ತೆವಲಿನ ಬಗ್ಗೆ ಕುಮಾರಸ್ವಾಮಿ ಉಪದೇಶ ಮಾಡ್ತಾರಾ: ಕೃಷಿ ಸಚಿವ ಬಿ.ಸಿ.ಪಾಟೀಲ್ ಲೇವಡಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಳಸುವಂತಹ ಹಗುರವಾದ ಪದಗಳನ್ನಾಗಲೀ ಅವರು ಹೇಳಿರುವಂತೆ ತೆವಲು ಭಾಷೆಯನ್ನಾಗಲೀ ತಾವು ಬಳಸುವುದಿಲ್ಲ ಎಂದು ಕೃಷಿ  ಸಚಿವ ಬಿ.ಸಿ‌. ಪಾಟೀಲ್ ಅವರು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ-ಬಿಸಿ ಪಾಟೀಲ್
ಕುಮಾರಸ್ವಾಮಿ-ಬಿಸಿ ಪಾಟೀಲ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಳಸುವಂತಹ ಹಗುರವಾದ ಪದಗಳನ್ನಾಗಲೀ ಅವರು ಹೇಳಿರುವಂತೆ ತೆವಲು ಭಾಷೆಯನ್ನಾಗಲೀ ತಾವು ಬಳಸುವುದಿಲ್ಲ ಎಂದು ಕೃಷಿ  ಸಚಿವ ಬಿ.ಸಿ‌. ಪಾಟೀಲ್ ಅವರು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿಂದು ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷಿ  ಸಚಿವರು, ತೆವಲಿನ ಬಗ್ಗೆ ಕುಮಾರಸ್ವಾಮಿ ಅವರಿಗೆ ಬಹಳ ಚೆನ್ನಾಗಿಯೇ ಗೊತ್ತಿದೆ ಅನಿಸುತ್ತದೆ. ಕ್ಷೇತ್ರದ ಜನರು ತಮ್ಮನ್ನು ಸುಮ್ಮನೆ  ಆರಿಸಿ ಕಳಿಸಿಲ್ಲ ಎಂದು ತಿರುಗೇಟು ನೀಡಿದರು.

2006-07  ರಲ್ಲಿ ತಾವು ಎಷ್ಟು ಕೆಲಸ ಮಾಡಿಕೊಂಡು ಹೋಗಿದ್ದೇನೆ ಎಂದು ಕುಮಾರಸ್ವಾಮಿ ಅವರು  ಹೇಳಿದ್ದಾರೆ. ಅದು ನನ್ನ ಮನೆಗೆ ಕೊಟ್ಟ ದುಡ್ಡಲ್ಲ. ಶಾಸಕನಾಗಿ ಗೆದ್ದು ಬಂದಿದ್ದಾಗ  ಕ್ಷೇತ್ರದ ಅಭಿವೃದ್ಧಿಗೆ  ಕೊಡಬೇಕಾದ ಹಣ ಅದು. ಸುಮ್ಮನೆ ದಾರಿಲೀ ಹೋಗುವವನಿಗೆ ಕೊಟ್ಟ  ದುಡ್ಡಲ್ಲ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾವು. ಕ್ಷೇತ್ರಕ್ಕೆ  ಅನುದಾನ ಬಿಡುಗಡೆ ಮಾಡಿರುವುದು ಅವರ ಕರ್ತವ್ಯ. ಕ್ಷೇತ್ರಕ್ಕೆ ಕೊಟ್ಟ ಹಣವನ್ನು ಹೀಗೆ  ಹೇಳುವುದು ಸರಿಯಲ್ಲ ಎಂದು ಕುಟುಕಿದರು.
ತಮ್ಮ ಬಗ್ಗೆ ಕುಮಾರಸ್ವಾಮಿ ಏಕವಚನದಲ್ಲಿ ಪದಪ್ರಯೋಗ ಮಾಡಿದ್ದಾರೆ. ಅವರು ಪದ ಬಳಕೆ ಮಾಡಿದಂತೆ ತಾವು ಮಾಡುವುದಿಲ್ಲ‌ ಎಂದರು‌.

ಹಿರೇಕೆರೂರಿನಲ್ಲಿ ಮೀಸಲಿಟ್ಟ ಹಣದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದು ಸತ್ಯಕ್ಕೆ ದೂರವಾದ ಮಾತು‌. ಅವರು ತಮ್ಮ ಬಜೆಟ್ ನಲ್ಲಿ ನಮ್ಮ ಕ್ಷೇತ್ರಕ್ಕೆ ಒಂದು ರೂಪಾಯಿಯನ್ನೂ ನೀಡಿಲ್ಲ. ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಚರ್ಚೆ ಮಾಡಿ, ಡಿಪಿಎಆರ್ ನಲ್ಲಿ ಆದೇಶ ಮಾಡಿಸಿ ಕ್ಯಾಬಿನೆಟ್ ನಲ್ಲಿ ಅನುಮೋದನೆ ಪಡೆದ ಬಳಿಕ 185ಕೋಟಿ ರೂ ಬಿಡುಗಡೆ ಮಾಡಿಸಿ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅದು ಕುಮಾರಸ್ವಾಮಿ ಕೊಟ್ಟ ಅನುದಾನ ಅಲ್ಲ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com