ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಗೆ ಸೋಲು, ಶಿರಾದಲ್ಲಿ ಬಿಜೆಪಿಯೊಂದಿಗೆ ತೀವ್ರ ಪೈಪೋಟಿ: ಪಕ್ಷದ ಆಂತರಿಕ ಸಮೀಕ್ಷೆ

ರಾಜ ರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ಕ್ಷೇತ್ರದ ಉಪ ಚುನಾವಣೆಗೆ ಇನ್ನು ಕೇವಲ ಒಂದು ವಾರ ಬಾಕಿಯಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸೋದರ ಸಂಸದ ಡಿ ಕೆ ಸುರೇಶ್ ರಾಜ ರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯನ್ನು ವೈಯಕ್ತಿಕ ಹೋರಾಟವಾಗಿ ತೆಗೆದುಕೊಂಡಿದ್ದಾರೆ.
ರಾಜ ರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಕುಸುಮಾ ಪ್ರಚಾರ
ರಾಜ ರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಕುಸುಮಾ ಪ್ರಚಾರ

ಬೆಂಗಳೂರು: ರಾಜ ರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ಕ್ಷೇತ್ರದ ಉಪ ಚುನಾವಣೆಗೆ ಇನ್ನು ಕೇವಲ ಒಂದು ವಾರ ಬಾಕಿಯಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸೋದರ ಸಂಸದ ಡಿ ಕೆ ಸುರೇಶ್ ರಾಜ ರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯನ್ನು ವೈಯಕ್ತಿಕ ಹೋರಾಟವಾಗಿ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಉಪ ಚುನಾವಣೆ ತೀವ್ರ ಪೈಪೋಟಿಯಿದೆ.

ಆದರೆ ಪಕ್ಷದ ಆಂತರಿಕ ಮೌಲ್ಯಮಾಪನದಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ರಾಜ ರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಸೋಲು ಕಾಣಲಿದ್ದು, ಶಿರಾದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೋಟಿಯಿರುತ್ತದೆ ಎಂದು ಹೇಳಲಾಗುತ್ತಿದೆ.

ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಚಾರ ತೀವ್ರಗೊಳಿಸಿದ್ದು ಕೂಡ ಕಾಂಗ್ರೆಸ್ ನ್ನು ಆತಂಕಕ್ಕೀಡುಮಾಡಿದೆ. ರಾಜ ರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಕುಸುಮಾ ಸ್ಥಳೀಯ ಜನರೊಂದಿಗೆ ಸಂಪರ್ಕ ಹೊಂದಿಲ್ಲ, ಇದರಿಂದ ಮತದಾರರ ಮತ ಸೆಳೆಯುವುದು ಕಾಂಗ್ರೆಸ್ ಗೆ ಕಷ್ಟ. ಆದರೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಾಕಷ್ಟು ಸವಾಲು ಒಡ್ಡುತ್ತಿದೆ.

ಉಪ ಚುನಾವಣೆಗಳು ಸಾಮಾನ್ಯವಾಗಿ ಆಡಳಿತಾರೂಢ ಸರ್ಕಾರ ಪರ ಇರುತ್ತದೆ ಎಂದು ಇದುವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಮುನಿರತ್ನ ಗೆದ್ದರೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಬಹುದು ಎಂಬ ಕ್ಷೇತ್ರದ ಮತದಾರರ ಲೆಕ್ಕಾಚಾರ ಕಾಂಗ್ರೆಸ್ ಗೆ ಈ ಬಾರಿಯ ಚುನಾವಣೆ ಕಷ್ಟವಾಗಿದೆ. ಇಲ್ಲಿ ಕಾಂಗ್ರೆಸ್ ಗೆ 25 ಸಾವಿರದಿಂದ 35 ಸಾವಿರ ಅಂತರಗಳಲ್ಲಿ ಸೋಲಾಗಬಹುದು ಎಂದು ಹೇಳಲಾಗುತ್ತಿದೆ. ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಶಿವಕುಮಾರ್ ಇಂದಿನಿಂದ ನಿಗದಿತ ಪ್ರಚಾರ ನಡೆಸುತ್ತಿದ್ದಾರೆ.

ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿರುವ ನಾಯಕರನ್ನು ಭೇಟಿ ಮಾಡಿ ಮತ್ತೆ ಕಾಂಗ್ರೆಸ್ ಗೆ ಕರೆತರುವ ಕೆಲಸದಲ್ಲಿ ಡಿ ಕೆ ಶಿವಕುಮಾರ್ ನಿರತರಾಗಿದ್ದಾರೆ. ಶಿರಾದಲ್ಲಿ ಉಪ ಮುಖ್ಯಮಂತ್ರಿ ಸೇರಿದಂತೆ 8 ಮಂದಿ ಉಸ್ತುವಾರಿ ನಾಯಕರನ್ನು ಬಿಜೆಪಿ ನಿಯೋಜಿಸಿದೆ. ಶಿರಾದಲ್ಲಿ ಬಿಜೆಪಿ ಇದುವರೆಗೆ ಗೆದ್ದಿಲ್ಲ, ಈ ಬಾರಿ ಶತಾಯಗತಾಯ ಗೆಲ್ಲಬೇಕು ಎಂಬ ಪ್ರಯತ್ನದಲ್ಲಿದೆ. ಸಿದ್ದರಾಮಯ್ಯ, ಡಾ ಜಿ ಪರಮೇಶ್ವರ್, ರಾಜಣ್ಣ ಅವರೆಲ್ಲರೂ ಭಿನ್ನಮತ ಬದಿಗೊತ್ತಿ ಒಟ್ಟಾಗಿ ಶಿರಾದಲ್ಲಿ ಕೆಲಸ ಮಾಡಿ ಅಭ್ಯರ್ಥಿ ಟಿ ಬಿ ಜಯಚಂದ್ರ ಅವರನ್ನು ಗೆಲ್ಲಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.

ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡರೇ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಜೆಡಿಎಸ್ ಕಡೆಯಿಂದ ಕಾಂಗ್ರೆಸ್ ಗೆ ಆತಂಕವಾಗಿದೆ. ಮೂರೂ ಪಕ್ಷಗಳ ನಾಯಕರು ಒಕ್ಕಲಿಗರಾಗಿದ್ದು ಕಾಂಗ್ರೆಸ್ ನ ಮತಗಳನ್ನು ಜೆಡಿಎಸ್ ಸೆಳೆಯುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com