ಗದ್ದಲ ಸೃಷ್ಟಿಸಿ ಚುನಾವಣೆ ತಡೆಯಲು ಕಾಂಗ್ರೆಸ್ ಯತ್ನ: ಮುನಿರತ್ನ; ಸಿದ್ದರಾಮಯ್ಯ ಟೆಸ್ಟ್ ಡ್ರೈವ್ ಕಾರ್ ಎಂದ ಆರ್ ಅಶೋಕ್

ಆರ್ ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಲಭೆ, ಗದ್ದಲಗಳನ್ನು ಸೃಷ್ಟಿಸಿ ಉಪ ಚುನಾವಣೆ ಶಾಂತಿಯುತವಾಗಿ ನಡೆಯದಂತೆ ಮಾಡಲು ಕ್ಷೇತ್ರದ ಹೊರಗಿನಿಂದ ಮೂರ್ನಾಲ್ಕು ಸಾವಿರ ಜನರನ್ನು ಕಾಂಗ್ರೆಸ್ ನಾಯಕರು ಕರೆತಂದಿದ್ದಾರೆ...

Published: 21st October 2020 05:03 PM  |   Last Updated: 21st October 2020 05:09 PM   |  A+A-


Munirathna

ಮುನಿರತ್ನ

Posted By : Lingaraj Badiger
Source : UNI

ಬೆಂಗಳೂರು: ಆರ್ ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಲಭೆ, ಗದ್ದಲಗಳನ್ನು ಸೃಷ್ಟಿಸಿ ಉಪ ಚುನಾವಣೆ ಶಾಂತಿಯುತವಾಗಿ ನಡೆಯದಂತೆ ಮಾಡಲು ಕ್ಷೇತ್ರದ ಹೊರಗಿನಿಂದ ಮೂರ್ನಾಲ್ಕು ಸಾವಿರ ಜನರನ್ನು ಕಾಂಗ್ರೆಸ್ ನಾಯಕರು ಕರೆತಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಮಖಂಡರ ಬಿಜೆಪಿ ಸೇರ್ಪಡೆ ವೇಳೆ ಮಾತನಾಡಿದ ಅವರು, ಆರ್ ಆರ್ ನಗರ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಯಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಹೊರಗಿನಿಂದ ಬಂದವರು ಶಾಂತಿಯುತ ಚುನಾವಣೆ ನಡೆಯಬಾರದು. ಗೊಂದಲ, ಗಲಭೆ ಸೃಷ್ಟಿಸಿ ಬಿಜೆಪಿ ಪಕ್ಷದವರು ನಮಗೆ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಆರೋಪ ಹೊರಿಸಿ ಅನುಕಂಪ ಪಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನ್ಯಾಯಯುತ ಚುನಾವಣೆ ನಡೆಸಲು ಬಿಜೆಪಿ ಹಾಗೂ ಪಕ್ಷದ ಕಾರ್ಯಕರ್ತರು ಸಿದ್ದರಿದ್ದೇವೆ. ನೀವೂ ಕೂಡ ನ್ಯಾಯಯುತವಾಗಿ ಚುನಾವಣೆ ಎದುರಿಸಲು ಸಿದ್ದರಾಗಬೇಕು. ನಾವು ಕೆಟ್ಟವರು ಎಂದು ಬಿಂಬಿಸಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಜೆ.ಪಿ.ಪಾರ್ಕ್‌ನಲ್ಲಿ ಪ್ರತಿ ಮನೆಗೆ ಹೋಗಿ ಓಟರ್ ಐಡಿ ಪಡೆದು ಒಂದು ಕಡೆ ಇರಿಸಿ ಇದನ್ನು ಮುನಿರತ್ನ ಮಾಡುತ್ತಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ. ಮಾಜಿ ಸಂಸದ ಧ್ರುವ ನಾರಾಯಣ ನೇತೃತ್ವದಲ್ಲಿ ಈಗ ನಂದಿನಿ ಲೇಔಟ್ ನಲ್ಲಿಯೂ ಅದೇ ರೀತಿ ಮಾಡಲಾಗುತ್ತಿದೆ. ಜಾತಿ, ಧರ್ಮದ ದೂರವಾಣಿ ಸಂಖ್ಯೆ ಪಡೆದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಕ್ಷೇತ್ರದಲ್ಲಿ ಹಲ್ಲೆ, ದೊಂಬಿ ನಡೆದಿಲ್ಲ. ಇದು ಶಾಂತಿಯುತ ಕ್ಷೇತ್ರ. ಇದನ್ನು ಹೀಗೆಯೇ ಉಳಿಸಿ ಎಂದು ಮನವಿ ಮಾಡಿದರು.

