ಸುಧಾಕರ್-ರಮೇಶ್ ಕುಮಾರ್ ಹಕ್ಕುಚ್ಯುತಿ ಪ್ರಕರಣ: ವಿಷಾದದೊಂದಿಗೆ ಸುಖಾಂತ್ಯ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್ ರಮೇಶ್ ಕುಮಾರ್ ನಡುವೆ ಮಂಡಿಸಲಾಗಿದ್ದ ಮೂರು ಹಕ್ಕುಚ್ಚುತಿ ಪ್ರಸ್ತಾವಗಳನ್ನು ತೀವ್ರ ವಾದಾ ಪ್ರತಿವಾದಗಳ ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೈ ಬಿಟ್ಟಿದ್ದಾರೆ. 
ಸುಧಾಕರ್-ರಮೇಶ್ ಕುಮಾರ್ ಹಕ್ಕುಚ್ಯುತಿ ಪ್ರಕರಣ: ವಿಷಾದದೊಂದಿಗೆ ಸುಖಾಂತ್ಯ
ಸುಧಾಕರ್-ರಮೇಶ್ ಕುಮಾರ್ ಹಕ್ಕುಚ್ಯುತಿ ಪ್ರಕರಣ: ವಿಷಾದದೊಂದಿಗೆ ಸುಖಾಂತ್ಯ

ಬೆಂಗಳೂರು:  ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಆರ್ ರಮೇಶ್ ಕುಮಾರ್ ನಡುವೆ ಮಂಡಿಸಲಾಗಿದ್ದ ಮೂರು ಹಕ್ಕುಚ್ಚುತಿ ಪ್ರಸ್ತಾವಗಳನ್ನು ತೀವ್ರ ವಾದಾ ಪ್ರತಿವಾದಗಳ ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೈ ಬಿಟ್ಟಿದ್ದಾರೆ.

ಸಚಿವ ಸುಧಾಕರ್ ಅವರ ವಿರುದ್ಧ ರಮೇಶ್ ಕುಮಾರ್ ತೀವ್ರ ಆಕ್ಷೇಪಣಾ ಪದಗಳನ್ನು ಬಳಸಿದ್ದಾರೆ. ಅವರ ವಿರುದ್ಧ ನಿಯಮ 363ರಡಿ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಮಾಡಿದ್ದ ಮನವಿಯನ್ನು ಸ್ಪೀಕರ್ ಕಾಗೇರಿ ತಳ್ಳಿಹಾಕಿದ್ದಾರೆ. ಕಳೆದ ಎರಡು ದಿನಗಳಿಂದ ವಿಧಾನ ಸಭೆಯಲ್ಲೂ ಈ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಬಾರೀ ಜಿದ್ದಾಜಿದ್ದಿಗೆ ಕಾರಣವಾಗಿ ಕಲಾಪ ನಡೆದಿರಲಿಲ್ಲ. 

ಇಂದು, ಈ ವಿಚಾರವಾಗಿ ಸುಧಾಕರ್ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆ.ಆರ್ ರಮೇಶ್ ಕುಮಾರ್ ನಡುವೆ ಭೋಜನ ವಿರಾಮದ ನಂತರ ಮಾತಿನ ಚಕಮಕಿ ಮತ್ತು ಪಾಂಡಿತ್ಯದ ಪ್ರದರ್ಶನ, ಆರೋಪ ಪ್ರತ್ಯಾರೋಪ ಬಹಳ ಹೊತ್ತಿನ ವರೆಗೂ ನಡೆಯಿತು. ಸಚಿವ ಸುಧಾಕರ್ ಪರವಾಗಿ ಬಿಜೆಪಿ ಸದಸ್ಯರು ಬೆಂಬಲಕ್ಕೆ ನಿಂತರೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸದಸ್ಯರು ಸಾಥ್ ನೀಡಿದರು. ಇದಕ್ಕೂ ಮೊದಲು ಸಚಿವ ಸುಧಾಕರ್ ಈ ಬಗ್ಗೆ ಸದನ ತಲೆದೂಗುವಂತೆ ವಿವರಣೆ ನೀಡಿದರು.

