ಎಂಎಲ್ ಸಿ ಆಗುವ ವಿಶ್ವನಾಥ್ ಹೆಬ್ಬಯಕೆಗೆ ಬಿಜೆಪಿ ಎಳ್ಳುನೀರು: ಯಡಿಯೂರಪ್ಪ ಮೇಲೆ ಹಳ್ಳಿಹಕ್ಕಿಗೆ ಇನ್ನೂ ಭರವಸೆ!

ಸರಿಯಾಗಿ ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಂಡಾಯ ಶಾಸಕರ ಮುಂದಾಳತ್ವ ವಹಿಸಿದ್ದ ಮಾಜಿ ಶಾಸಕ ಎಚ್. ವಿಶ್ವನಾಥ್, ಇಂದು ಏಕಾಂಗಿಯಾಗಿ ನಿಂತಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ  ಬಿಜೆಪಿ ವಿಫಲವಾಗಿದೆ. ಆದರೆ ಸಾರ್ವಜನಿಕವಾಗಿ ವಿಶ್ವನಾಥ್ ತಮ್ಮ ಅಸಮಾಧಾನ ವ್ಯಕ್ತ ಪಡಿಸುತ್ತಿಲ್ಲ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಬೆಂಗಳೂರು: ಸರಿಯಾಗಿ ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಂಡಾಯ ಶಾಸಕರ ಮುಂದಾಳತ್ವ ವಹಿಸಿದ್ದ ಮಾಜಿ ಶಾಸಕ ಎಚ್. ವಿಶ್ವನಾಥ್, ಇಂದು ಏಕಾಂಗಿಯಾಗಿ ನಿಂತಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ  ಬಿಜೆಪಿ ವಿಫಲವಾಗಿದೆ. ಆದರೆ ಸಾರ್ವಜನಿಕವಾಗಿ ವಿಶ್ವನಾಥ್ ತಮ್ಮ ಅಸಮಾಧಾನ ವ್ಯಕ್ತ ಪಡಿಸುತ್ತಿಲ್ಲ.

ವಿಧಾನ ಪರಿಷತ್ ನಾಮ ನಿರ್ದೇಶನದ ಸೀಟುಗಳು ಇನ್ನೂ ಫೈನಲ್ ಆಗದ ಕಾರಣ ವಿಶ್ವನಾಥ್ ಬಿಜೆಪಿ ವಿರುದ್ಧ ತುಟಿ ಬಿಚ್ಚದೇ ಸುಮ್ಮನಿದ್ದಾರೆ, ಹುಣಸೂರಿನಲ್ಲಿ ಬಿಜೆಪಿ ಗೆ ಕೇವಲ 3000-4000 ಮತಗಳು ಬರುತ್ತಿದ್ದವು, ನನ್ನಿಂದ 57 ಸಾವಿರ ಮತಗಳು ಬರಲು ಸಾಧ್ಯವಾಗಿದೆ, ಇದು ಪಕ್ಷಕ್ಕೆ ನನ್ನ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಅವರಿಗಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸುಮಾರು ಒಂದೂವರೆ ಗಂಟೆ ಕಾದಿದ್ದ ವಿಶ್ವನಾಥ್ ಕೆಂಡಾಮಂಡಲರಾಗಿ ಜೆಡಿಎಸ್ ತೊರೆಯಲು ಕಾರಣವಾಗಿತ್ತು. ಈಗಲು ಕೂಡ ಅದೇ ರೀತಿಯ ಲಕ್ಷಣಗಳು ಗೋಚರಿಸುತ್ತಿವೆ ಎಂದು ಕೆಲವರು ಹೇಳುತ್ತಿದ್ದಾರೆ.

ಪಂಚತಾರಾ ಹೋಟೆಲ್‌ನಲ್ಲಿ ಸಾಮಾನ್ಯ ಜನರು ಹೇಗೆ ಭೇಟಿಯಾಗಬಹುದು ಎಂದು ವಿಶ್ವನಾಥ್, ಕುಮಾರಸ್ವಾಮಿಯನ್ನು ಕೇಳಿದ್ದರು, ಹೀಗಾಗಿ ನೀವು ವಿಧಾನಸೌಧದಲ್ಲಿ ಇರಬೇಕು ಎಂದು ಹೇಳಿದ್ದರು. ಅದಾದ ನಂತರ  ಅವರು ಜೆಡಿಎಸ್ ತೊರೆದಿದ್ದು, ಸದ್ಯ ವಿಶ್ವನಾಥ್ ಅದೇ ರೀತಿಯ ಹಾದಿಯಲ್ಲಿದ್ದಾರೆ.

ಹಿಂದಿನ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಕುರುಬ ಮುಖಂಡರಾದ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಮಹತ್ವದ ಹುದ್ದೆ ಹೊಂದಿದ್ದರು. ನಾಗರಾಜ್ ಸಚಿವರಾಗಿದ್ದರು.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರು. ಅದಾದ ನಂತರ ಇಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ನಾಗರಾಜ್ ಅವರನ್ನು ಎಂಎಲ್ ಸಿ  ಮಾಡಲಾಯಿತು, ವಿಶ್ವನಾಥ್ ಅವರನ್ನು ಕಡೆಗಣಿಸಲಾಯಿತು. ವಿಶ್ವನಾಥ್ ಅವರಿಗೆ ಎಂಎಲ್ ಸಿ ಸ್ಥಾನ ತಪ್ಪಲು  ಕಾಣದ ಕೈಗಳ ಒತ್ತಾಯವಿದೆ ಅವರ ಬೆಂಬಲಿಗರು ಎಂದು ದೂರಿದರು,

ಆದರೆ ವಿಶ್ವನಾಥ್ ಇನ್ನೂ ಭರವಸೆ ಕಳೆದುಕೊಂಡಿಲ್ಲ, ಯಡಿಯೂರಪ್ಪ ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂದು ವಿಶ್ವನಾಥ್ ಹೇಳಿದ್ದಾರೆ, ಇನ್ನು ಮುಂದಿನ ವಾರ ಎಂಎಲ್ ಸಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದ್ದು, ಸಿಎಂ ಅವರನ್ನು ವಿಶ್ವನಾಥ್ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com