25 ವರ್ಷದ ಹಿಂದೆ ತೀರಿ ಹೋದ ತಾಯಿಯನ್ನು ಹೇಗೆ ಮಾರಾಟ ಮಾಡಲಿ?: ಮುನಿರತ್ನ ಕಣ್ಣೀರು

ಆರ್.ಆರ್ ನಗರ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಬಿಜೆಪಿ- ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪ ತಾರಕ್ಕೇರಿದೆ.
ಮುನಿರತ್ನ
ಮುನಿರತ್ನ

ಬೆಂಗಳೂರು: ಆರ್.ಆರ್ ನಗರ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಬಿಜೆಪಿ- ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪ ತಾರಕ್ಕೇರಿದೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು, ಆರ್ ಆರ್ ನಗರದಲ್ಲಿ ನಡೆದ ಗಲಾಟೆಯ ಬಗ್ಗೆ ಸ್ಪಷ್ಟನೆ ನೀಡಿ, 25 ವರ್ಷದ ಹಿಂದೆ ತೀರಿ ಹೋದ ನನ್ನ ತಾಯಿ ಬಗ್ಗೆ ಮಾತನಾಡಬೇಡಿ ಎಂದು ಕಣ್ಣೀರು ಹಾಕಿದ್ದಾರೆ.

ಸತ್ತು ಹೋಗಿರುವ ತಾಯಿಯನ್ನು ಹೇಗೆ ಮಾರಾಟ ಮಾಡಲಿ, ಮಾಡಲು ಸಾಧ್ಯವೇ? ನಿಮಗೆ ಕೈಮುಗಿಯುತ್ತೇನೆ ನನ್ನ ಬಗ್ಗೆ ಎಷ್ಟು ಬೇಕಾದರೂ ಟೀಕೆ ಮಾಡಿ ಆದರೆ ದಯವಿಟ್ಟು ನನ್ನ ತಾಯಿಯ ಬಗ್ಗೆ ಟೀಕೆ, ಕೊಂಕು ಮಾತು ಬೇಡ ಎಂದು ಕೈ ಮುಗಿದು, ಕಣ್ಣೀರು ಹಾಕಿದರು. 

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ನನ್ನ ತಾಯಿ ಬಗ್ಗೆ ಮಾತನಾಡಿದರು. ಆದರೂ ನಮ್ಮ ಕಾರ್ಯಕರ್ತರು ಧರಣಿ ನಡೆಸಿದ್ದಾರೆಯೇ ಹೊರತು ಶಾಂತಿ ಕದಡುವ ಕೆಲಸ ಮಾಡಿಲ್ಲ ಎಂದರು. ನಾನು 10 ವರ್ಷಗಳ ಕಾಲ ಕಾಂಗ್ರೆಸ್ ಶಾಸಕನಾಗಿದ್ದೇನೆ ಆಗ ನಿಮಗೆ ನಾನು ಯಾರು? ಎಂತಹವನು ಎಂಬುದು ಗೊತ್ತಾಗಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.

ನನ್ನ ಬಗ್ಗೆ ಮಾತನಾಡಿ, ನನ್ನ ಬಗ್ಗೆ ಬೇಕಾದಷ್ಟು ಟೀಕೆ ಮಾಡಿ ಆದರೆ ಸತ್ತು ಹೋಗಿರುವ ತಾಯಿ ಬಗ್ಗೆ ಬಹಳ ಹಗುರವಾಗಿ ಮಾತನಾಡ ಬೇಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನ್ನ ತಾಯಿ 25 ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ. ಅವರನ್ನು ಮಾರಾಟ ಮಾಡಲಾಗಿದೆ ಎಂದು ನೀವು ಯಾವ ಆಧಾರದಲ್ಲಿ ಹೇಳುತ್ತೀರಿ? ದಯಮಾಡಿ ತಾಯಿಯ ಬಗ್ಗೆ ಹಗುರವಾಗಿ ಮಾತನಾಡ ಬೇಡಿ ಎಂದು ಮುನಿರತ್ನ ಭಾವುಕರಾಗಿ ಕಣ್ಣಿರು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com