ಹಿಂದಿನ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಪಕ್ಷಪಾತದಿಂದ ಹಾಗೂ ರಾಜಕೀಯ ದುರುದ್ದೇಶದಿಂದ ನಮ್ಮ 17 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದರ ಹಿಂದೆ ರಾಜಕೀಯ ದುರುದ್ದೇಶ, ಸ್ವಜನ ಪಕ್ಷಪಾತವಿದೆ ಎಂಬುದು ಸುಪ್ರೀಂ ಕೋರ್ಟ್ ನ ತೀರ್ಮಾನಗಳಿಂದ ಸ್ಪಷ್ಟವಾಗಿದೆ ಎಂದು ಎಳೆಎಳೆಯಾಗಿ ಕೋರ್ಟ್ ಮಾಡಿರುವ ಅಭಿಪ್ರಾಯಗಳನ್ನು ಎಲ್ಲಾ ಸದಸ್ಯರ ಮನ ಮುಟ್ಟುವಂತೆ ವಿವರಿಸಿದರು.

ಸಚಿವ ಸುಧಾಕರ್ ಮಾತನಾಡುವಾಗ ಕೆಲ ಸಮಯ ವಿರೋಧಪಕ್ಷಗಳಿಂದ ಅಡಚಣೆ ಉಂಟಾದರೆ ಆಡಳಿತ ಪಕ್ಷದ ಸದಸ್ಯರು ಆಗಾಗ ಮೇಜು ಕುಟ್ಟಿ ಅವರಿಗೆ ಉತ್ಸಾಹದಾಯಕವಾಗಿ ಪ್ರೇರೇಪಣೆ ನೀಡುತ್ತಿದ್ದರು. ಸುಪ್ರೀಂ ಕೋರ್ಟ್ ನ ಸೂಚನೆಯ ಮೇರೆಗೆ ನಾವು 17 ಶಾಸಕರು ರಾಜಿನಾಮೆ ಕೊಟ್ಟಿದ್ದೇವೆ. ನಮ್ಮ ರಾಜಿನಾಮೆಯನ್ನು ರಮೇಶ್ ಕುಮಾರ್ ಅವರು ಅಂಗೀಕಾರ ಮಾಡದೆ, ವಿಚಾರಣೆಗೂ ಅವಕಾಶ ಕೊಡದೆ ಏಕಾಏಕಿ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಬಹಳ ಸ್ಪಷ್ಟವಾಗಿ ನ್ಯಾಯಾಧೀಶರು ಉಲ್ಲೇಖ ಮಾಡಿದ್ದಾರೆ. ಈ ಸತ್ಯ ರಾಜ್ಯದ ಜನತೆಗೆ ಗೊತ್ತಾಗಬೇಕು. ನಾವು ಹೋರಾಟಕ್ಕೆ ಬಂದಿದ್ದೇವೆಯೇ ಹೊರತು ಮಾರಾಟವಾಗಿಲ್ಲ. ನಾವು ದುಡ್ಡು ತೆಗೆದುಕೊಂಡಿರುವ ಆರೋಪವನ್ನು ಯಾರಾದರೂ ಸಾಬೀತು ಮಾಡಿದರೆ ಬಹಿರಂಗವಾಗಿ ನನ್ನನ್ನು ನೇಣಿಗೆ ಏರಿಸಬಹುದು. ನಾನು ಇದಕ್ಕೆ ಸಿದ್ಧ ಎಂದು ಸುಧಾಕರ್ ಭಾವುಕರಾಗಿ ಹೇಳಿದರು.

