ಉಪಚುನಾವಣೆ: ನಾಯಕತ್ವ ಸ್ಥಾನ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಸಿಎಂ ಯಡಿಯೂರಪ್ಪ!

ರಾಜ್ಯದಲ್ಲಿ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದೊಳಗಿನ ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳಲು ಈ ಚುನಾವಣೆ ಅವಕಾಶ ನೀಡಿದಂತಾಗಿದೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದೊಳಗಿನ ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳಲು ಈ ಚುನಾವಣೆ ಅವಕಾಶ ನೀಡಿದಂತಾಗಿದೆ. 

ಈಗಾಗಲೇ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಎದ್ದಿದ್ದು, ಇಂತಹ ಸಂದರ್ಭದಲ್ಲಿಯೇ ಚುನಾವಣೆ ಎದುರಾಗಿರುವುದು ಯಡಿಯೂರಪ್ಪ ಅವರಿಗೆ ಹಾಗೂ ಅವರ ನಾಯಕತ್ವಕ್ಕೆ ತಮ್ಮ ಬಲವನ್ನು ಸಾಬೀತುಪಡಿಸಲು ಅವಕಾಶ ಸಿಕ್ಕಂತಾಗಿದೆ. ಒಕ್ಕಲಿಗ ಸಮುದಯದ ಪ್ರಾಬಲ್ಯವಿರುವ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ  ನವೆಂಬರ್ 3 ರಂದು ಚುನಾವಣೆ ನಡೆಯಲಿದೆ. 

ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲು ಪಣತೊಟ್ಟಿರುವ ಯಡಿಯೂರಪ್ಪ ಅವರು ಶುಕ್ರವಾರ ಶಿರಾದಲ್ಲಿ ಹಾಗೂ ಶನಿವಾರ ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರಗಳಲ್ಲಿಯೂ ಪರಿಣಾಮಕಾರಿಯಾಗಿ ಪ್ರಚಾರ ನಡೆಸಲಿದ್ದಾರೆ. 

ಕಳೆದ ನವೆಂಬರ್ ತಿಂಗಳಿನಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಈ ವೇಳೆ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದರೆ. ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಶಾಸಕರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಿದ್ದರು. 

ಇದರಂತೆ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಸರ್ಕಾರದ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್, ಕೊರೋನಾ ನಿರ್ವಹಣೆ, ಪ್ರವಾಹ ಪರಿಸ್ಥಿತಿ, ಕೃಷಿ ಮಸೂದೆ, ಎಪಿಎಂಸಿ ಕಾಯ್ದೆ, ಆರ್ಥಿಕ ನಷ್ಟ ವಿಚಾರಗಳನ್ನು ಹಿಡಿದು ಸರ್ಕಾರದ ವಿಫಲತೆ ಕುರಿತು ಜನರಿಗೆ ಮಾಹಿತಿ ನೀಡಿ ಮತಯಾಚನೆ ಮಾಡುತ್ತಿದೆ. 

ಈ ಹಿಂದೆ ಬಿಜೆಪಿ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ರಾಜ್ಯ ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ್ದರು. ಶೀಘ್ರದಲ್ಲಿಯೇ ಯಡಿಯೂರಪ್ಪ ಅವರು ನಾಯಕತ್ವ ಸ್ಥಾನದಿಂದ ಇಳಿಯಲಿದ್ದಾರೆಂದು ಹೇಳಿದ್ದರು. 

ಪ್ರಸ್ತುತ ಎದುರಾಗಿರುವ ಎರಡೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದೇ ಆದರೆ, ಯಡಿಯೂರಪ್ಪ ಅವರ ಬಗ್ಗೆ ಟೀಕೆ ಮಾಡುತ್ತಿದ್ದವರ ಬಾಯಿಗೆ ಬೀಗ ಹಾಕಿದಂತಾಗುತ್ತದೆ. ಇದಕ್ಕಾಗಿಯೇ ಎರಡೂ ಕ್ಷೇತ್ರದಲ್ಲಿಯೂ ಜನರ ಮನಗೆಲ್ಲಲು ಬಿಜೆಪಿ ಸತತ ಯತ್ನಗಳನ್ನು ನಡೆಸುತ್ತಿದೆ. 

ಕಳೆದ ವರ್ಷ ಸರ್ಕಾರ ರಚಿಸುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿತ್ತು. ಈ ಬಾರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಗೆಲುವು ಸಾಧಿಸಿದ್ದೇ ಆದರೆ, ಬಿಜೆಪಿಗೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ. ಇದುವರೆಗೂ ಶಿರಾ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ಉಪ ಚುನಾವಣೆಯಲ್ಲಿ ಗೆದ್ದಿದ್ದೇ ಆದರೆ, ಮುಖ್ಯಮಂತ್ರಿಗಳಿಗೆ ಹೆಚ್ಚುವರಿಯಾಗಿ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com