ಆರ್.ಆರ್. ನಗರ, ಶಿರಾದಲ್ಲಿ ಹೀನಾಯ ಸೋಲು: ಮುಂಬರುವ ಉಪಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು

ಮುಂಬರುವ ಬಸವಕಲ್ಯಾಣ, ಮಸ್ಕಿ ಉಪ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಂಬರುವ ಬಸವಕಲ್ಯಾಣ, ಮಸ್ಕಿ ಉಪ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.

ಇತ್ತೀಚೆಗೆ ನಡೆದ ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್ ನಾಯಕರು ಮುಂಬರುವ ಉಪ ಚುನಾವಣೆಗಳ ಬಗ್ಗೆ ಚರ್ಚಿಸಿದರು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ನ ಪ್ರಾಬಲ್ಯವಿರುವ ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಮತ್ತೆ ಸೀಟು ವಾಪಸ್ ಪಡೆಯಲು ಪಕ್ಷದ ಮೇಲೆ ಒತ್ತಡವಿದೆ. ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದರು. ಇನ್ನೂ ಶಾಸಕ ನಾರಾಯಣರಾವ್ ಅವರ ನಿಧನದಿಂದ ಬಸವ ಕಲ್ಯಾಣ ಕ್ಷೇತ್ರ ತೆರವಾಗಿದ್ದು,  ಈ ಎರಡು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಲಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಈಗಾಗಲೇ ಬಸವಕಲ್ಯಾಣ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಮುಂದಿನ ವಾರ ಮಸ್ಕಿ ಗೆ ತೆರಳುವ ಸಾಧ್ಯತೆಯಿದೆ, ಶನಿವಾರ ಎಂಬಿ ಪಾಟೀಲ್ ಕಾಂಗ್ರೆಸ್ ನಾಯಕರ ಸಭೆ ಕರೆದು ಚರ್ಚಿಸಿದ್ದಾರೆ.

ಭಾನುವಾರ ಮಸ್ಕಿ ಮತ್ತು ಬಸವ ಕಲ್ಯಾಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಲಿದ್ದಾರೆ. ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆ ಕೆಲ ಸಮಸ್ಯೆಗಳಿವೆ, ಸುಮಾರು 50ರಿಂದ 60 ಸಾವಿರ ಲಿಂಗಾಯತರಿದ್ದು, ಈ ಸಮುದಾಯದ ಮತಗಳು ಕಾಂಗ್ರೆಸ್ ಗೆ ಬರಲಿದೆಯೇ ಇಲ್ಲವೇ ಎಂಬ ಆತಂಕ ಕಾಡುತ್ತಿದೆ.

ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆ ಸೇರಿದಂತೆ ಇತ್ತೀಚೆಗೆ ದೇಶಾದ್ಯಂತ ನಡೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು ಪಕ್ಷದ ಲೆಕ್ಕಾಚಾರ ತಲೆಕೆಳಗಾಗಿದೆ,  ಜೊತೆಗೆ ಬೆಳಗಾವಿ ಕ್ಷೇತ್ರವೂ ಬಿಜೆಪಿ ಪಾಲಾಗಲಿದೆಯೇ ಎಂಬ ಅನುಮಾನವೂ ಕಾಡುತ್ತಿದೆ.

ಶಿರಾ ಮತ್ತು ಆರ್ ಆರ್ ನಗರ ಸೋಲಿನ ಬಗ್ಗೆ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿದ್ದಾರೆ. ಬಿಜೆಪಿ ಪ್ರಾಬಲ್ಯ ಹೆಚ್ಚುತ್ತಿದ್ದು, ಯಾವುದೇ ಹೋರಾಟವಿಲ್ಲದೇ ಕ್ಷೇತ್ರವನ್ನು ಬಿಟ್ಟುಕೊಡಲು ಕಾಂಗ್ರೆಸ್ ಗೂ ಇಷ್ಟವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com