ಪಕ್ಷ ತನ್ನ ಅನುಕೂಲಕ್ಕಾಗಿ ರಾಜಕೀಯ ತೀರ್ಮಾನ ಮಾಡಿ ನಮಗೆ ನೋವು ಕೊಟ್ಟರೆ ನಾವು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು, ರಾಜಿನಾಮೆ ಕೊಡುವ ಸ್ವಾತಂತ್ರ್ಯದ ಹಕ್ಕು, ನಮಗೆ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಇಂದು, ರಾಜಕೀಯ ಜೀವನದಲ್ಲಿ ಪಕ್ಷಾಂತರ ಹೆಚ್ಚಾಗಲು ಸ್ಪೀಕರ್ ಅವರ ಸ್ವಜನಪಕ್ಷಪಾತ ವರ್ತನೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಅನರ್ಹತೆ ಪ್ರಕರಣವನ್ನು ನ್ಯಾಯಾಧೀಶರ ಸಮಿತಿಗೆ ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನು ರಮೇಶ್ ಕುಮಾರ್ ಅರ್ಥ ಮಾಡಿಕೊಳ್ಳಬೇಕು. ನಾನು ಸಭಾಧ್ಯಕ್ಷರ ಪೀಠಕ್ಕೆ ಎಂದೂ ಅಗೌರವ ತೋರಿಲ್ಲ. ಮುಂದೆಯೂ ತೋರುವುದಿಲ್ಲ. ಆದರೂ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಈ ಪೀಠಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸುಧಾಕರ್ ಮಾತು ಅಂತ್ಯಗೊಳಿಸಿದರು.

ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ನಾನು ನನ್ನ ವಿವೇಚನೆಯ ಪ್ರಕಾರ ತೀರ್ಮಾನ ಮಾಡಿದ್ದೇನೆ. ನನ್ನ ತೀರ್ಮಾನವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಅದೇ ರೀತಿ ನನ್ನ ತೀರ್ಮಾನದ ಬಗ್ಗೆ ಕೆಲವು ವ್ಯಾಖ್ಯಾನಗಳನ್ನು ಮಾಡಿದೆ. ನಾನು ಸಚಿವ ಸುಧಾಕರ್ ಅವರಿಗೆ ನೋವು ಉಂಟುಮಾಡುವ ರೀತಿಯಲ್ಲಿ ಮಾತನಾಡಿಲ್ಲ. ಅಸಂಸದೀಯ ಪದ ಬಳಸಿಲ್ಲ, ಆದರೂ ನನ್ನಿಂದ ಅವರಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಇದರಿಂದ ನನ್ನ ಕೀರ್ತಿ ಮತ್ತು ಘನತೆ ಕಡಿಮೆಯಾಗುವುದಿಲ್ಲ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ಎರಡೂ ಕಡೆಯವರು ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದನ್ನು ಮುಂದುವರಿಸುವುದಕ್ಕೆ ಅವಕಾಶವಿಲ್ಲ. ಹೊಸ ಸಂಪ್ರದಾಯ ಹುಟ್ಟುಹಾಕುವುದು ಒಳ್ಳೆಯ ಲಕ್ಷಣವಲ್ಲ. ಆದ್ದರಿಂದ ಇದನ್ನು ಇಲ್ಲಿಗೇ ಕೈ ಬಿಡಬೇಕು ಎಂದು ಮನವಿ ಮಾಡಿದ ನಂತರ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಕ್ಕುಚ್ಯುತಿಯ ಮೂರು ಪ್ರಸ್ತಾವನೆಗಳನ್ನು ಕೈ ಬಿಟ್ಟಿರುವುದಾಗಿ ಪ್ರಕಟಿಸಿದರು.

ಒಟ್ಟಾರೆ ಈ ಪ್ರಕರಣ ಬೆಟ್ಟ ಅಗೆದು ಇಲಿ ಹಿಡಿದಂತಾಯಿತು. ರೋಷ ಆವೇಶದಿಂದ ಬಾರೀ ಕೋಲಾಹಲ ಸೃಷ್ಟಿ ಮಾಡಿದ್ದರೂ ಪ್ರಶಾಂತ ಮತ್ತು ನಿರ್ಮಲ ವಾತಾವರಣದಲ್ಲಿ ಅಂತ್ಯವಾಯಿತು. ಇದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಶೋಭೆ ಹೆಚ್ಚಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com