ಬೆಂಗಳೂರು: ಮೇಲ್ಮನೆಯ 16 ನಿವೃತ್ತ ಸದಸ್ಯರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಮೇಲ್ಮನೆಯಲ್ಲಿ ತಮ್ಮ ಅವಧಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ 16 ಮಂದಿ ಸದಸ್ಯರನ್ನು ಶುಕ್ರವಾರ ಬೀಳ್ಕೊಡಲಾಯಿತು.
ನಿವೃತ್ತ ಸದಸ್ಯರೊಂದಿಗೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ
ನಿವೃತ್ತ ಸದಸ್ಯರೊಂದಿಗೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ

ಬೆಂಗಳೂರು: ಮೇಲ್ಮನೆಯಲ್ಲಿ ತಮ್ಮ ಅವಧಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ 16 ಮಂದಿ ಸದಸ್ಯರನ್ನು ಶುಕ್ರವಾರ ಬೀಳ್ಕೊಡಲಾಯಿತು.

ಇಂದು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ವಿಧಾನ ಪರಿಷತ್ ಸಚಿವಾಲಯ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮತ್ತಿತರ ಗಣ್ಯರು ನಿವೃತ್ತ ವಿಧಾನ ಪರಿಷತ್ ಸದಸ್ಯರನ್ನು ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ವಿಪಕ್ಷ ಮುಖ್ಯ ಸಚೇತಕ ನಾರಾಯಣಸ್ವಾಮಿ, ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಸೇರಿ ಹಲವರು ಭಾಗಿಯಾಗಿದ್ದರು.

ಎಂಟು ಮಂದಿ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಉಳಿದ ಸದಸ್ಯರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಜಯಮಾಲ, ತಿಪ್ಪಣ್ಣ, ಕಮಕನೂರು, ಶರಣಪ್ಪ ಮಟ್ಟೂರು, ಜಯಮ್ಮ, ಬೋಸರಾಜ್, ಎಚ್.ಎಂ.ರೇವಣ್ಣ, ಟಿಎ ಶರವಣ, ಎಂಸಿ ವೇಣುಗೋಪಾಲ್ ಅವರಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಮುಖ್ಯಮಂತ್ರಿ ಗೈರು
ಗೃಹ ಕಚೇರಿ ಕೃಷ್ಣಾದಲ್ಲಿ ಸಿಬ್ಬಂದಿಗೆ ಕೊರೋನಾ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಗೈರು ಹಾಜರಾಗಿದ್ದರು.

ಈ ಸಂದರ್ಭದಲ್ಲಿ ವಿದಾಯ ಭಾಷಣ ಮಾಡುವಾಗ ತಿಪ್ಪಣ್ಣ ಕಮಕನೂರು ಭಾವುಕರಾದರು. ಹಿಂದುಳಿದ ಸಮುದಾಯದಿಂದ ಬಂದ ನನಗೆ ಉತ್ತಮ ಅವಕಾಶ ದೊರಕಿಸಿ ಕೊಡಲಾಗಿತ್ತು. ನನಗೆ ತಂದೆ ಇಲ್ಲ. ಸಭಾಪತಿ ಗಳನ್ನು ತಂದೆ ಸ್ಥಾನದಲ್ಲಿ ನೋಡಿದ್ದೇನೆ. ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಸೋದರನ ಸ್ಥಾನದಲ್ಲಿ ನೋಡಿದ್ದೇನೆ ಎಂದು ಹೇಳುವಾಗ ಭಾವುಕರಾಗಿ ಕಣ್ಣೀರು ಹಾಕಿದರು.

ನಿವೃತ್ತರಾದ ಪರಿಷತ್ ಸದಸ್ಯರು
ನಾಮನಿರ್ದೇಶಿತ ಸದಸ್ಯರಾಗಿದ್ದ ಕಾಂಗ್ರೆಸ್ ನ ಕೆ.ಅಬ್ದುಲ್ ಜಬ್ಬಾರ್, ಹಿರಿಯ ನಟಿ ಡಾ.ಜಯಮಾಲ, ರಾಮಚಂದ್ರ, ಐವನ್ ಡಿಸೋಜಾ, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಅವರು ಜೂ.23 ರಂದು ನಿವೃತ್ತರಾಗಿದ್ದರು.

ರಾಜ್ಯ ವಿಧಾನ ಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಿದ್ದ ಸದಸ್ಯರಾದ ಕಾಂಗ್ರೆಸ್ ನ ಜಯಮ್ಮ, ಎನ್.ಎಸ್. ಬೋಸರಾಜು, ಎಚ್. ಎಂ. ರೇವಣ್ಣ, ಡಿ.ಯು.ಮಲ್ಲಿಕಾರ್ಜುನ, ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್, ಜೆಡಿಎಸ್ ನ ಟಿ.ಎ. ಶರವಣ ಅವರು ಜೂ.30ರಂದು ನಿವೃತ್ತಿಯಾಗಿದ್ದರು.

ಹಾಗೆಯೇ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಸದಸ್ಯರಾದ ಜೆಡಿಎಸ್ ನ ಆರ್. ಚೌಡರೆಡ್ಡಿ ತೂಪಲ್ಲಿ, ಕಾಂಗ್ರೆಸ್ ನ ಎಸ್.ವಿ.ಸುಂಕನೂರ, ಶಿಕ್ಷಕರ ಕ್ಷೇತ್ರದ ಚುನಾಯಿತ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಕಾಂಗ್ರೆಸ್ ಶರಣಪ್ಪ ಮುಟ್ಟೂರ ಅವರು ಜೂ.30ರಂದು ನಿವೃತ್ತಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com