ಸಾರ್ವಜನಿಕವಾಗಿ ಕಣ್ಣೀರು ಹಾಕುವ ಸ್ಥಿತಿಯಲ್ಲಿ ಕಾಂಗ್ರೆಸ್‌ನವರು ನನ್ನನ್ನು ಇಟ್ಟಿದ್ದರು: ಹೆಚ್.ಡಿ. ಕುಮಾರಸ್ವಾಮಿ
ಕಾಂಗ್ರೆಸ್ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭವೇ ಹೊರತು ಜನರ ಕಲ್ಯಾಣವಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Published: 29th October 2020 02:57 PM | Last Updated: 29th October 2020 02:57 PM | A+A A-

ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭವೇ ಹೊರತು ಜನರ ಕಲ್ಯಾಣವಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ವ್ಯಾಪ್ತಿಯ ಲಕ್ಷ್ಮೀದೇವಿ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಇದ್ದಷ್ಟು ದಿನ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಕಾಂಗ್ರೆಸ್ ಶಾಸಕರೊಬ್ಬರು ಮುನಿಸಿ ಕೊಂಡಿದ್ದರು. ಕೃಷ್ಣಾದಲ್ಲಿ ಜನರ ಸಮಸ್ಯೆ ಆಲಿಸಿ, ನನ್ನ ಕಚೇರಿಗೆ ಹೋಗಿದ್ದೆ.
ಆಗ ನನ್ನ ಕಚೇರಿಗೆ ಬಂದ ಕಾಂಗ್ರೆಸ್ ಶಾಸಕರೊಬ್ಬರು ನಿಮಗೆ ಎಷ್ಟು ಹೊತ್ತು ಕಾಯೋದು ಎಂದು ಅವರು ತಂದಿದ್ದ 10-12 ಪತ್ರಗಳನ್ನು ಇಸ್ಪೀಟ್ ಎಲೆಯಂತೆ ಬಿಸಾಡಿದ್ದರು.
ಇಂತಹ ಹಲವಾರು ಕಿರುಕುಳ ಅವಮಾನ ಅಪಮಾನಗಳನ್ನೆಲ್ಲ ಸಹಿಸಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ಸಿಗರು ನೀಡಿದ ಕಿರುಕುಳದ ನಡುವೆಯೂ ರೈತರ ಹಿತ ಕಾಯಲು 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಒಬ್ಬ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರೆ ಅದು ನಾನು ಮಾತ್ರ. ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ನವರು ನನ್ನನ್ನು ಇಟ್ಟಿದ್ದರು ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು ನಗರದ ಅಭಿವೃದ್ಧಿಗೆ ದುಡ್ಡು ತಂದವರು ಯಾರೋ, ಹೆಸರು ಮಾಡಿ ಲಾಭ ಪಡೆದಿದ್ದು ಇನ್ಯಾರೋ? ತಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಐಟಿ ವಲಯಕ್ಕೆ ಹೊಸ ಆಯಾಮ ನೀಡಿದ್ದರು. ಇದರಿಂದ ಪ್ರೇರಿತಗೊಂಡ ದಕ್ಷಿಣ ಆಫ್ರಿಕಾದಲ್ಲಿ ದೇವೇಗೌಡರು ಜಾರಿಗೊಳಿಸಿದ್ದ ತ್ವರಿತ ನೀರಾವರಿ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭಕ್ಕೆ ನಾನು ಕಾರಣ ಎಂದರು.
ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಈ ಕ್ಷೇತ್ರದ ಮನೆ ಮಗ ನಾನು. ಹನುಮಂತರಾಯಪ್ಪ ಒಬ್ಬ ಒಕ್ಕಲಿಗನಿಗೆ ಒಳಿತನ್ನು ಮಾಡಿಲ್ಲ. ಹನುಮಂತರಾಯಪ್ಪ ಒಬ್ಬ ಸಮಯ ಸಾಧಕ. ಕಾಂಗ್ರೆಸ್‌ನವರು ಜಾತಿ ರಾಜಕೀಯ ಮಾಡುತ್ತಿದ್ದಾರೆ. ಇವತ್ತು ಕೊರೊನಾದಿಂದ ಜನ ಬೀದಿಯಲ್ಲೇ ಸಾಯುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಮಳವಳ್ಳಿ ಶಾಸಕ ಅನ್ನದಾನಿ, ಪರಿಷತ್ ಸದಸ್ಯ ರಮೇಶ್ ಗೌಡ, ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಆರ್‌ಆರ್ ನಗರದ ಜೆಡಿಎಸ್ ಅಧ್ಯಕ್ಷ ಆರ್.ಚನ್ನಕೇಶವಮೂರ್ತಿ ಮತ್ತು ಅನೇಕ ಮುಖಂಡರು ಇದ್ದರು.