ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ, ಶಿವಕುಮಾರ್ ಪಣತೊಟ್ಟಿದ್ದಾರೆ: ಎಚ್.ಡಿ. ಕುಮಾರಸ್ವಾಮಿ
ಉಪ ಚುನಾವಣೆಗೆ ಇನ್ನೂ ಕೇವಲ ಮೂರು ವಾರಗಳ ಸಮಯ ಮಾತ್ರ ಇದೆ. ಇದೇ ವೇಳೆ ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿ ಹಾಯ್ದಿದ್ದಾರೆ
Published: 16th October 2020 07:32 AM | Last Updated: 16th October 2020 11:56 AM | A+A A-

ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಉಪ ಚುನಾವಣೆಗೆ ಇನ್ನೂ ಕೇವಲ ಮೂರು ವಾರಗಳ ಸಮಯ ಮಾತ್ರ ಇದೆ. ಇದೇ ವೇಳೆ ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿ ಹಾಯ್ದಿದ್ದಾರೆ.
ಒಂದು ವಾರದಲ್ಲಿ ಎರಡು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕಿಡಿ ಕಾರಿದ್ದಾರೆ. ಜೆಡಿಎಸ್ ಮುಗಿಸಲು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಜೆಡಿಎಸ್ 7 ಶಾಸಕರನ್ನು ಕರೆದುಕೊಂಡರು, ಆದರೂ ಜೆಡಿಎಸ್ ಇನ್ನೂ ಸಮರ್ಥವಾಗಿದೆ ಎಂದ ಅವರು ಜೆಡಿಎಸ್ ಸಮಾಧಿ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಸಮಾಜದ (ಒಕ್ಕಲಿಗ) ಮುಖಂಡರನ್ನು ಸೆಳೆಯುವ ಯತ್ನ ಮಾಡಿರುವವರಿಗೆ ಹಿಂದೆ ಯಾಕೆ ಸಮಾಜ ನೆನಪಾಗಲಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೆಸರು ಹೇಳದೇ ಪ್ರಶ್ನಿಸಿದರು ‘ಈ ಹಿಂದೆ ಅವರು ಯಾರಿಗೆ ರಕ್ಷಣೆ ಕೊಟ್ಟಿದ್ದಾರೆ. ಸಮಾಜದವರ ಕಷ್ಟಸುಖದಲ್ಲಿ ಭಾಗಿಯಾಗಿದ್ದರೆ ಎಂಬುದನ್ನು ಹೇಳಲಿ. ಈಗ ಅವರು ಕರೆದ ಕೂಡಲೇ ಕಿಂದರಜೋಗಿಯ ಹಿಂದೆ ಹೋದಂತೆ ಹೋಗಲು ಅವರು ಕೊಟ್ಟ ಕಾಣಿಕೆ ಏನು?’ ಎಂದು ಕುಟುಕಿದರು.
ನಮ್ಮ ಪಕ್ಷದ ನಾಯಕರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಮುಗಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೂ ಏಳು ಶಾಸಕರನ್ನು ನಮ್ಮ ಪಕ್ಷದಿಂದ ಸೆಳೆದಿದ್ದರು. ಕಾಂಗ್ರೆಸ್ ನಾಯಕರಿಂದ ಹೊಸ ನಾಟಕ ಶುರುವಾಗಿದ್ದು, ಇದರಿಂದ ಕೂಡ ಜನರ ಹೃದಯವನ್ನು ಗೆಲ್ಲಲಾಗದು’ ಎಂದರು
ಇತ್ತೀಚೆಗೆ ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಶಿರಾ ಮತ್ತು ಆರ್ ಆರ್ ನಗರದಲ್ಲಿ ಬಿಜೆಪಿ ಜೊತೆ ಜೆಡಿಎಸ್ ನೇರ ಹೋರಾಟವಿಲ್ಲ ಎಂಬುದು ಸ್ಪಷ್ಟ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.