ಡಿ.ಕೆ.ಶಿವಕುಮಾರ್ ಮೇಲೆ ಅಸಮಾಧಾನ: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಪತ್ರ ಬರೆಯಲು ಅಖಂಡ ಶ್ರೀನಿವಾಸ ಮೂರ್ತಿ ನಿರ್ಧಾರ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ತಮಗೆ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂದು ಆರೋಪಿಸಿ ಮುಂದಿನ ವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆಲೋಚಿಸಿದ್ದಾರೆ ಎಂದು ತಿಳಿದುಬಂದಿದೆ.
ಅಖಂಡ ಶ್ರೀನಿವಾಸ ಮೂರ್ತಿ
ಅಖಂಡ ಶ್ರೀನಿವಾಸ ಮೂರ್ತಿ

ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ತಮಗೆ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂದು ಆರೋಪಿಸಿ ಮುಂದಿನ ವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆಲೋಚಿಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ತಮ್ಮನ್ನು ಬೆಂಬಲಿಸುವ ಬದಲು ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಡಿ ಕೆ ಶಿವಕುಮಾರ್ ಬೆಂಬಲಿಸುತ್ತಿದ್ದಾರೆ ಎಂದು ಶ್ರೀನಿವಾಸ ಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಶಿವಕುಮಾರ್ ತಮಗೆ ಬೆಂಬಲ ವ್ಯಕ್ತಪಡಿಸದಿರುವ ಬಗ್ಗೆ ತೀವ್ರ ಬೇಸರವಿದೆ. ತಮ್ಮ ಬಗ್ಗೆ ಅವರು ಯಾವುದೇ ಕನಿಕರದ, ಸಹಾನುಭೂತಿಯ ಮಾತುಗಳನ್ನಾಡಿಲ್ಲ. ಡಿ ಜೆ ಹಳ್ಳಿ ಬೆಂಕಿ ಗಲಭೆ ಪ್ರಕರಣ ನಡೆದು ಮೂರು ತಿಂಗಳುಗಳೇ ಕಳೆದವು. ಸಂಪತ್ ರಾಜ್ ಅವರ ಬಂಧನವಾದ ಮೇಲೆ ಕೂಡ ಅವರಿಗೇ ಶಿವಕುಮಾರ್ ಬೆಂಬಲ ಸೂಚಿಸಿದಂತೆ ಕಂಡುಬಂತು. ಕಳೆದ ತಿಂಗಳು ಸಿಸಿಬಿ ಸಂಪತ್ ರಾಜ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದಾಗ ನಾನು ಶಿವಕುಮಾರ್ ಅವರಿಗೆ ಪತ್ರ ಬರೆದು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಕೇಳಿಕೊಂಡಿದ್ದೆ. ಆದರೆ ಅವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಆದರೆ ತಮಗೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಖಾನ್ ಅವರ ಬೆಂಬಲವಿದೆ. ನನಗೆ ಕೆಪಿಸಿಸಿ ಅಧ್ಯಕ್ಷರಿಂದ ಯಾವುದೇ ಬೆಂಬಲ ಸಿಗದಿದ್ದರೆ ಎಐಸಿಸಿ ಅಧ್ಯಕ್ಷೆಯವರ ಮನೆಬಾಗಿಲನ್ನು ನ್ಯಾಯಕ್ಕಾಗಿ ಕೋರಬೇಕಾಗುತ್ತದೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ತಮ್ಮ ಅಸಮಾಧಾನ, ಅಸಹನೆ ಹೊರಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com