ಮೂರರಿಂದ ನಾಲ್ಕು ಸಾವಿರ ಜನ ಹೊರಭಾಗದಿಂದ ಬಂದಿದ್ದಾರೆ. ಇಷ್ಟು ಜನ ಹೊರಭಾಗದಿಂದ ಬಂದು ಚುನಾವಣಾ ಕೆಲಸ ಮಾಡುವ ಅಗತ್ಯವಿಲ್ಲ. ವಿದ್ಯಾವಂತರ ಕ್ಷೇತ್ರದಲ್ಲಿ ಹೊರಗಡೆಯವರು ಬಂದು ಕೆಲಸ ಮಾಡಬೇಕಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಮುನಿರತ್ನ ಮನವಿ ಮಾಡಿದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಟೆಸ್ಟ್ ಡ್ರೈವ್ ಕಾರನ್ನು ಟೆಸ್ಟ್ ಮಾಡಲು ಮಾತ್ರ ಇರಿಸಲಾಗುತ್ತದೆ. ಅದನ್ನು ಯಾರೂ ಮಾರಾಟ ಮಾಡಲ್ಲ. ಜನರು ಕೂಡ ಅದನ್ನು ತೆಗೆದುಕೊಳ್ಳಲ್ಲ, ಅದೇ ರೀತಿ ಸಿದ್ದರಾಮಯ್ಯ ಅವರನ್ನು ಟೆಸ್ಟ್ ಡ್ರೈವ್ ಕಾರ್ ರೀತಿ ಕಾಂಗ್ರೆಸ್‌ನವರು ಇರಿಸಿಕೊಂಡಿದ್ದಾರೆ. ಅಗತ್ಯವಿದ್ದಾಗ ಬಳಸಿ ಬಿಟ್ಟು ಬಿಡುತ್ತಾರೆ ಎಂದರು. 

ಇನ್ನು ಕನಕಪುರದ ಬಂಡೆ ಎಂದು ಡಿ.ಕೆ ಶಿವಕುಮಾರ್ ಅವ​​​ರನ್ನು ಕರೆಯುತ್ತಾರೆ. ಬಂಡೆಗೆ ಹೃದಯವಿಲ್ಲ, ಅನುಕಂಪವೂ ಇರಲ್ಲ. ಬಂಡೆಯನ್ನು ಯಾರೂ ಮನೆಗೆ ಕೊಂಡೊಯ್ಯಲ್ಲ. ಮುಂಬೈ ಹೋಟೆಲ್ ಮುಂದೆ ಅವರು ರಾಜೀನಾಮೆ ನೀಡಿದ್ದ ಶಾಸಕರನ್ನು ಕರೆತರಲು ಹೋಗಿ ಮಾಡಿದ್ದೆಲ್ಲ ನಾಟಕ ಎಂದು ಹೆಚ್​​ಡಿಕೆ ಈಗಾಗಲೇ ಡಿಕೆಶಿಗೆ ಹೇಳಿದ್ದಾರೆ ಎಂದು ಅಶೋಕ್​ ಟಾಂಗ್​ ನೀಡಿದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಜಗಳ ಶುರುವಾಗಿದೆ. ಶಿರಾದಲ್ಲಿ ಡಿ.ಬಿ.ಜಯ ಚಂದ್ರ ಸೋಲಬೇಕು, ಆರ್‌.ಆರ್.ನಗರದಲ್ಲಿ ಸಿದ್ದರಾಮಯ್ಯಗೆ ಕುಸುಮಾ ಸೋಲಬೇಕು ಇದು ಅವರ ಒಳಜಗಳಾಗಿದೆ ಎಂದು ವ್ಯಂಗ್ಯವಾಡಿದರು.

ಶಿರಾದಲ್ಲಿ ಯಾಕೆ ಜಯಚಂದ್ರಗೆ ಟಿಕೆಟ್ ನೀಡಿದಿರಿ? ಎಂದು ರಾಜ್ಯ ಉಸ್ತು ವಾರಿ ಸುರ್ಜೇವಾಲ ಗದರಿದ್ದರು ಎಂದು ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯಗೆ ಮಾಧ್ಯಮದ ಮುಂದೆ ಕಿವಿಯಲ್ಲಿ ಹೇಳುವ ರೀತಿ ನಾಟಕ ಮಾಡಿದ್ದಾರೆ. ಈ ವಿಷಯ ಮಾಧ್ಯಮಕ್ಕೆ ಗೊತ್ತು ಮಾಡುವುದೇ ಶಿವಕುಮಾರ್‌ ಹುನ್ನಾರವಾಗಿತ್ತು ಎಂದರು.

ಮುನಿರತ್ನ ಹೇಳಿರುವಂತೆ ಕಾಂಗ್ರೆಸ್​​ನವರು ಓಟರ್ ಐಡಿ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರ.ಯಾರೂ ಕೂಡ ತಮ್ಮ ಮಾಹಿತಿಯನ್ನು ರಾಜಕಾರಣಿಗಳಿಗೆ ನೀಡಬಾರದು ಎಂದು ಜನತೆಗೆ ಸಚಿವ ಆಶೋಕ್ ಮನವಿ ಮಾಡಿದರು.

Stay up to date on all the latest ರಾಜಕೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp