ಸಂಪುಟ ವಿಸ್ತರಣೆಯಲ್ಲ ಪುನಾರಚನೆಗೆ ತೀರ್ಮಾನ, ಬಸವಕಲ್ಯಾಣದಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ: ಸಿಎಂ ಯಡಿಯೂರಪ್ಪ

ಪಕ್ಷದ ರಾಷ್ಟ್ರೀಯ ವರಿಷ್ಟರ ಅನುಮತಿ ಪಡೆದು ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಿಎಂ ಯಡಿಯೂರಪ್ಪ
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಿಎಂ ಯಡಿಯೂರಪ್ಪ

ಬೆಂಗಳೂರು: ಪಕ್ಷದ ರಾಷ್ಟ್ರೀಯ ವರಿಷ್ಟರ ಅನುಮತಿ ಪಡೆದು ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ಉಪ ಚುನಾವಣೆ ಫಲಿತಾಂಶದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ದೊಡ್ಡಮಟ್ಟದ ಬದಲಾವಣೆಗೆ ಚಿಂತನೆ ನಡೆಸಿದ್ದೇವೆ. ಕೆಲವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಒಂದೆರಡು ದಿನಗಳಲ್ಲಿ ಪಕ್ಷದ ಹೈ ಕಮಾಂಡ್ ಭೇಟಿ ಮಾಡಿ ಚೆರ್ಚೆ ನಡೆಸುತ್ತೇನೆ. ಅದೇ ರೀತಿ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಬಗ್ಗೆಯೂ ಪಕ್ಷದ ವರಿಷ್ಠರ ಜೊತೆ ಚೆರ್ಚೆ ನಡೆಸಲಿದ್ದೇನೆ ಎಂದು ಹೇಳುವ ಮೂಲಕ ಸಂಪುಟ ಪುನಾರಚನೆ ಖಚಿತವೆಂದು ಸಂದೇಶ ರವಾನಿಸಿದ್ದಾರೆ.

ಉಪ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರದ ಜನಪರ ಅಭಿವೃದ್ದಿ ಪರ ರೈತ ಪರ ಸರ್ಕಾರಕ್ಕೆ ಜನತೆ ಆಶೀರ್ವಾದ ಮಾಡಿದ್ದಾರೆ ಎಂದು ಭಾವಿಸಿದ್ದೇನೆ. ಉಪ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸುತ್ತೇವೆ. ಆರ್ ಆರ್ ನಗರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವುದಾಗಿ ವಿಶ್ವಾಸವಿತ್ತು. ಅದರಂತೆ 50 ಸಾವಿರ ಮತಗಳ ಅಂತರದಿಂದ ಹಾಗೂ ಶಿರಾದಲ್ಲಿ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇವೆ ಎಂದು ಅವರು ಸಂತಷ ಹಂಚಿಕೊಂಡರು.
 
ಬಸವ ಕಲ್ಯಾಣ ಉಪ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಸವ ಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ. ವಿಜಯೇಂದ್ರ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಲ್ಲ ಎಂದು ಅವರು ತಿಳಿಸಿದರು.

ಬಿಹಾರ ಚುನಾವಣೆ ಹಾಗೂ ಇತರೆ ರಾಜ್ಯಗಳ ಉಪ ಚುನಾವಣೆಯಲ್ಲಿ ಎನ್ ಡಿಎ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಾಗಿವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಜನಪರ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com