಶದ ಜನ ಅಕ್ಷರಸ್ಥರಾಗಿದ್ದು, ಅವರಿಗೆ ಎಲ್ಲವೂ ಅರ್ಥವಾಗುತ್ತಿದೆ. ಗಾಂಧಿ ಎಂದಾಗ ಇದು ಗಾಂಧಿ ಅವರ ಪೀಳಿಗೆ ಎಂದು ಈವರೆಗೆ ದೇಶದ ಜನ ತಿಳಿದುಕೊಂಡಿದ್ದರು. ಆದರೆ, ಈಗ ಗಾಂಧಿ ಕುಟುಂಬದ ಬಗ್ಗೆ ಜನರಲ್ಲಿ ಅರಿವು ಮೂಡಿದೆ ಎಂದರು.

ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹೊರಾಟ ತಲೆತಗ್ಗಿಸುವಂತೆ ಮಾಡಿದೆ. ಪೋಲಿಸರ ಮೇಲೆ ಗುಂಡಿನ ದಾಳಿ ಮಾಡುವ, ಸೈನಿಕರ ಮೇಲೆ ಆಸಿಡ್ ಎರಚುವ, ಅಂಗಡಿಗಳನ್ನು ಧ್ವಂಸಗೊಳಿಸುವುದು ಯಾವ ರೀತಿಯ ಹೋರಾಟ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ. ಸೋನಿಯಾ ಗಾಂಧಿ ಅವರಿಗೆ ಮೋದಿ ಸರ್ಕಾರ ಟೀಕಿಸಲು ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಮಾತನಾಡುವ ನೈತಿಕತೆ ವಿರೋಧ ಪಕ್ಷಗಳಿಗಿಲ್ಲ. ಇನ್ನು ಮುಂದೆ ದೇಶ ವಿರೋಧಿ ಚಟುವಟಿಕೆ ಪ್ರಕರಣದಲ್ಲಿ ಜೈಲಿಗೆ ಕರೆದುಕೊಂಡು ಹೋದವರಿಗೆ ಹೋಗಿ ಬಿರಿಯಾನಿ ತಿನ್ನಿಸುವುದಿಲ್ಲ. ಆ ಕಾಲ ಮುಗಿಯಿತು, ಇನ್ಮುಂದೆ ಇಂತಹ ದೇಶ ವಿರೋಧಿಗಳು ನೇರವಾಗಿ ಜನ್ನತ್ ಗೆ ಹೋಗಬೇಕು ಎಂದರು. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಸಹ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸುಮ್ಮನಿದ್ದರು. ಅವರು ತೆರಳಿದ ಮೇಲೆ ಇದೀಗ ದೆಹಲಿಯಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ. ದೇಶದಲ್ಲಿ ಕ್ರಾಂತಿ ಆಗಬೇಕಿದ್ದು, ಸುಮ್ಮನಿದ್ದರೆ ಈ ದೇಶ ಉಳಿಯುವುದಿಲ್ಲ. ಹಿಂದುಗಳಿಗೆ ರಕ್ಷಣೆ ದೊರೆಯುವುದಿಲ್ಲ ಎಂದರು. 

ಕಾಂಗ್ರೆಸ್ ನಾಯಕರಿಗೆ ಬಾಬಾಸಾಹೇಬ ಅಂಬೇಡ್ಕರ್ ಪೋಟೋ ಹಾಕುವ ನೈತಿಕತೆ ಇಲ್ಲ. ಅಂಬೇಡ್ಕರ್ ರಚಿಸಿದ ಸಂವಿಧಾನ ಹಾಗೂ ಅವರ ಜೀವನ ಕುರಿತು ಕಾಂಗ್ರೆಸ್ ನಾಯಕರು ಓದಿಕೊಂಡಿಲ್ಲ. ಇದೀಗ ಇವರು ನಮಗೆ ಪಾಠ ಮಾಡಲು ಬರುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು. 

ಯಡಿಯೂರಪ್ಪ ಅವರನ್ನು ಪಕ್ಷದ ವರಿಷ್ಠರು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ. ಈ ಅವಧಿ ಪೂರ್ಣ ಅವರು ಮುಖ್ಯಮಂತ್ರಿ ಆಗಿ ಮುಂದುವರೆಯಬೇಕು. ಕಾಲು ಹಿಡಿದು ಎಳೆದಾಡುವವರು ಎಲ್ಲ ಕಡೆ ಇದ್ದೇ ಇರುತ್ತಾರೆ. ಹಾಗೆ ನನ್ನ ಕಾಲನ್ನು ಹಿಡಿದು ವಿಜಯಪುರದಲ್ಲಿ ಸಾಕಷ್ಟು ಜಗ್ಗಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದರು. 
ರಾಜ್ಯದಲ್ಲಿ ಯಡಿಯೂರಪ್ಪ ನಂತರ ಉತ್ತರಾಧಿಕಾರಿ ಯಾರಾಗಬೇಕು ಎಂಬುದನ್ನು ಪಕ್ಷ ನಿರ್ಣಯ ಮಾಡುತ್ತದೆ. ಈ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com